ಕೊಡಗಿನಲ್ಲಿ ಇಂದು ಕೈಲ್ ಮುಹೂರ್ತ ಸಂಭ್ರಮ: ಇದರ ವಿಶೇಷತೆ ಗೊತ್ತಾ?

ಸುರಿಯುವ ಮಳೆಗೆ..ಕೊರೆಯುವ ಚಳಿಗೆ..ಸಮಯದ ಅರಿವಿಲ್ಲದೆ ವಿಶಾಲ ಗದ್ದೆ ಬಯಲನ್ನು ಉತ್ತು, ಬಿತ್ತಿ, ತಿಂಗಳಾನುಗಟ್ಟಲೆ ಸೊಂಟ ಬಗ್ಗಿಸಿ ಕೆಸರುಗದ್ದೆಯಲ್ಲಿ ನಾಟಿ ಮಾಡಿ ಭತ್ತದ ಕೃಷಿ ಕಾರ್ಯವನ್ನು ಮುಗಿಸಿದ ಸಂಭ್ರಮದಲ್ಲಿ ಕೊಡಗಿನ ಮಂದಿ ಆಚರಿಸುವ ಹಬ್ಬವೇ ಕೈಲ್ ಮುಹೂರ್ತವಾಗಿದ್ದು, ಇವತ್ತು (ಸೆ.3) ಎಲ್ಲರ ಮನೆಯಲ್ಲಿಯೂ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಕೊಡಗಿನಲ್ಲಿ ಪ್ರತಿವರ್ಷ ಸೆ.3ರಂದು ಕೈಲ್ ಮುಹೂರ್ತ ಹಬ್ಬದ ಆಚರಣೆ ನಡೆಯುತ್ತದೆ. ಇದು ತಲತಲಾಂತರದಿಂದ ಬಂದ ಆಚರಣೆಯಾಗಿದ್ದು, ಇವತ್ತಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶದಲ್ಲಿಯೇ ಕೊಡಗು ಜಿಲ್ಲೆಯಲ್ಲಿನ ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆ ವಿಭಿನ್ನವಾಗಿದ್ದು, ಹಿರಿಯರು ನಡೆಸಿಕೊಂಡು ಬಂದಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಕೊಡಗಿನಲ್ಲಿ ಕೇವಲ ಮೂರು ಹಬ್ಬಗಳನ್ನು ಮಾತ್ರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

What Is The Speciality Of Kyle Muhurta Festival Is Celebrated In Kodagu

ಇದೀಗ ಭತ್ತದ ನಾಟಿ ಮಾಡಿ ಮುಗಿಸಿದ ಹಿನ್ನಲೆಯಲ್ಲಿ ಹೊಟ್ಟೆ ತುಂಬಾ ಉಂಡು.. ಕಂಠಮಟ್ಟ ಕುಡಿದು..ಸಂಭ್ರಮಿಸುವ ಹಾಗೂ ಮೈದಾನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಕ್ರೀಡಾ ಕೌಶಲ್ಯತೆಯನ್ನು ಪ್ರದರ್ಶಿಸುವ ಹಿನ್ನಲೆಯಲ್ಲಿ ಹಬ್ಬದ ಆಚರಣೆಯನ್ನು ತರಲಾಗಿದೆ. "ಕೈಲ್‌ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‌ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ.

ಪೋರ್ಕ್ ಕರಿ ಕಡಂಬಿಟ್ಟು ಸ್ಪೆಷಲ್

"ಕೈಲ್‌ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಕಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ. ಕೊಡಗಿನಲ್ಲಿ ಕೈಲ್‌ಮುಹೂರ್ತ ಹಬ್ಬದ ದಿನದಂದು ಮೇಲ್ನೋಟಕ್ಕೆ ಕಂಡುಬರುವ ಹಬ್ಬದ ದೃಶ್ಯಗಳೆಂದರೆ ಊರ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ನಡೆಯುತ್ತಿರುತ್ತವೆ. ಮನೆಗಳಲ್ಲಿ ಹಂದಿಮಾಂಸದ ಸಾರು ಹಾಗೂ ಅಕ್ಕಿ ಕಡಂಬಿಟ್ಟು(ಕಡುಬು)ನ ಅಡುಗೆ ಘಮಘಮಿಸುತ್ತಿರುತ್ತದೆ. ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಸಾಂಪ್ರದಾಯಿಕವಾಗಿ ಮದ್ಯ ಸೇವಿಸಿ ಖುಷಿ ಪಡುವುದು ಇಲ್ಲಿನ ವಿಶೇಷವಾಗಿದೆ. ಹಾಗೆಂದು ಹಬ್ಬ ಕುಡಿಯುವುದು ತಿನ್ನುವುದರಲ್ಲಿ ಕಳೆದು ಹೋಗುವುದಿಲ್ಲ.

What Is The Speciality Of Kyle Muhurta Festival Is Celebrated In Kodagu

ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.)

ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗಿ ಕಾಫಿ ತೋಟಗಳು ತಲೆ ಎತ್ತಿರುವುದರಿಂದ ಹಾಗೂ ಎತ್ತಿನ ಬದಲಾಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳ ಬದಲಿಗೆ ಗೋಪೂಜೆ ಮಾಡುವುದು ಕೆಲವೆಡೆ ಕಂಡು ಬರುತ್ತದೆ.

ಆಚರಣೆ ಹೇಗೆ ನಡೆಯುತ್ತದೆ ಗೊತ್ತಾ?

ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸುತ್ತಾರೆ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ. (ಇದನ್ನು ಕೊಡವ ಭಾಷೆಯಲ್ಲಿ ಆಪ್‌ಪತರ್ ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ.

ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು. ಆದುದರಿಂದಲೇ ಇಂದಿಗೂ ಈ ಹಬ್ಬದಲ್ಲಿ ಮಾಂಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ.

ಎಲ್ಲೆಡೆ ಕಲೆತು ಸಂಭ್ರಮಿಸುವ ಜನ

ಇಂದು ಎಲ್ಲವೂ ಬದಲಾಗಿದೆ ಆದರೆ ಸಾಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‌ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.ಸಾಮಾನ್ಯವಾಗಿ ಕೈಲ್‌ ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹದು.

ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಬ್ಬ ಕಳೆದ ನಂತರ ಕೈಲ್‌ಮುಹೂರ್ತ ಸಂತೋಷಕೂಟ ಏರ್ಪಡಿಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಾರೆ. ಸಾಮಾನ್ಯವಾಗಿ ಕೈಲ್‌ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಾರೆ. ಇದೇ ಇಲ್ಲಿನ ವಿಶೇಷವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+