ಕೊಡಗಿನ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಕಾಡಾನೆಗಳು!
ಮಡಿಕೇರಿ, ಜನವರಿ 22: ಕೊಡಗಿನಲ್ಲಿ ಕಾಫಿಕೊಯ್ಲು ಭರದಿಂದ ಸಾಗುತ್ತಿರುವ ಬೆನ್ನಲ್ಲೇ ತೋಟಗಳು ಸೇರಿದಂತೆ ವಿವಿಧೆಡೆ ಕಾಡಾನೆಗಳು ಕಾಣಿಸಿಕೊಳ್ಳುವ ಮೂಲಕ ಕಾಫಿ ಬೆಳೆಗಾರರು ಮತ್ತು ಕಾಫಿ ತೋಟದಲ್ಲಿ ಕೊಯ್ಲು ಮಾಡುವ ಕಾರ್ಮಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಅರಣ್ಯದಿಂದ ನೇರವಾಗಿ ಕಾಫಿ ತೋಟ ಮತ್ತು ಜನವಸತಿ ಪ್ರದೇಶಗಳತ್ತ ಮುಖ ಮಾಡಿಡುವ ಕಾಡಾನೆಗಳು ಎಲ್ಲೆಂದರಲ್ಲಿ ದಾಳಿ ಮಾಡುತ್ತಿರುವುದರಿಂದ ಜಿಲ್ಲೆಯ ಜನರು ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಯದಲ್ಲಿ ಕಾಫಿಕೊಯ್ಲು ಮಾಡಲೇ ಬೇಕಾಗಿದ್ದು, ಕಾರ್ಮಿಕರು ಕಾಫಿ ಕೊಯ್ಲನಲ್ಲಿ ನಿರತರಾಗಿದ್ದಾರೆ. ಈ ಸಂದರ್ಭ ಕಾಡಾನೆಗಳು ತೋಟದೊಳಗೆ ನುಗ್ಗಿದರೆ ಏನು ಮಾಡುವುದು ಎಂಬ ಭಯದಲ್ಲಿ ಕಾರ್ಮಿಕರಿದ್ದರೆ, ಕಾಫಿ ತೋಟದೊಳಗೆ ಕಾಡಾನೆಗಳು ನುಗ್ಗಿದರೆ ಫಸಲು ನಾಶದ ಜತೆಗೆ ಕಾರ್ಮಿಕರ ಸುರಕ್ಷತೆ ಬಗ್ಗೆಯೂ ಬೆಳೆಗಾರರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಒಂಟಿ ಆನೆಗಳಿದ್ದು, ಅವು ಯಾವಾಗ ಎಲ್ಲಿ ಇರುತ್ತವೆ ಎನ್ನುವುದನ್ನು ಊಹೆ ಮಾಡುವುದೇ ಕಷ್ಟವಾಗಿದೆ. ಹೀಗಾಗಿ ಕಾಡಾನೆಗಳ ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಅರಣ್ಯದಿಂದ ಬರುವ ಕಾಡಾನೆಗಳು ಕಾಡು, ನಾಡು, ತೋಟ ಎನ್ನದೆ ಎಲ್ಲೆಂದರಲ್ಲಿ ನುಗ್ಗುತ್ತಿವೆ. ಇದೀಗ ಕಾಡು, ಕಾಫಿ ತೋಟ ಮಾತ್ರವಲ್ಲದೆ ಪಟ್ಟಣ ಪ್ರದೇಶಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಮಂಗಳವಾರ ನೆಲ್ಯಹುದಿಕೇರಿಯ ಟೀ ಅಂಗಡಿ ಮೇಲೆ ಕಾಡಾನೆ ದಾಳಿ ಮಾಡಿತ್ತು. ಈ ವೇಳೆ ಅಲ್ಲಿದ್ದ ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಇನ್ನು ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಬಳಿ ಕಾಡಾನೆ ದಾಳಿಗೆ ಕೃಷಿಕರೊಬ್ಬರು ಮೃತಪಟ್ಟಿದ್ದಾರೆ. ಈ ನಡುವೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯನವರ ಕೋಣನಕಟ್ಟೆ ನಿವಾಸಕ್ಕೆ ನುಗ್ಗುವ ಮೂಲಕ ಇನ್ನಷ್ಟು ಭಯ ಹುಟ್ಟಿಸಿದೆ.
ಮಾಜಿ ಎಂಎಲ್‌ಸಿ ಮನೆಗೆ ನುಗ್ಗಿದ ಕಾಡಾನೆ
ಅಡ್ಡಾಡುತ್ತಾ ಬಂದ ಕಾಡಾನೆ ದಕ್ಷಿಣಕೊಡಗಿನ ಕೋಣನಕಟ್ಟೆ ಗ್ರಾಮದಲ್ಲಿರುವ ಅರುಣ್ ಮಾಚಯ್ಯ ಅವರ ನಿವಾಸಕ್ಕೆ ಮುಂಜಾನೆ ಸಮಯದಲ್ಲಿ ನುಗ್ಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಮುಂಭಾಗದ ಕಡೆಯಿಂದ ಬಂದು ಹಿಂಭಾಗಕ್ಕಾಗಿ ಮನೆಗೆ ಸುತ್ತು ಹಾಕಿದೆ. ಮುಂಜಾನೆ ಸುಮಾರು 3ಗಂಟೆ ಸಮಯವಾದ ಕಾರಣ ಯಾರೂ ಇರಲಿಲ್ಲ. ಹೀಗಾಗಿ ಮನೆ ಬಳಿ ಅಡ್ಡಾಡಿದ ಕಾಡಾನೆ ಮನೆಯ ಮುಂದೆ ಇರಿಸಿದ್ದ ಹೂ ಕುಂಡಗಳನ್ನು ಧ್ವಂಸ ಮಾಡಿದ್ದಲ್ಲದೆ, ಹಿಂಭಾಗಕ್ಕೆ ತೆರಳಿ ಸ್ಟೋರ್ ರೂಂನಲ್ಲಿ ಇರಿಸಲಾಗಿದ್ದ ಹಲಸಿನಕಾಯಿಯನ್ನು ತಿನ್ನಲು ಕಿಟಕಿಯ ಮೂಲಕ ಪ್ರಯತ್ನಿಸಿ ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟು ಹೋಗಿದೆ.
