ಸಂಪಾಜೆ-ಕಾಟಕೇರಿ ಹೆದ್ದಾರಿ; 14 ಕೋಟಿ ವೆಚ್ಚ, 6 ತಿಂಗಳಲ್ಲಿ ಪೂರ್ಣ
ಮಡಿಕೇರಿ, ಜನವರಿ 03: ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಸಂಪಾಜೆಯ ಗೇಟ್ ಬಳಿ ಸಂಸದ ಪ್ರತಾಪ್ ಸಿಂಹ ಸಂಪಾಜೆ-ಕಾಟಕೇರಿ ನಡುವಿನ 21.6 ಕಿ. ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಸುಮಾರು 14.16 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸಂಸದರು ಹೇಳಿದ್ದೇನು?; ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಸಂಪಾಜೆಯಿಂದ ಸುಂಟಿಕೊಪ್ಪದವರೆಗೆ 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಬೇಕಿದೆ" ಎಂದರು.
'ಕುಶಾಲನಗರದಿಂದ ಸಂಪಾಜೆಯವರೆಗೆ ಅಪಘಾತ ವಲಯವನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಕ್ಕಾಗಿ 500 ಲಕ್ಷ ರೂ. ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ" ಎಂದು ಮಾಹಿತಿ ನೀಡಿದರು.
"ಕೊಡಗು ಜಿಲ್ಲೆಯ ಕುಶಾಲನಗರದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು 1.3 ಕಿ. ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರೀಕರಣಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸಬೇಕಿದೆ" ಎಂದು ಪ್ರತಾಪ್ ಸಿಂಹ ಹೇಳಿದರು.
"ಹೆದ್ದಾರಿಯಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ 8 ಕಡೆ ಸಣ್ಣಪುಟ್ಟ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜೋಡುಪಾಲ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು" ಎಂದು ಸಂಸದರು ವಿವರಣೆ ನೀಡಿದರು.
"2018ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ 19 ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು, 2019ರಲ್ಲಿಯೂ ಸಹ ಅತಿವೃಷ್ಟಿಯಾದ ಕಾರಣ 21 ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ" ಎಂದು ತಿಳಿಸಿದರು.
ಸಚಿವರಿಂದ ಪ್ರಗತಿ ಪರಿಶೀಲನೆ; ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಮಡಿಕೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಕೊಡಗು ಜಿಲ್ಲೆಯ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ನಗರದಲ್ಲಿ ನಿರ್ಮಾಣವಾಗುತ್ತಿರುವ 'ಸುವರ್ಣ ಕರ್ನಾಟಕ ಸಮುಚ್ಚಯ ಭವನ' ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಶಾಸಕ ಡಾ. ಮಂತರ್ ಗೌಡ ಪ್ರಸ್ತಾಪಿಸಿದರು. 9 ವರ್ಷ ಆದರೂ ಸಹ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ, "ಕಾಮಗಾರಿ ಪ್ರಗತಿಯಲ್ಲಿದ್ದು, ಕಟ್ಟಡದ ಒಳಭಾಗದಲ್ಲಿ ಕೆಲಸಗಳು ಪ್ರಗತಿಯಲ್ಲಿದೆ" ಎಂದು ಮಾಹಿತಿ ನೀಡಿದರು.
"ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಪರಿಹರಿಸಲಾಗುವುದು. ಈ ರೀತಿ ಹಣ ಇದ್ದರೂ ಸಹ ಕಾಮಗಾರಿ ಕೈಗೊಳ್ಳದೆ ದಿನದೂಡುತ್ತಿರುವುದು ಏಕೆ?" ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, "ಈಗಾಗಲೇ ಮೊದಲ ಕಂತಿನಲ್ಲಿ 3 ಕೋಟಿ ರೂ., ಎರಡನೇ ಕಂತಿನಲ್ಲಿ 2.50 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ರೂ. ಅನುದಾನ ಇದ್ದು, ಕಾಮಗಾರಿ ಪ್ರಗತಿ ಸಾಧಿಸಬೇಕಿದೆ" ಎಂದರು.
ಭಾಗಮಂಡಲ ಸೇತುವೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ. ಎಸ್. ಪೊನ್ನಣ್ಣ, ಭಾಗಮಂಡಲ ಮೇಲುಸೇತುವೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವರ ಗಮನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಸುವರ್ಣ ಕರ್ನಾಟಕ ಸಮುಚ್ಚಯ ಭವನ, ಭಾಗಮಂಡಲ ಮೇಲುಸೇತುವೆ, ಕೊಡವ ಹೆರಿಟೇಜ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ" ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.












Click it and Unblock the Notifications