ಕೊಡಗಿನಲ್ಲಿ ಯೋಧನ ಪ್ರತಿಮೆ; ರಾಷ್ಟ್ರ ಲಾಂಛನ ನಿರ್ಮಾಣ
ಕೊಡಗಿನ ಕಾವೇರಿ ಜನ್ಮಭೂಮಿ ಟ್ರಸ್ಟ್ ಚೇರಂಗಾಲದ ತಳಾರಬಾಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 10ನೇ ವರ್ಷದ ತವರೂರ ಕೂಟದ ನೆನಪಲ್ಲಿ ಈ ಪುತ್ಥಳಿಯನ್ನು ನಿರ್ಮಿಸಿದೆ.
ಮಡಿಕೇರಿ: ರಾಷ್ಟ್ರದ ಗಡಿಗಳನ್ನು ಪ್ರಾಣದ ಹಂಗು ತೊರೆದು ರಕ್ಷಿಸುವ ಸೈನಿಕನ ಪೂರ್ಣ ಪ್ರಮಾಣದ ಯೋಧನ ಪ್ರತಿಮೆಯನ್ನು ಹೊಂದಿದ ಯುದ್ಧ ಸ್ಮಾರಕ ಮತ್ತು ರಾಷ್ಟ್ರ ಲಾಂಛನ ಸ್ತಂಭವನ್ನು ತಲಕಾವೇರಿ ಬಳಿಯ ಚೇರಂಗಾಲ ಗ್ರಾಮದಲ್ಲಿ ನಿರ್ಮಿಸಲಾಗಿದೆ.
ಇದನ್ನು ಕೊಡಗಿನ ಕಾವೇರಿ ಜನ್ಮಭೂಮಿ ಟ್ರಸ್ಟ್ ಚೇರಂಗಾಲದ ತಳಾರಬಾಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 10ನೇ ವರ್ಷದ ತವರೂರ ಕೂಟದ ನೆನಪಲ್ಲಿ ನಿರ್ಮಿಸಿದೆ.

ಯುದ್ಧ ಸ್ಮಾರಕದ ಸೈನಿಕನ ಪ್ರತಿಮೆಯನ್ನು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ರಾಷ್ಟ್ರ ಲಾಂಛನ ಸ್ತಂಭವನ್ನು ಟೊಯೋಟೋ ಕಿರ್ಲೋಸ್ಕರ್ ಸಂಸ್ಥೆಯ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕೆ. ಸ್ವಾಮಿ ಅವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದರು.
ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಮಾತನಾಡಿ ಯುದ್ಧ ಸಂದರ್ಭದಲ್ಲಿ ಮಾತ್ರ ದೇವರು, ಯೋಧರನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆ ನಂತರ ದೇವರನ್ನು ಹಾಗೂ ಯೋಧರನ್ನು ಮರೆಯುತ್ತೇವೆಂದು ವಿಷಾದಿಸಿದರಲ್ಲದೆ, ಇಂತಹ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ನಾವು ಮುನ್ನಡೆಯಬೇಕಾಗಿದೆ. ಈ ಪರಿಸ್ಥಿತಿಗಳಲ್ಲೂ ಸೈನ್ಯದ ಮೂರು ವಿಭಾಗಗಳನ್ನು ಪ್ರತಿನಿಧಿಸುವ ಯೋಧನ ಸ್ಮಾರಕವನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದಕ್ಕೆ ಶ್ಲಾಘಿಸಿದರು.

ಕಾವೇರಿ ಜನಿಸಿದ ಕೊಡಗಿನಲ್ಲಿ ಭತ್ತದ ಗದ್ದೆಗಳು ಇದೀಗ ಮನೆ ನಿವೇಶನಗಳಾಗುವ ಮೂಲಕ ಪರಿಸರಕ್ಕೆ ಮಾರಕವುಂಟಾಗುತ್ತಿದೆ. ಇಷ್ಟು ಸಾಕಾಗದೆ ಇದೀಗ ರೈಲ್ವೆ, ಚತುಷ್ಪಥ ರಸ್ತೆಗಳಂತಹ ಯೋಜನೆಗಳು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು, ಇವುಗಳ ನಡುವೆ ಮುಂದಿನ ಪೀಳಿಗೆಗೆ ಕೊಡಗಿನ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಕಿವಿ ಮಾತು ಹೇಳಿದರು.

ಲೆಫ್ಟಿನೆಂಟ್ ಜನರಲ್ ಕದಂಬಿ, ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉದ್ಯಮಿ ರಮೇಶ್ ಜಿ. ಪಾಟೀಲ್, ಕಾವೇರಿ ಜನ್ಮಭೂಮಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಸಿ. ರವಿ ಕುಮಾರ್ ಇನ್ನಿತರರು ಇದ್ದರು.












Click it and Unblock the Notifications