• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ನ್ಯಾಯಾಲಯದಿಂದ ಎಸಿಬಿ ರದ್ದು, ಸರ್ಕಾರದ ಗೊಂದಲದಿಂದ ಲೋಕಾಯುಕ್ತ ಅತಂತ್ರ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌, 25: ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿತ್ತು. ಹನ್ನೆರಡು ದಿನಗಳಾದರೂ ರಾಜ್ಯ ಸರ್ಕಾರ ಇನ್ನೂ ಸ್ಪಷ್ಟ ನಿರ್ದೇಶನ ಹೊರಡಿಸದಿರುವುದರಿಂದ ಎಸಿಬಿ, ಲೋಕಾಯುಕ್ತ ಎರಡೂ ಸಂಸ್ಥೆಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ. ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವ ಬಗ್ಗೆ ಬಾಯಿ ಮಾತಿನ ಹೇಳಿಕೆ ನೀಡುತ್ತಿದೆಯೇ ವಿನಃ ಕಾರ್ಯರೂಪಕ್ಕೆ ತರುವುದಕ್ಕೆ ಆಸಕ್ತಿಯನ್ನು ತೋರುತ್ತಿಲ್ಲ. ಇದರಿಂದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಯಾರಿಗೆ ದೂರು ನೀಡುವುದು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಶುರುವಾಗಿದೆ.

ಹೈಕೋರ್ಟ್ ತೀರ್ಪಿನ ನಂತರ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಗಳಲ್ಲಿ ದೂರುಗಳು ದಾಖಲಾಗುತ್ತಿಲ್ಲ. ಒಮ್ಮೆ ದೂರು ಸ್ವೀಕರಿಸಿದರೂ ಕೂಡ ಅಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದರೆ, ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವುದಕ್ಕೆ ಇದುವರೆಗೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಹಾಗಾಗಿ ಎರಡೂ ಸಂಸ್ಥೆಗಳ ಅಧಿಕಾರಿಗಳ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ.

ಮಂಡ್ಯ ನಗರದ ಹಲವೆಡೆ ಬೃಹತ್ ಮರಗಳ ಹನನ; ಪರಿಸರ ಪ್ರೇಮಿಗಳ ಅಸಮಾಧಾನ ಮಂಡ್ಯ ನಗರದ ಹಲವೆಡೆ ಬೃಹತ್ ಮರಗಳ ಹನನ; ಪರಿಸರ ಪ್ರೇಮಿಗಳ ಅಸಮಾಧಾನ

 ಸರ್ಕಾರದ ನಿಲುವಿಗೆ ಜನರ ಅಸಮಾಧಾನ

ಸರ್ಕಾರದ ನಿಲುವಿಗೆ ಜನರ ಅಸಮಾಧಾನ

ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ಆದರೆ ಇದುವರೆಗೆ ಸರ್ಕಾರ ಆ ಬಗ್ಗೆಯೂ ನಿಖರ ನಿರ್ದೇಶನ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಪ್ರಕರಣಗಳು ವಿಲೇವಾರಿ ಆಗದೆ ನೆನೆಗುದಿಗೆ ಬೀಳುವಂತಾಗಿದೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದರೊಂದಿಗೆ ಶಕ್ತಿ ತುಂಬುವುದಾಗಿ ಸರ್ಕಾರ ಬಾಯಿ ಮಾತಿನಲ್ಲಷ್ಟೇ ಹೇಳುತ್ತಿದೆ. ಆ ಸಂಸ್ಥೆಗೆ ಶಕ್ತಿ ತುಂಬಿದರೆ ನಮಗೆ ಕಂಟಕ ಆಗುತ್ತದೆ ಎಂಬ ಆತಂಕವೂ ಸರ್ಕಾರಕ್ಕೆ ಇದೆ. ಹೀಗಾಗಿ ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಹೇಳುತ್ತಾ ದಿನಗಳನ್ನು ದೂಡುತ್ತಲೇ ಇದೆ. ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಯಥಾ ಸ್ಥಿತಿಯನ್ನು ಕಾಪಾಡುವುದಕ್ಕೆ ನಿರ್ಧರಿಸಿದ್ದಾರೆ.

 ದೂರು ಸ್ವೀಕರಿಸದ ಎರಡು ಸಂಸ್ಥೆಗಳು

ದೂರು ಸ್ವೀಕರಿಸದ ಎರಡು ಸಂಸ್ಥೆಗಳು

ಭ್ರಷ್ಟಾಚಾರ ನಿಗ್ರಹದಳ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ನಂತರ ಸಾರ್ವಜನಿಕರಿಂದ ಕೇವಲ ಕುಂದುಕೊರತೆಗಳ ಸಂಬಂಧ ಎರಡೂ ಸಂಸ್ಥೆಗಳು ದೂರು ಸ್ವೀಕರಿಸುತ್ತಿವೆ ಅಷ್ಟೇ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ನೀಡುವ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಒಮ್ಮೆ ದೂರು ಸ್ವೀಕರಿಸಿದರೂ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಎಸಿಬಿ ವ್ಯವಸ್ಥೆಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಬಲ ತುಂಬುವ ಪ್ರಕ್ರಿಯೆಗೆ ಸರ್ಕಾರ ಚುರುಕು ನೀಡದಿರುವುದರಿಂದ ಎಲ್ಲೆಡೆ ಗೊಂದಲ ಮನೆ ಮಾಡಿದೆ.

ಎರಡೂ ಸಂಸ್ಥೆಗಳ ಅಕಾರಿಗಳು ನಿತ್ಯ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಆದರೆ ದಾಖಲಾಗಿರುವ ಪ್ರಕರಣಗಳ ಕುರಿತಂತೆ ಯಾವುದೇ ಪ್ರಕ್ರಿಯೆಗಳನ್ನೂ ನಡೆಸುತ್ತಿಲ್ಲ. ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಯಾವ ಯಾವ ಹುದ್ದೆಯಲ್ಲಿದ್ದರೆಯೋ ಆ ಅಧಿಕಾರಿಗಳು ಅಲ್ಲೇ ಮುಂದುವರೆದಿದ್ದಾರೆ. ಅವರನ್ನು ಪೊಲೀಸ್ ಇಲಾಖೆಗೆ ಅಥವಾ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಗಳು ನಡೆದಿಲ್ಲ. ಇನ್ನು ಲೋಕಾಯುಕ್ತ ಸಂಸ್ಥೆಯಲ್ಲೂ ಯಾವ ಬದಲಾವಣೆಯನ್ನೂ ಮಾಡದೆ ಸರ್ಕಾರ ಕೈಚೆಲ್ಲಿರುವುದರಿಂದ ಕೆಲಸಗಳು ನೆನೆಗುದಿಗೆ ಬಿದ್ದಿವೆ.

 ಲೋಕಾಯುಕ್ತದ ಬಗ್ಗೆ ಜನರ ನಿಲುವುಗಳು

ಲೋಕಾಯುಕ್ತದ ಬಗ್ಗೆ ಜನರ ನಿಲುವುಗಳು

ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಪ್ರಶಂಸೆ ವ್ಯಕ್ತವಾಗುತ್ತಿದೆ. ಭ್ರಷ್ಟ ಹಾಗೂ ಅದಕ್ಷ ರಾಜಕಾರಣಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವುದಕ್ಕೆ ಕೆಲವರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕರಲ್ಲೂ ಬೇಸರ ಮೂಡಿಸಿದೆ.

ಭ್ರಷ್ಟರನ್ನು ಸಮರ್ಥವಾಗಿ ಕಾನೂನು ವ್ಯಾಪ್ತಿಗೆ ಒಳಪಡಿಸುವಲ್ಲಿ ಲೋಕಾಯುಕ್ತ ಪ್ರಭಾವಶಾಲಿ ಎಂದು ಸಾರ್ವಜನಿಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವ ದಿನಗಳಿಗಾಗಿ ಜನರು ಎದುರು ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದ ಬಳಿಕ ಗೊಂದಲದಲ್ಲಿ ಸಿಲುಕಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಆದ್ದರಿಂದ ತನ್ನ ರಾಜಕೀಯ ಅನುಕೂಲಕ್ಕಾಗಿ ಬಿಜೆಪಿ ಲೋಕಾಯುಕ್ತ ಬಲಗೊಳಿಸುವ ಮಾತನಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

 ಸರ್ಕಾರದ ನಿಲುವಿಗೆ ಅಧಿಕಾರಿಗಳ ಅಸಮಾಧಾನ

ಸರ್ಕಾರದ ನಿಲುವಿಗೆ ಅಧಿಕಾರಿಗಳ ಅಸಮಾಧಾನ

ಆತ್ಮಸಾಕ್ಷಿಯಿಂದ ಲೋಕಾಯುಕ್ತಕ್ಕೆ ಬಲ ತುಂಬುವ ಆಸಕ್ತಿ ಮತ್ತು ಇಚ್ಛಾಶಕ್ತಿ ಬಿಜೆಪಿ ಸರ್ಕಾರಕ್ಕೆ ಇಲ್ಲವೆಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಎಸಿಬಿ ಅನ್ನು ಹೈಕೋರ್ಟ್ ರದ್ದುಪಡಿಸಿರುವುದರಿಂದ ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿಲ್ಲ. ಒಮ್ಮೆ ದೂರುಗಳು ಬಂದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ದಾಳಿ ನಡೆಸುವಂತಿಲ್ಲ. ಹೈಕೋರ್ಟ್ ಆದೇಶದಂತೆ ಯಥಾ ಸ್ಥಿತಿಯನ್ನಷ್ಟೇ ಕಾಪಾಡುತ್ತಿದ್ದೇವೆ ಎಂದು ಎಸಿಬಿ ಡಿವೈಎಸ್‌ಪಿ ಮ್ಯಾಥ್ಯೂ ಥಾಮಸ್ ಹೇಳಿದರು.

ಇನ್ನು ಈ ಬಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ರಾಜ್‌ಶೆಟ್ಟಿ ಮಾತನಾಡಿ ಎಸಿಬಿ ವ್ಯವಸ್ಥೆಯನ್ನು ಹೈಕೋರ್ಟ್ ರದ್ದುಪಡಿಸಿರಬಹುದು. ಆದರೆ ಸಾರ್ವಜನಿಕರಿಂದ ಬರುವ ದೂರುಗಳನ್ನು ದಾಖಲಿಸಿಕೊಂಡು ಭ್ರಷ್ಟರ ಮೇಲೆ ದಾಳಿ ನಡೆಸುವ ಅಧಿಕಾರವನ್ನು ಸರ್ಕಾರ ಕೊಟ್ಟಿಲ್ಲ. ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಹೊರಬಿದ್ದಿಲ್ಲ. ಲೋಕಾಯುಕ್ತ ವ್ಯವಸ್ಥೆಯಲ್ಲಿ ಅದೇ ರೀತಿಯಲ್ಲಿ ಕಾರ್ಯಚಟುವಟಿಕೆಗಳು ಮುಂದುವರೆದಿವೆ ಎಂದರು.

English summary
High Court ban ACB and issued order. But Lokayukta is precarious position as government not issued directive, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X