ಲಾಕ್‌ಡೌನ್ ನಡುವೆಯೂ ಕೊಡಗಿಗೆ ಬರುತ್ತಿರುವ ಪ್ರವಾಸಿಗರು
ಮಡಿಕೇರಿ, ಜೂನ್ 28: ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇನ್ನೂ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುಂದಿನ ಜುಲೈ 5ನೇ ತಾರೀಖಿನವರೆಗೂ ಲಾಕ್‌ಡೌನ್ ಮುಂದುವರೆಸಿದೆ. ಜಿಲ್ಲೆಯಲ್ಲಿ ಯಾವುದೇ ಹೋಂ ಸ್ಟೇ ಮತ್ತು ಹೋಟೆಲ್‌ಗಳಲ್ಲಿ ಪ್ರವಾಸಿಗರ ಸೇವೆಗೆ ಅವಕಾಶ ನೀಡಿಲ್ಲ.
ಆದರೆ, ಮದುವೆಗೆ ಅವಕಾಶ ನೀಡಲಾಗಿದ್ದು, ಈಗ ಪ್ರವಾಸಿಗರು ಮದುವೆಗೆ ಬಂದಿದೇವೆ ಎಂದು ಹೇಳಿಕೊಂಡು ಜಿಲ್ಲೆಗೆ ಬರುತ್ತಿರುವ ಪ್ರಕರಣ ವರದಿ ಆಗಿದೆ. ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ, ಹೊರ ರಾಜ್ಯ ಮತ್ತು ಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಮವಾರ ನಿಯಮ ಉಲ್ಲಂಘಿಸಿದ ಕೆಲವು ಹೋಂಸ್ಟೇ ಮತ್ತು ಪ್ರವಾಸಿಗರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮರುಕಳಿಸಿದ ಪ್ರವಾಸಿಗರ ಕಲರವ
"ಕೊಡಗಿಗೆ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಕೋವಿಡ್ ವ್ಯಾಪಿಸುವ ಆತಂಕ ಹೆಚ್ಚಾಗಿದೆ. ಕೋವಿಡ್ 2ನೇ ಅಲೆ ಗ್ರಾಮೀಣ ಭಾಗಕ್ಕೆ ಕಾಲಿಡಲು ಹೊರ ಭಾಗದಿಂದ ಬಂದವರೇ ಕಾರಣರಾಗಿದ್ದು, ಇದೀಗ ಪ್ರವಾಸಿಗರಿಂದ ಮತ್ತೊಂದು ಅಪಾಯ ಎದುರಾಗಲಿದೆ,'' ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಕೊಪ್ಪ, ಕರಿಕೆ, ಮಾಕುಟ್ಟ, ಪೆರುಂಬಾಡಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸದಿರುವುದೇ ಇದಕ್ಕೆ ಕಾರಣವಾಗಿದೆ. ಕೇರಳ, ಪಾಂಡಿಚೇರಿ, ಬೆಂಗಳೂರು, ಮೈಸೂರು ನೋಂದಣಿಯ ವಾಹನಗಳೇ ಹೆಚ್ಚು ಸಂಚರಿಸುತ್ತಿವೆ.

ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ 2 ಹೋಂ ಸ್ಟೇಗಳಲ್ಲಿ ಬೆಂಗಳೂರು ಮೂಲದ 15ಕ್ಕೂ ಹೆಚ್ಚು ಪ್ರವಾಸಿಗರು ತಂಗಿರುವ ಕುರಿತು ಮಾಹಿತಿ ಅರಿತ ಮಡಿಕೇರಿ ನಗರ ಪೊಲೀಸರು, ಹೋಂ ಸ್ಟೇ ಮೇಲೆ ದಾಳಿ ನಡೆಸಿದರು. ಹೋಂ ಸ್ಟೇಗಳಿಗೆ ಬೀಗ ಜಡಿದಿದ್ದು, ಮಾಲೀಕರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರತಿಯೊಂದಿಗೆ 2 ಹೋಂ ಸ್ಟೇಗಳ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸರು ಪ್ರವಾಸೋದ್ಯಮ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ.
ಹೋಂಸ್ಟೇಗಳು, ಲಾಡ್ಜ್‌ಗಳು, ವಸತಿ ಗೃಹಗಳ ಮುಂದೆ ಹೊರ ಜಿಲ್ಲೆಗಳ ನೋಂದಣಿ ಹೊಂದಿರುವ ವಾಹನಗಳು ಕಂಡು ಬಂದಲ್ಲಿ ಅಂತಹ ಹೋಂಸ್ಟೇಗಳ ಪರಿಶೀಲಿಸಲಾಗುತ್ತಿದೆ. ಭಾನುವಾರ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸಕಾರಣವಿಲ್ಲದೇ ಸಂಚರಿಸುತ್ತಿದ್ದ ಹೊರ ರಾಜ್ಯ ಮತ್ತು ಜಿಲ್ಲೆಯ ವಾಹನಗಳಿಗೆ ಮಡಿಕೇರಿ ಸಂಚಾರಿ ಠಾಣಾ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಲಾಕ್‌ಡೌನ್ ನಿಯಮ ಉಲ್ಲಂಘನೆಯ ಹಿನ್ನೆಲೆ ಪ್ರವಾಸಿಗರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್‌ನ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, "ಕನಿಷ್ಟ ಮೂರು ತಿಂಗಳ ಮಟ್ಟಿಗಾದರೂ ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಿಷೇಧ ಹೇರಲೇಬೇಕಿದೆ. ಮುಂದಿನ ತಿಂಗಳುಗಳಲ್ಲಿ ಮೂರನೇ ಅಲೆಯೂ ಆರಂಭಗೊಳ್ಳಲಿದ್ದು, ಇದರ ಪರಿಣಾಮ ನೋಡಿಕೊಂಡು ನಂತರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಿ,'' ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

Recommended Video
"ಕೊಡಗನ್ನು ಕೊಡಗನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮ ಗುರಿ ಎಂದ ಅವರು, ಮೂರು ದಿನಕ್ಕೆ ಬರುವ ಪ್ರವಾಸಿಗರು ಇಲ್ಲಿಗೆ ಬಂದು ಖಾಯಿಲೆ ಹರಡಿ ಹೋದರೆ ಅನುಭವಿಸಬೇಕಾದವರು ಇಲ್ಲಿಯವರೇ ಎಂಬುದನ್ನು ಮರೆಯಬಾರದು,'' ಎಂದರು.












Click it and Unblock the Notifications