ಕಾರು ನಾಲೆಗೆ ಉರುಳಿ ನಾಲ್ವರು ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ
ಮಂಡ್ಯ, ಜುಲೈ 30: ನಾಲೆಗೆ ಕಾರು ಉರುಳಿದ ಪರಿಣಾಮ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಅವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹಾದೇವಿ ಮೃತ ದುರ್ದೈವಿಗಳು. ಆದಿಚುಂಚನಗಿರಿಯಲ್ಲಿ ಏರ್ಪಡಿಸಿದ್ದ ದೇವತಾ ಕಾರ್ಯಕ್ಕೆ ಆಹ್ವಾನಿಸಲು ಗೊರವನಹಳ್ಳಿ ಗ್ರಾಮದಿಂದ ದೊಡ್ಡ ಮುಲಗೂಡು ಗ್ರಾಮಕ್ಕೆ ನಾಲ್ವರು ಮಹಿಳೆಯರು ಆಗಮಿಸುತ್ತಿದ್ದರು. ರಾತ್ರಿ ಎಂಟು ಗಂಟೆ ವೇಳೆಗೆ ರಾಮನಹಳ್ಳಿ ಗ್ರಾಮದ ನಾಲೆ ಏರಿ ಮೇಲೆ ಕಾರು ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕತ್ತಲೆಯಲ್ಲಿ ಕಾರು ನಾಲೆಗೆ ಉರುಳಿದೆ.

ಘಟನೆಯಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದು, ಅದೃಷ್ಟವಶಾತ್ ಚಾಲಕ ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಮಂಡ್ಯದ ಮಿಮ್ಸ್ ಶವಾಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಕುಟುಂಬದ ಮಹಿಳೆಯರೇ ಮೃತಪಟ್ಟಿರುವುದರಿಂದ ಆ ಮನೆಯಲ್ಲಿ ಯಾರೂ ಮಹಿಳೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಚಿವರಿಂದ ಸಾಂತ್ವನ:ತಲಾ 2 ಲಕ್ಷ ರೂ ಪರಿಹಾರ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಕಾರು ನಾಲೆಗೆ ಬಿದ್ದು ನಾಲ್ವರು ಮೃತಪಟ್ಟ ಹಿನ್ನಲೆಯಲ್ಲಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಎನ್. ಚಲುವರಾಯಸ್ವಾಮಿ ಭಾನುವಾರ ಮಿಮ್ಸ್‌ನ ಶವಾಗಾರದ ಬಳಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು. ನನ್ನ ಹಾಗೂ ಸಚಿವ ಮಹದೇವಪ್ಪರ ಮನವಿ ಮೇರೆಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಪರಿಹಾರಕ್ಕೆ ವರದಿ ನೀಡಲಿದ್ದಾರೆ ಎಂದರು.

ಈಗ ವಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ನೀಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗುವುದು. ಈ ರೀತಿಯ ಘಟನೆ ನಡೆಯಬಾರದಿತ್ತು. ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿರುವುದು ದುಃಖಕರ ವಿಚಾರ ಎಂದು ವಿಷಾದಿಸಿದರು.
ಕಳೆದ ಮೂರು ದಿನದ ಹಿಂದೆ ತಡೆಗೊಡೆ ಇಲ್ಲದೇ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ಒಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಡೆಗೋಡೆ ಇದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸಾವು ಎಂಬುದು ಹೇಗೆ ಬರುತ್ತೆ ಎಂದು ಗೊತ್ತಿಲ್ಲ. ಕೆಲವರು ಬಿಲ್ಡಿಂಗ್ ಮೇಲಿಂದ ಬಿದ್ದರೂ ಬದುಕುತ್ತಾರೆ. ಇನ್ನೂ ಕೆಲವರು ಎಡವಿ ಬಿದ್ದರೆ ಸಾವನ್ನಪ್ಪುತ್ತಾರೆ. ಸಾಂತ್ವನ ಹೇಳೋದು ಸುಲಭ, ಆದರೆ ಆ ನೋವು ಕುಟುಂಬದವರಿಗೆ ಮಾತ್ರ ಗೊತ್ತಿರುತ್ತದೆ. ವಿಸಿ ನಾಲೆಯ ವ್ಯಾಪ್ತಿಯಲ್ಲಿ ಕೆಲ ಕಾಮಗಾರಿ ಬಾಕಿ ಇದೆ. ಹೀಗಾಗಲೇ ಕಾಮಗಾರಿಗಳು ಮಂಜೂರು ಆಗಿವೆ. ಇನ್ನೂ ಕೆಲಸಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ನಾಲೆ ಹೋಗುವ ಕಡೆ ಎಲ್ಲೆಲ್ಲಿ ತಡೆಗೋಡೆಯಿಲ್ಲ ಎಂಬುದನ್ನು ಗುರುತಿಸಲಾಗುವುದು. ಜೊತೆಗೆ ಅಪಘಾತ ನಡೆಯಬಹುದಾದ ಸಂಭವನೀಯ ಸ್ಥಳ ಯಾವುದೆಂದು ಗೊತ್ತು ಮಾಡಿ, ಸರ್ವೇ ಮಾಡಲಾಗುವುದು. ತದನಂತರ ಎಲ್ಲಾ ಕಡೆ ಸೂಕ್ತ ಭದ್ರತೆ ಮಾಡುತ್ತೇವೆ. ಇಂತಹ ಸ್ಥಳಗಳಲ್ಲಿ ಜನರು ಸಹ ಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.
ಈ ವೇಳೆ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಘಟನೆ ನಡೆದಿರುವುದು ದುಃಖದ ಸಂಗತಿ, ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಶಾಸಕ ಬಾಬು ಬಂಡಿಸಿದ್ದೇಗೌಡ ಅವರು ಮುಂಜಾಗ್ರತೆ ಕ್ರಮವಾಗಿ ಸಹಕರಿಸಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಪರಿಹಾರದ ಹಣ ನೀಡಲಾಗುವುದು. ನಾನು ಸಹ ವಯಕ್ತಿಕ ಪರಿಹಾರ ನೀಡಿದ್ದೇನೆ ಎಂದರು.
ಈ ವೇಳೆ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮುಖಂಡರಾದ ಸಿ.ಡಿ.ಗಂಗಾಧರ, ನಹೀಂ, ವಿಜಯಲಕ್ಷ್ಮಿ ರಘುನಂದನ್, ಸಿ.ಎಂ.ದ್ಯಾವಪ್ಪ ಇತರರು ಉಪಸ್ಥಿರಿದ್ದರು.












Click it and Unblock the Notifications