SSLC Result: ಕೊಡಗಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆ
ಮಡಿಕೇರಿ, ಮೇ. 10 : ನಿನ್ನೆಯಷ್ಟೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಖುಷಿಯಲ್ಲಿದ್ದಾರೆ. ಆದರೆ, ಕೊಡಗಿನ ಈ ಮನೆಯಲ್ಲಿ ಮಾತ್ರ ಸೂತಕದ ವಾತಾವರಣ ತುಂಬಿಕೊಂಡಿದೆ. ಅದಕ್ಕೆ ಕಾರಣ ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಮಗಳ ಬರ್ಬರ ಹತ್ಯೆಯಾಗಿದೆ.
ಹೌದು... ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯಾಗಿದೆ. ಹತ್ತನೇ ತರಗತಿ ಬಾಲಕಿಯನ್ನು 30 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿ ವಿದ್ಯಾರ್ಥಿನಿ ತಲೆ ಕತ್ತರಿಸಿ ರುಂಡ ಮುಂಡ ಬೇರೆ ಬೇರೆ ಬಿಸಾಕಿದ್ದಾರೆ.

ಮೃತ ಬಾಲಕಿಯನ್ನು ಸೂರಲಬ್ಬಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯುಎಸ್ ಮೀನಾ ಎಂದು ಗುರುತಿಸಲಾಗಿದೆ. ಮೀನಾ ಸುಬ್ರಮಣಿ ಮತ್ತು ಮುತ್ತಕ್ಕಿ ದಂಪತಿಯ ಒಬ್ಬಳೇ ಮಗಳಾಗಿದ್ದ ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದರು. ಪರೀಕ್ಷೆಯಲ್ಲಿ ಉತೀರ್ಣರಾಗುವ ಮೂಲಕ ತನ್ನ ಶಾಲೆಗೆ 100% ಫಲಿತಾಂಶ ತಂದು ಕೊಟ್ಟಿದ್ದರು.
ಹತ್ಯೆ ಮಾಡೀದ ಆರೋಪಿಯನ್ನು ಗ್ರಾಮದ ನಿವಾಸಿ ಓಂಕಾರಪ್ಪ (ಪಾಪು) ಎಂದು ಗುರುತಿಸಲಾಗಿದೆ. ಆರೋಪಿಯೊಂದಿಗೆ ಬಾಲಕಿಯ ನಿಶ್ಚಿತಾರ್ಥ ಮಾಡಲಾಗುತ್ತಿತ್ತು. ಆದರೆ, ಆಕೆ ಅಪ್ರಾಪ್ತ ಬಾಲಕಿ ಆಗಿರುವ ಕಾರಣ ಪೊಲೀಸರು ಮಧ್ಯ ಪ್ರವೇಶಿಸಿ ನಿಶ್ಚಿತಾರ್ಥ ನಿಲ್ಲಿಸಿದ್ದರು ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಫಲಿತಾಂಶ ಕೂಡ ಪ್ರಕಟವಾಗಿದೆ. ಆರೋಪಿ ಸಂತ್ರಸ್ತೆಯನ್ನು ಆಕೆಯ ಪೋಷಕರ ಮುಂದೆಯೇ ಮನೆಯಿಂದ ಕರೆದುಕೊಂಡು ಬಂದು ಹತ್ಯೆ ಮಾಡಿದ್ದಾನೆ.

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಯೊಂದಿಗೆ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥವನ್ನು ಕುಟುಂಬದವರು ನಿಶ್ಚಯಿಸಿದ್ದರು ಎಂದು ಎಸ್ಪಿ ಕೆ.ರಾಮರಾಜನ್ ಖಚಿತಪಡಿಸಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕುಟುಂಬವನ್ನು ಭೇಟಿ ಮಾಡಿ ಬಾಲಕಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡುವಂತೆ ಮನವೊಲಿಸಿದ್ದರು. ಇದೇ ಸಿಟ್ಟಿನಲ್ಲಿ ಆರೋಪಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.












Click it and Unblock the Notifications