ನಾಗಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ರಾಗಿ ಮುದ್ದೆಗೆ 90 ರೂಪಾಯಿ ಬಿಲ್, ಬಡವರ ಸುಲಿಗೆ
ನಾಗಮಂಗಲ, ಜುಲೈ, 11: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ, ಸಾಂಬರ್ ಅಥವಾ ಒಂದು ಪ್ಲೇಟ್ ಅನ್ನ, ಸಾಂಬರ್‌ಗೆ 92 ರೂಪಾಯಿ ಬಿಲ್ ಮಾಡುತ್ತಿದ್ದು, ಇದನ್ನು ಕಂಡ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಇಲ್ಲಿನ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿಕೊಟ್ಟ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಹೊರರೋಗಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡು. ಈ ವೇಳೆ ಆಸ್ಪತ್ರೆಯ ಒಳರೋಗಿಗಳಿಗೆ ನೀಡುತ್ತಿರುವ ಊಟದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಒಳರೋಗಿಗಳ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಇಲ್ಲಿನ ಆಡಳಿತದ ಖರ್ಚುವೆಚ್ಚಗಳ ಕಡತ ಪರಿಶೀಲನೆ ನಡೆಸಲು ಮುಂದಾದರು. ಆಗ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್ ಅಥವಾ ಒಂದು ಪ್ಲೇಟ್ ಅನ್ನ, ಸಾಂಬರ್‌ಗೆ 92 ರೂಪಾಯಿ, ಒಂದು ಬಾಳೆ ಹಣ್ಣಿಗೆ 8 ರೂ. ಹಾಗೂ ಒಂದು ಮೊಟ್ಟೆಗೆ 10 ರೂಪಾಯಿ ದುಬಾರಿ ವೆಚ್ಚದ ಬಿಲ್ ಕಂಡು ಶಾಕ್ ಆದರು.
ಹೋಟೆಲ್‌ಗಳಲ್ಲಿಯೇ ಕನಿಷ್ಠ 50 ರಿಂದ 100 ರೂಪಾಯಿಗೆ ಮುದ್ದೆ, ಚಪಾತಿ, ಅನ್ನ, ಸಾಂಬರ್‌ನ ಒಳ್ಳೆಯ ಊಟ ಸಿಗುತ್ತದೆ. ಹಾಗೂ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ 10 ರೂಪಾಯಿಗೆ ಅನ್ನ, ಸಾಂಬರ್ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಅನ್ನ, ಸಾಂಬರ್ ಅಥವಾ ಒಂದು ಮುದ್ದೆ ಸಾಂಬರ್‌ಗೆ 92 ರೂಪಾಯಿ ಏಕೆ ಕೊಡುತ್ತಿರುವಿರಿ ಎಂದು ಪ್ರಶ್ನಿಸಿದರು.
ನಾನೂ ಕೂಡ ಮುದ್ದೆ ತಿನ್ನುವವನೆ. ಒಂದು ಮುದ್ದೆ ತಯಾರಿಸಲು ಕನಿಷ್ಠ 10ರಿಂದ 15 ರೂಪಾಯಿ ಖರ್ಚಾಗುತ್ತದೆ. ಆದರೆ ಇಲ್ಲಿ 92 ರೂಪಾಯಿ ನಿಗದಿಪಡಿಸಿರುವುದಾದರೂ ಏಕೆ? ಈ ಊಟದ ಟೆಂಡರ್ ಅನುಮೋದಿಸಿದವರು ಯಾರು? ಎಂದು ಪ್ರಶ್ನಿಸುವ ಮೂಲಕ ಸ್ಥಳದಲ್ಲಿದ್ದ ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೊಟ್ಟೆ, ಬಾಳೆ ಹಣ್ಣಿಗೆ ಬೇಕಾನಿಟ್ಟಿ ದರ ನಿಗಧಿ
ಅಂಗನವಾಡಿಗೆ ಪೂರೈಸುವ ಒಂದು ಮೊಟ್ಟೆಗೆ ನಾವು 6 ರೂಪಾಯಿ ಕೊಡುತ್ತಿದ್ದೇವೆ. 40 ರೂಪಾಯಿಗೆ ಒಂದು ಕೆ.ಜಿ.ಬಾಳೆಹಣ್ಣು ಸಿಗುತ್ತದೆ. ಆದರೆ ಇಲ್ಲಿ ರೋಗಿಗಳಿಗೆ ನೀಡುವ ಒಂದು ಮೊಟ್ಟೆಗೆ 10 ರೂಪಾಯಿ ಮತ್ತು ಒಂದು ಬಾಳೆ ಹಣ್ಣಿಗೆ 8 ರೂಪಾಯಿ ನಿಗಧಿಪಡಿಸಲಾಗಿದೆ ಎಂದರೆ ಏನರ್ಥ? 12 ಲಕ್ಷ ರೂಪಾಯಿಗಳ ಕೊಟೇಷನ್ ಏಕೆ? ಇ-ಟೆಂಡರ್ ಏಕೆ ಮಾಡಿಲ್ಲ?. ಇದು ತಪ್ಪು ಲೆಕ್ಕಾಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಗರಂ ಆದರು.
ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್‌ನ ಅವಧಿ ಮಾರ್ಚ್‌ಗೆ ಮುಕ್ತಾಯವಾಗಿದ್ದರೂ ಸಹ ಈವರೆಗೂ ಟೆಂಡರ್ ಕರೆದಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ತಡಬಡಾಯಿಸಿದ ಗುಮಾಸ್ತ ಮೋಹನ್ ಇಲಾಖೆಯ ಮೇಲಾಧಿಕಾರಿಗಳಿಂದ ಅನುಮತಿ ಬಂದಿಲ್ಲ. ಹಾಗಾಗಿ ಟೆಂಡರ್ ಕರೆದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.
ಕಡತಗಳ ಪರಿಶೀಲನೆ ನಡೆಸಿದ ಬಳಿಕ ಒಳರೋಗಿಗಳ ಊಟದ ದುಬಾರಿ ವೆಚ್ಚದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ನಯೀಂಉನ್ನೀಸಾ ಅವರಿಗೆ ತಾಕೀತು ಮಾಡಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ವೈದ್ಯೆ ಡಾ.ಜ್ಯೋತಿಲಕ್ಷ್ಮಿ ಇದ್ದರು.
ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್ ವಿಚಾರದಲ್ಲಿ ಆಸ್ಪತ್ರೆಯ ಗುಮಾಸ್ತ ಮೋಹನ್ ಅವರ ಕೈವಾಡವಿದೆ. ಕಳೆದ ಹತ್ತಾರು ವರ್ಷಗಳಿಂದ ತಮ್ಮ ಸಂಬಂಧಿಕರೊಬ್ಬರಿಗೆ ಊಟದ ಟೆಂಡರ್ ಕೊಡಿಸುತ್ತಿರುವ ಮೋಹನ್, ಈ ಟೆಂಡರ್ ಬೇರೆಯವರಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಒಳರೋಗಿಗಳಿಗೆ ನೀಡುವ ಊಟದ ಗುಣಮಟ್ಟವೂ ಸಹ ಹೇಳಿಕೊಳ್ಳುವಂತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಅಲ್ಲದೆ ಈ ಬಗ್ಗೆ ಪ್ರಶ್ನಿಸಿದರೆ ಇಷ್ಟವಿದ್ದರೆ ಊಟ ಮಾಡಿ, ಕಷ್ಟವಾದರೆ ಬಿಡಿ. ನಾವು ಕೊಡುವುದೇ ಹೀಗೆ ಎಂದು ಊಟ ಪೂರೈಸುವ ವ್ಯಕ್ತಿ ಧಮಕಿ ಹಾಕುತ್ತಾನೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ದುಬಾರಿ ವೆಚ್ಚದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ಸೂಕ್ತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಬುಧವಾರದಿಂದ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ತನಿಖೆ ನಡೆಸಲು ಕನಿಷ್ಠ ಮೂರು ದಿನಗಳು ಬೇಕಾಗುತ್ತದೆ. ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ನಾಗಮಂಗಲ ತಹಶೀಲ್ದಾರ್ ನಯೀಂಉನ್ನೀಸಾ ತಿಳಿಸಿದ್ದಾರೆ.












Click it and Unblock the Notifications