ಕೊಡಗಿನಲ್ಲಿ ಬಿಪಿಎಲ್ ಕಾರ್ಡಿರುವ ಶ್ರೀಮಂತರಿಗೆ ಕಾದಿದೆ ಶಾಕ್
ಮಡಿಕೇರಿ, ಮಾರ್ಚ್ 21: ಕೊಡಗಿನಲ್ಲಿ ಆರ್ಥಿಕವಾಗಿ ಸಬಲರಾಗಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ಸ್ವಂತ ವಾಹನ ಮತ್ತು ಕಾಫಿ ತೋಟ ಹೊಂದಿ ವರ್ಷಕ್ಕೆ ಮೂರ್ನಾಲ್ಕು ಲಕ್ಷ ರೂಪಾಯಿ ಆದಾಯ ಪಡೆಯುವವರು ಕೂಡ ಬಿಪಿಎಲ್ ಕಾರ್ಡ್‌ನ ಸೌಲಭ್ಯ ಪಡೆಯುತ್ತಿದ್ದು, ಅಂತಹ ಪಡಿತರದಾರರಿಗೆ ಇನ್ಮುಂದೆ ಕಷ್ಟವಾಗಲಿದೆ.
ಸುಳ್ಳು ಮಾಹಿತಿ ನೀಡಿ ಇಲಾಖಾ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಅದನ್ನು ವಾಪಸ್ ಮಾಡದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು, ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರುವ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನವನ್ನು ಹೊಂದಿರುವವರು, ಕುಟುಂಬದ ಸದಸ್ಯರಲ್ಲಿ ಕೇಂದ್ರ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಅಂದರೆ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ, ನೌಕರರು ಇರುವಂತಹ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಮಾಸಿಕ ರೂ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ನಿವೃತ್ತಿ ವೇತನ, ಕುಟುಂಬ ಪಿಂಚಣಿ ಪಡೆಯುವವರು ಇರುವಂತಹ ಕುಟುಂಬಗಳು, ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ, ವ್ಯಾಟ್ ಅಥವಾ ಜಿ.ಎಸ್.ಟಿ ತೆರಿಗೆಯನ್ನು ಪಾವತಿಸುವ ಎಲ್ಲಾ ಕುಟುಂಬಗಳು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿದ್ದಾರೆ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮೂರು ಹೆಕ್ಟೇರ್ (7.5 ಎಕರೆ) ಗಿಂತ ಹೆಚ್ಚಿನ ಒಣಭೂಮಿ (ಡಿ ವರ್ಗದ ಅಥವಾ) ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಹಾಗೂ ಮಾಸಿಕ ರೂ 10 ಸಾವಿರಕ್ಕಿಂತ ಹೆಚ್ಚು ಮನೆ ಬಾಡಿಗೆ ಪಡೆಯುತ್ತಿರುವಂತಹ ಕುಟುಂಬಗಳು, ಕುಟುಂಬದ ಸದಸ್ಯರಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ, ಉದ್ಯೋಗಿಗಳನ್ನು ಹೊಂದಿರುವ ಕುಟುಂಬಗಳಿಗೂ ಬಿಪಿಎಲ್ ಪಡೆಯಲು ಅವಕಾಶವಿಲ್ಲ.
ಒಂದು ವೇಳೆ ಮೇಲಿನ ಅರ್ಹತೆ ಹೊಂದಿದ್ದು ನೀವು ಇದೀಗ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ಹಿಂತಿರುಗಿಸಿ ಕಾನೂನು ಕ್ರಮಗಳಿಂದ ಮುಕ್ತರಾಗಲು ಜತೆಗೆ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾಯಿಸಿಕೊಳ್ಳಲು ಅವಕಾಶವಿದೆ.

ಒಂದು ವೇಳೆ ಬಿಪಿಎಲ್ ಕಾರ್ಡ್ ಹಿಂತಿರುಗಿಸದೆ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ ಸರ್ಕಾರದ ಆದೇಶದಂತೆ ಸೆಪ್ಟಂಬರ್ 23, 1977ರಡಿ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಜತೆಗೆ ಇಲ್ಲಿಯವರೆಗೆ ಪಡೆದಿರುವ ಆಹಾರ ಧಾನ್ಯಗಳ ಮೊಬಲಗನ್ನು ಪ್ರತಿ ಕೆ.ಜಿ ಅಕ್ಕಿಗೆ ರೂ. 35ರಂತೆ ಲೆಕ್ಕ ಹಾಕಿ ದಂಡ ವಸೂಲು ಮಾಡಲಾಗುತ್ತದೆ.












Click it and Unblock the Notifications