ಸದ್ಯ ಜಿಲ್ಲೆಯಲ್ಲಿ ಬಹುತೇಕ ಕಡೆ ಒಂಟಿ ಆನೆಗಳು ಕಾಣಿಸಿಕೊಳ್ಳುತ್ತಿದ್ದು ಇವು ಎಲ್ಲೆಂದರಲ್ಲಿ ಅಲೆಯುವ ಕಾರಣ ಯಾವಾಗ? ಎಲ್ಲಿಗೆ ಹೋಗುತ್ತವೆ? ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಹೀಗಾಗಿಯೇ ಕಾಡಾನೆ ಕಾಣಿಸಿಕೊಂಡಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆಗಾರರು ಮತ್ತು ಕಾರ್ಮಿಕರು ಭಯಬೀಳುತ್ತಿದ್ದಾರೆ. ತೋಟಕ್ಕೆ ಹೋಗಿ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ ಸಂಕಷ್ಟಕ್ಕೀಡಾಗಿದ್ದಾರೆ. ಕಾಫಿ ಹಣ್ಣಾಗಿದ್ದು, ಕಾಡಾನೆಗಳು ತೋಟದೊಳಗೆ ನುಗ್ಗಿದರೆ ಫಸಲನ್ನು ನಾಶ ಮಾಡುವುದಲ್ಲದೆ, ಕಾರ್ಮಿಕರ ಮೇಲೆ ಯಾವಾಗ ದಾಳಿ ಮಾಡಿ ಬಿಡುತ್ತವೆಯೇನೋ? ಎಂಬ ಭಯವೂ ಕಾಡಲಾರಂಭಿಸಿದೆ.

ಕಾಡಾನೆಗಳು ಬರದಂತೆ ತಡೆಯುವುದು ಅಗತ್ಯ
ಕಾಡಾನೆಗಳು ಅರಣ್ಯವನ್ನು ಬಿಟ್ಟು ನೇರವಾಗಿ ಕಾಫಿ ತೋಟಗಳಿಗೆ ನುಗ್ಗುತ್ತಿದ್ದು ಅಲ್ಲಿಂದ ಪಟ್ಟಣಕ್ಕೂ ಲಗ್ಗೆಯಿಡುತ್ತಿವೆ. ಒಂದೆಡೆ ಹುಲಿ ಮತ್ತೊಂದೆಡೆ ಕಾಡಾನೆ ಇವುಗಳ ನಡುವೆ ಜಿಲ್ಲೆಯ ಜನ ನಲುಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಕಾಡಾನೆಗಳು ನಾಡಿಗೆ ಬರದಂತೆ ತಡೆಯುವ ಕೆಲಸವನ್ನು ಮಾಡಬೇಕಿದೆ. ಕೆಲವರು ಹೇಳುವ ಪ್ರಕಾರ ಕೇರಳದ ಕಡೆಯಿಂದ ಕಾಡಾನೆಗಳು ಬರುತ್ತಿವೆಯಂತೆ. ಅದು ಏನೇ ಇರಲಿ ಕೊಡಗಿನ ಜನ ಮಾತ್ರ ಕಾಡಾನೆ ಭಯದಲ್ಲಿಯೇ ತೋಟದಲ್ಲಿ ಕೆಲಸ ಮಾಡುವಂತಾಗಿರುವುದು ಮಾತ್ರವಲ್ಲದೆ ಇದರಿಂದ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ.
ಇವತ್ತು ಕಾಡಿನಲ್ಲಿರಬೇಕಾದ ಹೆಚ್ಚಿನ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಫಸಲು ನಾಶ ಮಾಡುವುದರೊಂದಿಗೆ ಬೆಳೆಗಾರರ, ಕಾರ್ಮಿಕರ ಪ್ರಾಣ ತೆಗೆಯುತ್ತಿವೆ. ಕಾಫಿ ತೋಟಗಳ ಮೂಲಕವೇ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವ ಕಾಡಾನೆಗಳು ತಾವು ಸಾಗಿದ ಹಾದಿಯಲ್ಲೆಲ್ಲ ಕಾಫಿ, ಬಾಳೆ, ಅಡಿಕೆ, ತೆಂಗನ್ನು ನಾಶ ಮಾಡುತ್ತಿರುವುದಲ್ಲದೆ, ಮನುಷ್ಯರನ್ನೂ ಕೊಂದು ಹಾಕುತ್ತಿವೆ. ಕಾಫಿ ತೋಟಗಳ ನಡುವೆ ಸೇರಿಕೊಂಡು ಉಪಟಳ ನೀಡುತ್ತಿದ್ದ ಹಲವು ಆನೆಗಳನ್ನು ಈಗಾಗಲೇ ಸೆರೆಹಿಡಿಯಲಾಗಿದೆ. ಆದರೂ ಕಾಡಾನೆಗಳು ಕಾಫಿತೋಟಕ್ಕೆ ನುಗ್ಗುತ್ತಲೇ ಇವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ಇರುವುದು ದುರಂತವೇ ಸರಿ.












Click it and Unblock the Notifications