ಬೋಡು ನಮ್ಮೆಗೆ ವಿದಾಯ ಹೇಳಲು ಸಜ್ಜಾದ ಬುಡಕಟ್ಟು ಮಂದಿ: ಈ ವಿಚಿತ್ರ ಆಚರಣೆಯ ವಿಶೇಷತೆ ಏನು..?
ಮಡಿಕೇರಿ, ಮೇ 22: ಕೊಡಗಿನಲ್ಲಿ ಇದುವರೆಗೆ ನಡೆಯುತ್ತಿದ್ದ ವಿಭಿನ್ನ ಹಬ್ಬವಾದ ಬೋಡು ಹಬ್ಬಕ್ಕೆ ತೆರೆ ಬೀಳುವ ಸಮಯ ಬಂದಿದೆ. ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನಲ್ಲಿ ಆರಂಭಗೊಂಡ ಹಬ್ಬ ಬಳಿಕ ಹಳ್ಳಿಗಟ್ಟುವಿನಲ್ಲಿ ನಡೆದಿತ್ತು. ಇದೀಗ ದೇವರಪುರದ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಎರಡು ದಿನ (ಮೇ 24 ಮತ್ತು 25) ಗಳ ಕಾಲ ನಡೆಯುವುದರೊಂದಿಗೆ ಈ ವರ್ಷದ ಹಬ್ಬಕ್ಕೆ ತೆರೆ ಬೀಳಲಿದೆ. ಸಿಕ್ಕವರಿಗೆ ಬೈದು ಕುಣಿದು, ಕುಡಿದು ಹಬ್ಬಕ್ಕೆ ವಿದಾಯ ಹೇಳಲು ಬುಡಕಟ್ಟು ಮಂದಿ ಸಜ್ಜಾಗಿದ್ದಾರೆ.
ಹಬ್ಬದ ಅಂಗವಾಗಿ ಮೇ 24ರ ಗುರುವಾರ ಮಧ್ಯಾಹ್ನ ಕುದುರೆ ತೆಗೆಯುವುದು ಕಿರಾತೇಶ್ವರ ದೇವಾಲಯದಲ್ಲಿ ಹಾಗೂ ಭದ್ರಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರದೊಂದಿಗೆ ಆರಂಭವಾಗಲಿದೆ. ಬಳಿಕ ವೇಷಧಾರಿಗಳೆಲ್ಲರೂ ಮೇ 25ರಂದು ದೇವಾಲಯದಲ್ಲಿ ಸೇರಿ ಪೂಜೆ ಸಲ್ಲಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಮೇಲ್ನೋಟಕ್ಕೆ ಈ ಹಬ್ಬ ವಿಚಿತ್ರವಾದರೂ ವಿಶಿಷ್ಟ ಹಬ್ಬವಾಗಿದೆ. ಇದನ್ನು ಬೋಡು ನಮ್ಮೆ(ಹಬ್ಬ), ಕುಂಡೆನಮ್ಮೆ, ಬೈಗುಳದ ಹಬ್ಬ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ಈ ಹಬ್ಬ ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಈ ಹಬ್ಬದ ದಿನದಂದು ದಾರಿಯಲ್ಲಿ ಸಿಕ್ಕವರಿಗೆಲ್ಲಾ ಅಶ್ಲೀಲ ಪದಗಳಿಂದ ಬೈಯ್ಯುತ್ತಾ ಹಣ ವಸೂಲಿ ಮಾಡುವುದರಿಂದ "ಬೈಗುಳದ ಹಬ್ಬ" ಎಂದು ಕೆಲವರು ಕರೆಯುತ್ತಾರೆ. ಈ ಹಬ್ಬಕ್ಕೆ ಹುಣಸೂರು, ಗೋಣಿಕೊಪ್ಪ, ತಿತಿಮತಿ, ಪಾಲಿಬೆಟ್ಟ, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ ಮೊದಲಾದ ಕಡೆಗಳಿಂದ ಸಾವಿರಾರು ಬುಡಕಟ್ಟು ಮಂದಿ ಅಗಮಿಸುತ್ತಾರೆ.
