ಮಂಡ್ಯ ತಾಲೂಕಿನ ಬೋರಾಪುರದಲ್ಲಿ IPL ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ
ಮಂಡ್ಯ, ಮೇ, 26: ಮಂಡ್ಯ ತಾಲೂಕಿನ ಬೋರಾಪುರ ಗ್ರಾಮದ ಬಳಿ ಗುರುವಾರ ರಾತ್ರಿ ಐಪಿಎಲ್ ಬೆಟ್ಟಿಂಗ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ನಡೆದಿದ್ದು, ಈ ವೇಳೆ ಗುಂಪೊಂದು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹಾಗೆಯೆ ಹತ್ಯೆಯಾದ ಯುವಕನ ರಕ್ಷಣೆಗೆ ಹೋಗಿದ್ದ ಸ್ನೇಹಿತ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಡ್ಯ ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ರಾಜೇಂದ್ರ ಪುತ್ರ ಎಳನೀರು ವ್ಯಾಪಾರಿ ಸಿ.ಆರ್.ಪುನೀತ್ (24) ಎಂಬುವನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪುನೀತ್‌ನನ್ನು ಕೆ.ಎಂ. ದೊಡ್ಡಿಯ ಜಿ. ಮಾದೇಗೌಡ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಸುಯೋಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಮಧ್ಯರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾನೆ.

ಇನ್ನು ಘರ್ಷಣೆಯಲ್ಲಿ ಪುನೀತ್‌ನ ಸ್ನೇಹಿತ ಸಿ.ಎ. ಕೆರೆ ರಾಮೇಗೌಡನ ಪುತ್ರ ದರ್ಶನ್ (18) ತೀವ್ರವಾಗಿ ಗಾಯಗೊಂಡಿದ್ದು, ಈತ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪ್ರಮುಖ ಆರೋಪಿ ಬೋರಾಪುರ ಗ್ರಾಮದ ಶರತ್, ಮಂಜ ಅಲಿಯಾಸ್ ದೊಡ್ಡ ಮಂಜ, ಗುಂಡ, ಸೀನಾ, ಶ್ರೀಧರ, ಮನು, ಮಂಜ, ಸತೀಶ್ ಅಲಿಯಾಸ್ ಕರಿಯ ಹಾಗೂ ಎಸ್.ಟಿ. ಮಂಜ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 323, 504, 506, 324, 302 ಹಾಗೂ 149ರ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಹಲ್ಲೆಯಿಂದ ಗಾಯಗೊಂಡಿರುವ ದರ್ಶನ್ ಬಳಿ ಪ್ರಥಮ ಆರೋಪಿ ಶರತ್ ಬಳಿ ಐಪಿಎಲ್ ಬೆಟ್ಟಿಂಗ್ ಆಟಿ ಹಣ ಗೆದ್ದಿದ್ದ. ಆಗ ದರ್ಶನ್ 11 ಸಾವಿರ ರೂಪಾಯಿ ಹಣ ನೀಡಬೇಕಿತ್ತು.
ನಂತರ ಬಿಟ್ಟಿಂಗ್ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ದರ್ಶನ್ ಹಣ ನೀಡುವುದಾಗಿ ಬೋರಾಪುರ ಗೇಟ್‌ನ ಮದ್ದೂರು-ಮಳವಳ್ಳಿ ರಸ್ತೆಯ ಸೌಮ್ಯ ರೆಸಿಡೆನ್ಸಿ ಹಿಂಭಾಗದ ಹೊಂಗೆ ತೋಪಿನ ಹತ್ತಿರ ಬರುವಂತೆ ಶರತ್‌ಗೆ ತಿಳಿಸಿದ್ದಾನೆ. ಆಗ ದರ್ಶನ್, ಪುನೀತ್, ನಿತ್ಯಾನಂದ ಹಾಗೂ ಅನಿಲ್ ಬೈಕ್‌ನಲ್ಲಿ ಹೋದಾಗ ಎರಡು ಗುಂಪಿನ ನಡುವೆ ಕೈ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಆರೋಪಿಗಳ ಗುಂಪು ಪುನೀತ್‌ಗೆ ತಲೆ ಮತ್ತು ಮೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಪುನೀತ್ ಕುಸಿದು ಬಿದ್ದಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ತಿಳಿಸಿದ್ದಾರೆ. ನಂತರ ಬಂಧಿತ ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪ್ಲಾನ್
ಇನ್ನು ಅವಳಿನಗರದ ಪ್ರಖ್ಯಾತಿಯಂತೆ ಕುಖ್ಯಾತಿ ಕೂಡ ದಿನದಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಾದಕ ವಸ್ತುಗಳ ಮಾರಾಟ ಒಂದು ಕಡೆಯಾದರೇ. ಬೆಟ್ಟಿಂಗ್ ದಂಧೆ ಅವಳಿನಗರದಲ್ಲಿ ಬೇರು ಬಿಟ್ಟಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗದ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟಲು ಮುಂದಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅಬ್ಬರ ಇಡೀ ದೇಶದಲ್ಲಿ ಜೋರಾಗಿದೆ. ತಮ್ಮಿಷ್ಟದ ತಂಡ, ನಾಯಕರ ಭರ್ಜರಿ ಆಟ ನೋಡಲು ಒಂದು ವರ್ಗದ ಜನರ ಕಾಯುತ್ತಿದ್ದರೆ, ಮತ್ತೊಂದು ವರ್ಗ ಇದನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಲೂಟಿ ಮಾಡಲು ಹೊಂಚು ಹಾಕಿ ಕುಳಿತಿವೆ. ಅಂತಹ ಕ್ರಿಕೆಟ್ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು.
ಈವರೆಗೂ ಪೊಲೀಸರು ಮಾತ್ರ ಕ್ರಿಕೆಟ್ ಬುಕ್ಕಿಗಳ ಮೇಲೆ ಮತ್ತು ಬೆಟ್ಟಿಂಗ್ ಕುಳಗಳ ಮೇಲೆ ಹದ್ದಿನಕಣ್ಣು ಇರಿಸುತ್ತಿದ್ದರು. ಈ ಬಾರಿಯ ಐಪಿಎಲ್ ಸೀಜನ್ ಬಹಳ ಕಾವು ಪಡೆದುಕೊಂಡಿದೆ. ಎಲ್ಲೆಡೆ ಗಮನ ಹರಿಸುವುದಕ್ಕೆ ಕಷ್ಟ ಎಂದರಿತ ಹು-ಧಾ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ಸಹಾಯ, ಸಹಕಾರ ಬಯಸಿತ್ತು.
ಸಾಮಾಜಿಕ ಜಾಲತಾಣದ ಮೂಲಕ, ಸಾರ್ವಜನಿಕರ ಸಹಕಾರದಿಂದ ಬೆಟ್ಟಿಂಗ್ ಆಡುವವರ ಮಾಹಿತಿಯನ್ನು ಪಡೆದುಕೊಂಡು, ಅವರಿಂದ ದೊಡ್ಡ ದೊಡ್ಡ ಬುಕ್ಕಿಗಳನ್ನು ತಲುಪುವ ಮಾಸ್ಟರ್ ಪ್ಲಾನ್‌ಅನ್ನು ಪೊಲೀಸ್ ಇಲಾಖೆ ಮಾಡಿಕೊಂಡಿತ್ತು. ತಮ್ಮ ಸುತ್ತ ಮುತ್ತ ಯಾರಾದರೂ ಕ್ರಿಕೆಟ್ ಬೆಟಿಂಗ್‌ನಲ್ಲಿ ನಿರತರಾಗಿದ್ದರೆ ಅಂಥವರ ಬಗ್ಗೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹರಿಬಿಟ್ಟಿತ್ತು.












Click it and Unblock the Notifications