Kodagu: ಕೊಡಗಿನಲ್ಲಿ ತೀವ್ರಗೊಂಡ ಮಳೆ: ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ
ಕೊಡಗು ಜುಲೈ 25: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಮತ್ತು ಭಾರತೀಯ ಹವಾಮಾನ ಇಲಾಖೆಯಿಂದ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜೆಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ದಿನಾಂಕ 26-7-2024 ರಂದು ರಜೆ ಘೋಷಿಸಲಾಗಿದೆ.
ಹೌದು.. ಕೊಡಗಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಅಧಿಕಗೊಂಡಿದೆ. ಇದರಿಂದ ಸಂಚಾರಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದ್ದು ಅಲ್ಲಲ್ಲಿ ಮರ ಗಿಡಗಳು ನೆಲಕ್ಕಚ್ಚುತ್ತಿವೆ. ಮಳೆಯೊಂದಿಗೆ ಗಾಳಿ ಕೂಡ ಜೋರಾಗಿದ್ದು ವಿದ್ಯುತ್ ಕಂಬಗಳು ಬೀಳುತ್ತಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೀಗಾಗಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದೆ.

ಹಾವೇರಿಯಲ್ಲಿ ನಿರಂತರ ಮಳೆಗೆ ಶಾಲಾ ಕಾಲೇಜುಗಳಿಗೆ ರಜೆ
ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದಾಗಿ ಶೀತಗಾಳಿ ಬೀಸುತ್ತಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳ ಆರೋಗ್ಯ/ಸುರಕ್ಷತೆಯ ಹಿತದೃಷ್ಟಿಯಿಂದ ದಿನಾಂಕ ಜುಲೈ 26 ಹಾಗೂ ಜುಲೈ 27ರವರೆಗೆ ಎರಡು ದಿನ ರಜೆ ಘೋಷಿಸಿಲಾಗಿದೆ.
ಹಾವೇರಿಯಲ್ಲಿ ಸತತವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಹಾಗೂ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾವೇರಿ ಇವರ ಕೋರಿಕೆಯಂತೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಮದ ರಜೆಯನ್ನು ಘೋಷಿಸಿಲಾಗಿದೆ.
ಹಾಸನ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ
ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಸಕಲೇಶಪುರ, ಆಲೂರು, ಬೇಲೂರು, ಹಾಸನದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗುತ್ತಲೆಯಿದೆ.
ಒಳಹರಿವು ಹೆಚ್ಚಾದ ಹಿನ್ನಲೆ 75 ರಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳವಂತೆ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸೂಚಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದರಿಂದ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪರ ತಾಲೂಕಿನ ಅಂಗನವಾಡಿ, ಪ್ರಾಥಮಿಕ , ಪ್ರೌಢ ಶಾಲೆಗಳಿಗೆ ಜುಲೈ 26 ಶುಕ್ರವಾರ ಒಂದು ದಿನ ಮಾತ್ರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಿಸಿದ್ದಾರೆ.












Click it and Unblock the Notifications