ಸಿಕ್ಕ ಸಿಕ್ಕವರಿಗೆ ಬೈಯ್ಯುವ ಬುಡಕಟ್ಟು ಮಂದಿ
ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಹಬ್ಬದಲ್ಲಿ ಅಶ್ಲೀಲ ಪದಗಳನ್ನು ನುಡಿಯುತ್ತಾ... ಕುಂಡೇ...ಕುಂಡೇ... ಎನ್ನುತ್ತಾ ಮಹಿಳೆಯರ (ಒಳಉಡುಪು ಸೇರಿದಂತೆ) ಉಡುಪುಗಳನ್ನು ವಿಚಿತ್ರವಾಗಿ ಧರಿಸಿ, ಕೈಯ್ಯಲ್ಲಿ ಸೋರೆಕಾಯಿ ಬುರುಡೆ, ದೊಣ್ಣೆಗಳನ್ನು ಹಿಡಿದು ಕಂಠಪೂರ್ತಿ ಕುಡಿದು ಮನೆಮನೆಗೆ ತೆರಳಿ ಭಿಕ್ಷೆ ಬೇಡಿ, ದಾರಿಯಲ್ಲಿ ಸಿಕ್ಕವರನ್ನು ಅಡ್ಡ ಹಾಕಿ ಬೈದು ಹಣ ವಸೂಲಿ ಮಾಡಿ, ನಂತರ ತಾವು ಮಾಡಿದ್ದಕ್ಕೆ ಕ್ಷಮೆ ಕೇಳುವುದು ಈ ಹಬ್ಬದಲ್ಲಿ ಮೇಲ್ನೋಟಕ್ಕೆ ಕಂಡು ಬರುವ ದೃಶ್ಯವಾಗಿದೆ.
ಹಬ್ಬದ ದಿನದಂದು ಮೈಗೆಲ್ಲಾ ಮಸಿಬಳಿದುಕೊಂಡು ವಿಚಿತ್ರ ವೇಷ ಭೂಷಣ ತೊಟ್ಟು ಮನೆಯಿಂದ ಹೊರಡುವ ವೇಷಧಾರಿಗಳು ದಾರಿಯುದ್ದಕ್ಕೂ ಎದುರಿಗೆ ಸಿಕ್ಕ ಜನರನ್ನು ಬೈಯ್ಯುತ್ತಲೇ ಸಾಗುತ್ತಾರೆ. ಅಷ್ಟೇ ಅಲ್ಲ ರಸ್ತೆಗಳಲ್ಲಿ ಸಾಗುವ ವಾಹನಗಳನ್ನು ಕೂಡ ತಡೆದು ಅವರಿಂದ ಹಣ ವಸೂಲಿ ಮಾಡುತ್ತಾರೆ. ಅವತ್ತು ತಾವು ಕೆಲಸ ಮಾಡುವ ತೋಟದ ಮಾಲೀಕರನ್ನು ಕೂಡ ಬಿಡದೆ ಬೈಯ್ಯುತ್ತಾರೆ.

ಜೊತೆಗೆ ದೇವರಿಗೂ ಮನಬಂದಂತೆ ಬೈಯ್ಯುತ್ತಾರೆ. ಕೇಳಿದ ತಕ್ಷಣ ಹಣ ಕೊಟ್ಟರೆ ಒಳ್ಳೆ ಕುಂಡೆ ಎನ್ನುವ ವೇಷಧಾರಿಗಳು ಹಣ ಕೊಡದಿದ್ದರೆ ಕೆಟ್ಟ ಕುಂಡೆ ಎನ್ನುತ್ತಾ ಅವರ ಸುತ್ತುವರಿದು ಅಶ್ಲೀಲ ಪದಗಳ ಮಳೆಗರೆಯುತ್ತಾ ಹಣ ವಸೂಲಿ ಮಾಡದೆ ಅಲ್ಲಿಂದ ಮುಂದಕ್ಕೆ ಕದಲುವುದಿಲ್ಲ. ಹೀಗೆ ಎಲ್ಲೆಡೆಯಿಂದ ಆಗಮಿಸುವ ವೇಷಧಾರಿಗಳು ಸಂಜೆ ವೇಳೆಗೆ ದೇವರಪುರದ ಅಯ್ಯಪ್ಪ ದೇವಾಲಯದಲ್ಲಿ ನೆರೆದು ಸಾಂಪ್ರದಾಯಿಕ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ಹರಕೆ ಹೊತ್ತವರಿಂದ ಕೀಲು ಕುದುರೆ ನೃತ್ಯ
ಇದೇ ಸಂದರ್ಭದಲ್ಲಿ ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆಹೊತ್ತ ಮಂದಿ ಈ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಕುಂಡೆ ಹಬ್ಬದ ಸಂದರ್ಭ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ದೇವರಪುರದಲ್ಲಿ ನಡೆಯುವ ಕುಂಡೆ ಹಬ್ಬಕ್ಕೆ ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು. ಇನ್ನು ಬುಡಕಟ್ಟು ಜನಾಂಗದ ವೇಷಧಾರಿಗಳು ದೇವರನ್ನು ಮನಬಂದಂತೆ ಬಯ್ಯುವುದಕ್ಕೆ ಕಾರಣವೇನು? ಕುಂಡೆ ಹಬ್ಬ ಎಂಬ ಹೆಸರು ಹೇಗೆ ಬಂತು ಎಂಬುವುದಕ್ಕೂ ಇಲ್ಲೊಂದು ದಂತ ಕಥೆಯಿರುವುದನ್ನು ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಬುಡಕಟ್ಟು ಮಂದಿಯನ್ನು ಬೇಟೆಗೆಂದು ಅಯ್ಯಪ್ಪ ಕಾಡಿಗೆ ಕರೆದುಕೊಂಡು ಹೋಗಿದ್ದನಂತೆ. ಕಾಡನ್ನೆಲ್ಲಾ ಸುತ್ತಾಡಿ ಬೇಟೆಯಾಡಿದ ಬಳಿಕ ಬುಡಕಟ್ಟು ಮಂದಿಯನ್ನು ಕಾಡಿನಲ್ಲಿಯೇ ಬಿಟ್ಟು ಈಗ ಬರುತ್ತೇನೆಂದು ಹೇಳಿ ಹೋದ ಅಯ್ಯಪ್ಪ ಬಹಳ ಸಮಯವಾದರೂ ಬರಲಿಲ್ಲವಂತೆ.
ಕೋಪಗೊಂಡ ಶಿವ ಶಾಪ ಹಾಕಿದನಂತೆ
ಆತನನ್ನು ಕಾದು ಸುಸ್ತಾದ ಬುಡಕಟ್ಟು ಮಂದಿ ಅಯ್ಯಪ್ಪ ಹೋದ ಹಾದಿಯಲ್ಲಿ ಆತನನ್ನು ಹುಡುಕುತ್ತಾ ಹೋದರಂತೆ. ಹೀಗೆ ಹೋದ ಬುಡಕಟ್ಟು ಮಂದಿಗೆ ಅಯ್ಯಪ್ಪ ಭದ್ರಕಾಳಿಯೊಂದಿಗೆ ಸರಸವಾಡುತ್ತಿರುವುದು ಕಾಣಿಸಿತಂತೆ. ಇದರಿಂದ ಕೋಪಗೊಂಡ ಬುಡಕಟ್ಟು ಮಂದಿ ಅಯ್ಯಪ್ಪನನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರಂತೆ. ಬುಡಕಟ್ಟು ಮಂದಿಗೆ ಅಯ್ಯಪ್ಪ ಹಿಂಭಾಗ ತೋರಿಸಿದ ಕಾರಣ ಕುಂಡೇ... ಕುಂಡೇ... ಎಂದು ಹೀಯಾಳಿಸುವುದು ರೂಢಿಗೆ ಬಂತೆಂದು ಹೇಳಲಾಗುತ್ತಿದೆ.
ಹಬ್ಬದ ಸಂದರ್ಭ ನಡೆಯುವ ಕೀಲು ಕುದುರೆ ನೃತ್ಯದ ಹಿಂದೆಯೂ ಮತ್ತೊಂದು ಸ್ವಾರಸ್ಯಕರ ಕಥೆಯಿದೆ. ಅದೇನೆಂದರೆ ಅರ್ಜುನ ಮತ್ತು ಶಿವ ಕೇರಳದಿಂದ ಪುಲಪಳ್ಳಿ ಎಂಬಲ್ಲಿಗೆ ಹೋದಾಗ ಇಬ್ಬರು ನಪುಂಸಕರು ಸೀರೆಯುಟ್ಟು ಮೋಹಿನಿಯಾಗಿ ನರ್ತಿಸಿ ವಂಚಿಸಿದರಂತೆ. ಈ ಸಂದರ್ಭದಲ್ಲಿ ಕೋಪಗೊಂಡ ಶಿವ ನೀವು ಕುದುರೆಯಾಗಿ ಎಂದು ಶಾಪ ಹಾಕಿದನಂತೆ. ಆದುದರಿಂದ ಈ ಹಬ್ಬದಲ್ಲಿ ಕೀಲು ಕುದುರೆ ನೃತ್ಯ ಇಂದಿಗೂ ನಡೆದುಕೊಂಡು ಬರುತ್ತಿದೆ.
ದೇವರಿಗೆ, ಜನರಿಗೆ ಬೈದದಕ್ಕೆ ಕ್ಷಮೆಯಾಚನೆ
ಕುಂಡೆ ಹಬ್ಬದ ಸಂದರ್ಭ ನಡೆಯುವ ಪೂಜಾ ಕಾರ್ಯಗಳಲ್ಲಿ ಇತರರು ಭಾಗವಹಿಸುತ್ತಾರೆಯಾದರೂ ಹಬ್ಬದ ಆಚರಣೆಯ ಬಹುಪಾಲು ಬುಡಕಟ್ಟು ಮಂದಿಗೆ ಮೀಸಲಾಗಿರುತ್ತದೆ. ವಿಚಿತ್ರ ಉಡುಗೆ ತೊಡುಗೆಗಳನ್ನು ತೊಟ್ಟು ಕೈಯ್ಯಲ್ಲಿ ಬುರುಡೆ ಹಿಡಿದು ದೇವರಪುರದತ್ತ ಹೊರಡುವ ವೇಷಧಾರಿಗಳ ಪೈಕಿ ಹೆಚ್ಚಿನವರು ವಸೂಲಿಯಾದ ಹಣದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಾ ದೇವಾಲಯವನ್ನು ತಲುಪುವ ಮುನ್ನವೇ ರಸ್ತೆ ಬದಿಯಲ್ಲೋ, ಚರಂಡಿಯಲ್ಲೋ ಬಿದ್ದು ಹೆಂಡದ ನಶೆಯಿಳಿದ ಬಳಿಕ ಸಂಜೆ ಭದ್ರಕಾಳಿ ದೇವಾಲಯದತ್ತ ತೆರಳಿ ದೇವರಿಗೆ ಹಾಗೂ ಜನರಿಗೆ ಬೈದುದಕ್ಕೆ ತಪ್ಪಾಯಿತೆಂದೂ, ತಪ್ಪನ್ನು ಮನ್ನಿಸುವಂತೆಯೂ ಭದ್ರಕಾಳಿಯೊಂದಿಗೆ ಬೇಡಿಕೊಳ್ಳುತ್ತಾರೆ. ಇನ್ನು ಇದೇ ಸಂದರ್ಭ ಅಯ್ಯಪ್ಪ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಗಳು ಕೂಡ ನಡೆಯುತ್ತವೆ. ಅಲ್ಲಿಗೆ ಹಬ್ಬವೂ ಮುಗಿದು ಹೋಗುತ್ತದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications