ಕೊಡಗಿನ ಪ್ರವಾಸಿ ತಾಣ ದುಬಾರೆಗೆ ತೂಗುಸೇತುವೆ ಏಕೆ ಬೇಕು? ಇಲ್ಲಿದೆ ಸೂಕ್ತ ಕಾರಣ
ಮಡಿಕೇರಿ, ಅಕ್ಟೋಬರ್ 28: ಕೊಡಗಿನ ಪ್ರವಾಸಿ ತಾಣ ಜೊತೆಗೆ ಆನೆಶಿಬಿರವೂ ಆಗಿರುವ ದುಬಾರೆಯ ಕಾವೇರಿ ನದಿಗೆ ತೂಗುಸೇತುವೆ ನಿರ್ಮಾಣವಾಗುವುದು ಯಾವಾಗ? ಹೀಗೊಂದು ಪ್ರಶ್ನೆ ದಶಕದಿಂದಲೇ ಕೇಳಿ ಬರುತ್ತಿದೆ. ಆದರೆ ಅದು ಸದ್ಯಕ್ಕೆ ಆಗಲ್ಲ ಎಂಬುದಂತು ನಿಜ. ಇಲ್ಲಿ ತೂಗುಸೇತುವೆ ಆದರೆ ಪ್ರವಾಸೋದ್ಯಮದ ದೃಷ್ಟಿಯಿಂದ ಉಪಯುಕ್ತವಾಗುತ್ತಿದ್ದುದಲ್ಲದೆ, ದುಬಾರೆ ಅರಣ್ಯದಲ್ಲಿ ನೆಲೆನಿಂತವರಿಗೂ ಸಂಪರ್ಕ ಕಲ್ಪಿಸಿದಂತಾಗುತ್ತಿತ್ತು. ಆದರೆ ಅದ್ಯಾಕೋ ಇದರ ಬಗ್ಗೆ ಯಾರೂ ಸೊಲ್ಲೆತ್ತದಿರುವುದರಿಂದ ಪ್ರಶ್ನೆಯಾಗಿಯೇ ಉಳಿಯುತ್ತಿದೆ.
ಕಳೆದ ಒಂದೆರಡು ದಶಕಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ನಿರೀಕ್ಷೆ ಮೀರಿ ಬೆಳೆದಿದೆ. ಇದಕ್ಕೆ ಕಾರಣ ಇಲ್ಲಿರುವ ಪ್ರವಾಸಿ ತಾಣಗಳಾಗಿವೆ. ಆದರೆ ಈ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಮಾಡದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಸಾಮಾನ್ಯವಾಗಿ ಹೆಚ್ಚು ಯಾವ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೋ ಆ ತಾಣಗಳನ್ನು ಅಭಿವೃದ್ಧಿಪಡಿಸಿದರೆ ಅದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದಲ್ಲದೆ, ಆದಾಯವೂ ಹೆಚ್ಚುತ್ತದೆ. ಆದರೆ ಆ ಕೆಲಸಗಳು ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ.

ಇವತ್ತು ಕೊಡಗಿನಲ್ಲಿ ಹತ್ತು ಹಲವು ಪ್ರವಾಸಿ ತಾಣಗಳಿದ್ದರೂ ಅವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಅಲ್ಲಿ ಅಭಿವೃದ್ದಿ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅದು ನಿಜವೂ ಹೌದು. ದೂರದಿಂದ ಬರುವ ಪ್ರವಾಸಿಗರು ಹತ್ತು ಹಲವು ಕನಸು ಹೊತ್ತು ಬರುತ್ತಾರೆ. ಹೀಗೆ ಬಂದವರಿಗೆ ಇಲ್ಲಿ ನಿರಾಸೆಯಾಗದಂತೆ ನೋಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ದುಬಾರೆ ಕಾವೇರಿ ನದಿಗೆ ತೂಗುಸೇತುವೆ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಸಲಹೆಗಳಾಗಿವೆ.
