ಹಳೆಯೂರಿನಲ್ಲಿ ಆಟವಾಡಲು ಹೋದ ಬಾಲಕ ನೀರುಪಾಲು
ಮಂಡ್ಯ, ಅಕ್ಟೋಬರ್:09: ಆಟವಾಡಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಹಳೆಯೂರು ಗ್ರಾಮದ ಕೆರೆಯಲ್ಲಿ ನಡೆದಿದೆ.
ಪಟ್ಟಣದ ಟಿ.ಬಿ.ಬಡಾವಣೆಯ ನಿವಾಸಿ ಕಮಲ ಮತ್ತು ಮಂಜುನಾಥ್ ದಂಪತಿ ಪುತ್ರ ಪ್ರಥಮ್(5) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ. ಕೆ.ಆರ್.ಪೇಟೆ ಪಟ್ಟಣದಿಂದ ಹಳೆಯೂರು ಗ್ರಾಮಕ್ಕೆ ಕಮಲ ಮತ್ತು ಮಂಜುನಾಥ್ ದಂಪತಿ ತಮ್ಮ ಪುತ್ರ ಪ್ರಥಮ್ ನೊಂದಿಗೆ ಪಕ್ಷಕ್ಕೆಂದು ತೆರಳಿದ್ದರು.
ಬಾಲಕನಿಗೆ 5 ವರ್ಷವಾದರೂ ಇನ್ನೂ ಸ್ಪಷ್ಟವಾಗಿ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಈ ನಡುವೆ ನೆಂಟರ ಮನೆಗೆ ಹೋಗಿದ್ದ ವೇಳೆ ಪೋಷಕರ ಕಣ್ಣು ತಪ್ಪಿಸಿ ಕೆರೆಯ ಬಳಿ ಆಟವಾಡಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಕೆರೆ ಕೋಡಿಯ ನೀರು ಹರಿಯುವ ಹಳ್ಳದ ನೀರಿನಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ರಾತ್ರಿಯಿಡೀ ಮಗುವಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಸೋಮವಾರ ಹಳ್ಳದಲ್ಲಿ ಪ್ರಥಮ್ ನ ದೇಹವು ತೇಲುತ್ತಿರುವುದು ಪತ್ತೆಯಾಗಿದೆ. ಪೋಷಕರು ಗ್ರಾಮಸ್ಥರ ನೆರವಿನೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಘಟನೆ ಕುರಿತು ಮೃತ ಬಾಲಕನ ತಂದೆ ಮಂಜುನಾಥ್ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ಇನ್ಸ್ ಪೆಕ್ಟರ್ ಆನಂದ್ ಗೌಡ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications