ಮಂಡ್ಯ: ಒಂದು ವರ್ಷದ ಮಗುವನ್ನು ಬಲಿ ತೆಗೆದುಕೊಂಡ ಕುಕ್ಕರ್ ವಿಶಲ್
ಮಂಡ್ಯ, ಜುಲೈ 01: ಚಿಕ್ಕ ಮಕ್ಕಳನ್ನು ಅದೆಷ್ಟೇ ಎಚ್ಚರಿಕೆಯಿಂದ, ಜಾಗೃತಿಯಿಂದ ನೋಡಿಕೊಂಡರೂ ಕಣ್ಣು ಮುಚ್ಚಿ ಬಿಡುವುದರೊಳಗೆ ಕೆಲವೊಮ್ಮೆ ಅವಘಡಗಳು ಸಂಭವಿಸಿಯೇ ಬಿಡುತ್ತವೆ. ಇದೀಗ ನಿನ್ನೆ ಮಂಡ್ಯದಲ್ಲಿ ನಡೆದ ಘಟನೆಯೊಂದು ಎಲ್ಲರ ಮನಕಲುಕುವಂತಿದೆ.
ಹೌದು, ಮಗುವೊಂದು ಆಟ ಆಡುವ ಸಮಯದಲ್ಲಿ ಕುಕ್ಕರ್ ವಿಶಲ್ ನುಂಗಿ ಸಾವನ್ನಪ್ಪಿದೆ. ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಮರಿಲಿಂಗೇಗೌಡ ಮತ್ತು ರೂಪಾ ದಂಪತಿಯ ಪುತ್ರ ಭುವನ್ ಗೌಡ (1) ಎಂಬ ಮಗುವೆ ಮೃತಪಟ್ಟ ದುರ್ದೈವಿ.
ಶನಿವಾರ ರಾತ್ರಿ ಎಲ್ಲರೂ ಮನೆಯಲ್ಲಿದ್ದಾಗಲೇ ಆಟವಾಡುತ್ತಿದ್ದ ಮಗು, ಇದ್ದಕಿದ್ದಂತೆ ಕೈಗೆ ಸಿಕ್ಕ ಕುಕ್ಕರ್ ವಿಶಲ್ ನುಂಗಿದೆ. ನಂತರ ಅಳಲು ಆರಂಭಿಸಿದೆ. ಕೂಡಲೇ ಮಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಪ್ರಕರಣ ಸಂಬಂಧ ಮದ್ದೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ವಲ್ಪ ದಿನಗಳ ಹಿಂದೆಯಷ್ಟೇ ಮಂಜುನಾಥ್-ಧನಲಕ್ಷ್ಮಿ ದಂಪತಿಯ ಮೂರು ತಿಂಗಳ ಹೆಣ್ಣು ಮಗುವಿಗೆ ಸೆರಿ ತಿನ್ನಿಸುವಾಗ ಗಂಟಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮಾಗಡಿಯ ಹೊಸಪಾಳ್ಯದಲ್ಲಿ ನಡೆದಿತ್ತು.
ಎಂದಿನಂತೆ ಬೆಳಗ್ಗೆ ಮಗುವಿಗೆ ತಾಯಿ ಸೆರಿ ತಿನ್ನಿಸುತ್ತಿದ್ದರು. ಚೆರಿ ಹಣ್ಣು ಗಂಟಲಿಗೆ ಸಿಲುಕಿದ ತಕ್ಷಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತು.












Click it and Unblock the Notifications