ಪರಿಸರ ಪ್ರೇಮಿಗಳು ಹೇಳುವುದೇನು?
ಹಾಗೆನೋಡಿದರೆ ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮಕ್ಕೆ ತೆರಳಲು ಅನುಕೂಲವಾಗುವಂತೆ ಕಾವೇರಿ ನದಿಗೆ ತೂಗುಸೇತುವೆ ನಿರ್ಮಿಸಿರುವ ಮಾದರಿಯಲ್ಲಿಯೇ ನಂಜರಾಯಪಟ್ಟಣ ಸಮೀಪದ ದುಬಾರೆ ಆನೆ ಶಿಬಿರಕ್ಕೂ ತೂಗುಸೇತುವೆ ನಿರ್ಮಾಣದ ಚಿಂತನೆಯನ್ನು ಅರಣ್ಯ ಇಲಾಖೆ ಈ ಹಿಂದೆಯೇ ಮಾಡಿತ್ತು. ಆದರೆ ಅದು ಇಲ್ಲಿಯವರೆಗೆ ಆಗದೆ ಇರುವುದಕ್ಕೆ ಕಾರಣಗಳು ಮಾತ್ರ ತಿಳಿದು ಬರುತ್ತಿಲ್ಲ. ಇನ್ನು ಇಲ್ಲಿ ತೂಗುಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯ ಮಾಡಲು ಕಾರಣಗಳು ಅನೇಕ ಇದ್ದು ಅದರಲ್ಲಿ ಬಹುಮುಖ್ಯವಾಗಿ ಇಲ್ಲಿ ಮೋಟಾರ್ ಬೋಟ್ ಗಳು ಓಡಾಡುತ್ತಿದ್ದು ಇದರಿಂದ ನೀರು ಮಾಲಿನ್ಯವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು.

ಇದು ನಿಜವೂ ಹೌದು ಕಾವೇರಿ ನದಿ ದಡದಿಂದ ಆನೆ ಶಿಬಿರಕ್ಕೆ ಹೋಗಬೇಕಾದರೆ ಮೋಟಾರ್ ಬೋಟ್ ಗಳನ್ನು ಅವಲಂಬಿಸಬೇಕಾಗಿದೆ. ಏಕೆಂದರೆ ದುಬಾರೆ ಆನೆಶಿಬಿರದ ಸುತ್ತ ಕಾವೇರಿ ನದಿ ಹಾದು ಹೋಗುವುದರೊಂದಿಗೆ ದ್ವೀಪವನ್ನು ಸೃಷ್ಟಿ ಮಾಡಿದ್ದು ಇಲ್ಲಿಗೆ ತೆರಳಬೇಕಾದರೆ ಮೋಟಾರ್ ಬೋಟ್ ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಈ ಮೋಟಾರ್ ಬೋಟ್ ಗಳು ಉಗುಳುವ ಹೊಗೆ, ಸೋರುವ ಆಯಿಲ್ ನಿಂದ ಕಾವೇರಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಆರೋಪಗಳನ್ನು ಪರಿಸರ ಪ್ರೇಮಿಗಳು ಮಾಡುತ್ತಲೇ ಬರುತ್ತಿದ್ದಾರೆ.
ತೂಗುಸೇತುವೆಯಿಂದ ಏನೆಲ್ಲ ಅನುಕೂಲ?
