ಜನರಿಗೋಸ್ಕರ ಬಂಧನ ಮಾತ್ರವಲ್ಲ, ಪ್ರಾಣ ಕೊಡಲು ಸಿದ್ಧರಿದ್ದೇವೆ-ಎಎಪಿ ಕಾರ್ಯಕರ್ತರ ಆಕ್ರೋಶ
ದೇಶ ಮತ್ತು ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ಕೊಡಲು ನಾವು ಸಿದ್ಧರಿದ್ದೇವೆ. ಗಿಡವನ್ನು ಚಿವುಟಿದಷ್ಟೂ ಚಿಗುರುವಂತೆ ಎಎಪಿಯು ಬೆಳೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ವಕೀಲ ಬೂದನೂರು ಬೊಮ್ಮಯ್ಯ ಹೇಳಿದ್ದಾರೆ.
ಮಂಡ್ಯ, ಫೆಬ್ರವರಿ 28: ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಅವರನ್ನು ಕೇಂದ್ರ ಸರಕಾರ ದುರುದ್ದೇಶಪೂರ್ವಕವಾಗಿ ಬಂಧಿಸಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ವಕೀಲ ಬೂದನೂರು ಬೊಮ್ಮಯ್ಯ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹತ್ತು ತಿಂಗಳ ಹಿಂದೆ ಸಚಿವ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ವಿಚಾರಣೆ ನೆಪದಲ್ಲಿ ಬಂಧಿಸಿರುವುದು ಎಷ್ಟು ಸರಿ? ಸಿಸೋಡಿಯಾ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗದಿದ್ದರೂ ಕೂಡ ಎಎಪಿ ಪಕ್ಷವನ್ನು ಹಣಿಯುವ ಪ್ರಯತ್ನವಾಗಿ ಬಂಧನ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಪ ಸಾಬೀತಾಗುವಂತಹ ಸಣ್ಣ ಸಾಕ್ಷಿಯೂ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ. ಅವರ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಅಕ್ರಮ ದಾಖಲೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹೊಸದಿಲ್ಲಿಯಲ್ಲಿ ಬಿಜೆಪಿಗೆ ಎಎಪಿಯೇ ಎದುರಾಳಿ. ಹೀಗಾಗಿ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಎಪಿ ಎಂಬ ಕಾರಣಕ್ಕೆ, ಎಎಪಿ ನಾಯಕತ್ವಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಎಎಪಿಯು ಕರ್ನಾಟಕ ಸೇರಿದಂತೆ ದೇಶಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸಚಿವ ಮನೀಷ್ ಸಿಸೋಡಿಯಾ ಬರುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ದೆಹಲಿಯಲ್ಲಿ 25,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿಮಿಸಿರುವ ಸರ್ಕಾರಿ ಶಾಲೆಗಳಿಗೆ ಕರ್ನಾಟಕದ ದುಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳನ್ನು ಹೋಲಿಸಿ ಮಾತನಾಡಬಹುದೆಂಬ ಕಾರಣಕ್ಕೆ ಸಿಬಿಐ ಮೂಲಕ ಸಚಿವ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ದೇಶ ಮತ್ತು ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ಕೊಡಲು ನಾವು ಸಿದ್ಧರಿದ್ದೇವೆ. ಗಿಡವನ್ನು ಚಿವುಟಿದಷ್ಟೂ ಚಿಗುರುವಂತೆ ಎಎಪಿಯು ಬೆಳೆಯಲಿದೆ. ಹೀಗಾಗಿ ಬಿಜೆಪಿಯು ಕೀಳು ಮಟ್ಟದ ರಾಜಕೀಯವನ್ನು ಬಿಟ್ಟು, ಕೂಡಲೇ ಸಚಿವ ಮನೀಷ್ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಶಿವಕುಮಾರ್, ಮುಖಂಡರಾದ ಆನಂದ್, ಎಂ.ಬಿ.ಅಭಿಷೇಕ್, ಜೆಸಿಬಿ ಕುಮಾರ್, ಪುಟ್ಟಸ್ವಾಮಿ, ಶಿವಕುಮಾರ್ ಉಪಸ್ಥಿತರಿದ್ದರು.











Click it and Unblock the Notifications