ಇದಷ್ಟೆ ಅಲ್ಲದೆ ದುಬಾರೆ ಆನೆಶಿಬಿರದಲ್ಲಿ ವಾಸವಿರುವ ಗಿರಿಜನ ಕುಟುಂಬಗಳು, ಮಕ್ಕಳು, ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸಂಪರ್ಕಕ್ಕಾಗಿ ಬೋಟ್‌ಗಳನ್ನೇ ಅವಲಂಭಿಸಬೇಕಾಗಿದೆ. ಏನಾದರೂ ತೊಂದರೆಯಾಯಿತೆಂದರೆ ತಕ್ಷಣಕ್ಕೆ ನದಿ ದಾಟಿ ಬರುವುದು ಅಸಾಧ್ಯವಾಗಿದೆ. ಆದ್ದರಿಂದ ಇಲ್ಲಿಗೆ ತೂಗುಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬಹು ದಿನಗಳ ಒತ್ತಾಯವಾಗಿದೆ. ಒಂದು ವೇಳೆ ತೂಗುಸೇತುವೆ ಇಲ್ಲಿ ಸಾಕಾರಗೊಂಡದ್ದೇ ಆದರೆ ದುಬಾರೆಗೆ ತೆರಳುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆನೆಶಿಬಿರದಲ್ಲಿರುವ ಅಂಗನವಾಡಿ, ಶಾಲೆಗೆ ತೆರಳುವ ಶಿಕ್ಷಕರಿಗೆ ಹಾಗೆಯೇ ಅಲ್ಲಿರುವ ವಿದ್ಯಾರ್ಥಿಗಳು ಹೊರಗೆ ಹೋಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ. ಬಹಳಷ್ಟು ಮಕ್ಕಳು ನದಿದಾಟಿ ಹೋಗಲಾಗದೆ ಶಾಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇತಿಶ್ರೀ ಹಾಡಲಿದೆ.

ದೂರದಿಂದ ಬರುವ ಪ್ರವಾಸಿಗರು ನಂಜರಾಯಪಟ್ಟಣದ ಕಾವೇರಿ ನದಿಯಿಂದ ಬೋಟ್ ನಲ್ಲಿ ತೆರಳಬೇಕಲ್ಲ ಎಂಬ ಕಾರಣಕ್ಕೆ ಆನೆಶಿಬಿರಕ್ಕೆ ತೆರಳದೆ ಹಿಂತಿರುಗಿಬಿಡುತ್ತಾರೆ. ಇನ್ನು ಬೋಟ್‌ಗಳಲ್ಲಿ ಪ್ರವಾಸಿಗರಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಾರೆ ಎಂಬ ಆರೋಪವೂ ಇಲ್ಲದಿಲ್ಲ. ಇದೆಲ್ಲವನ್ನು ತಡೆಯಬೇಕಾದರೆ ತೂಗುಸೇತುವೆ ಅನಿವಾರ್ಯವಾಗಿದೆ ಎಂಬುದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮತ್ತು ಸ್ಥಳೀಯರ ಮನದಾಳದ ಮಾತಾಗಿದೆ. ಇನ್ನು ಬೋಟುಗಳ ಮೂಲಕ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ದೂರುಗಳು ಹಲವು ವರ್ಷಗಳ ಹಿಂದಿನಿಂದಲೂ ಬರುತ್ತಲೇ ಇದೆ.
ಸದ್ಯ ಬೋಟ್ ಅವಲಂಬನೆ ಅನಿವಾರ್ಯ
ತೂಗುಸೇತುವೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುವ ಸಾಧ್ಯತೆಯಿದ್ದು, ಈಗಿನ ಪರಿಸ್ಥಿತಿಯಲ್ಲಿ ಸರ್ಕಾರ ಅಷ್ಟೊಂದು ಅನುದಾನ ಒದಗಿಸುವುದು ಸಂಶಯವೇ ಆದುದರಿಂದ ಆಗೊಮ್ಮೆ ಈಗೊಮ್ಮೆ ದುಬಾರೆಗೆ ತೂಗುಸೇತುವೆ ನಿರ್ಮಾಣದ ಕುರಿತಂತೆ ವಿಚಾರಗಳು ಮುನ್ನಲೆಗೆ ಬರುತ್ತವೆಯಾದರೂ ಆ ನಂತರ ಮರೆತು ಹೋಗುತ್ತವೆ. ಹೀಗಾಗಿ ದುಬಾರೆ ಆನೆಶಿಬಿರದಲ್ಲಿ ನೆಲೆಸಿದವರು ಬೋಟ್ ಗಳನ್ನು ಅವಲಂಬಿಸುವುದು ಮುಂದುವರೆಯುತ್ತದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications