ಮಡಿಕೇರಿ ಅದ್ಧೂರಿ ದಸರಾ ಆಚರಣೆಗೆ ಅಧಿಕಾರಿಗಳ ಭರ್ಜರಿ ಸಿದ್ಧತೆ: ಇಲ್ಲಿದೆ ವಿವರ
ಮಡಿಕೇರಿ, ಸೆಪ್ಟೆಂಬರ್ 25: ಮಡಿಕೇರಿ ದಸರಾಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಮಡಿಕೇರಿ ದಸರಾ ಆಚರಣೆ ಸಂಬಂಧ ದಶ ಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಬುಧವಾರ ಸಭೆ ನಡೆಸಿದರು. ದಸರಾಗೆ ನಡೆಯುತ್ತಿರುವ ಸಿದ್ಧತೆ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಡಿಕೇರಿ ನಗರದಲ್ಲಿ ಮಂಟಪಗಳು ಸಾಗುವ ಮಾರ್ಗ ಹಾಗೂ ವೇಳಾಪಟ್ಟಿ ಬಗ್ಗೆ ಲಿಖಿತವಾಗಿ ಮಾಹಿತಿ ಒದಗಿಸಬೇಕು. ಅಲ್ಲದೇ ದಸರಾದಂದು ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಯಾವ ಮಂಟಪ ಯಾವ ವೇಳೆಯಲ್ಲಿ ಎಲ್ಲಿಂದ, ಯಾವ ಮಾರ್ಗ ತೆರಳಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಜೊತೆಗೆ ನಿಗದಿತ ವೇಳೆ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಿಗದಿತ ವೇಳೆ ಹಾಗೂ ಮಂಟಪಗಳ ಮೆರವಣಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇದ್ದಲ್ಲಿ ಸಾರ್ವಜನಿಕರಿಗೆ ಸಹಾಯವಾಗಲಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಡಿಕೇರಿ ಜನೋತ್ಸವ ದಸರಾವು ಪ್ರಮುಖವಾಗಿ ಕರಗ ಉತ್ಸವ ಹಾಗೂ ಮಂಟಪಗಳ ಮೆರವಣಿಗೆ ಅತೀ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ದಸರಾ ಯಶಸ್ಸಿಗೆ ಸಹಕರಿಸಿ ಎಂದರು.
ಧ್ವನಿವರ್ಧಕ ಬಳಕೆಗೆ ನಿಯಮಗಳನ್ನು ಪಾಲಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅತೀ ಮುಖ್ಯ ಎನ್ನುವುದನ್ನು ಯಾರೂ ಸಹ ಮರೆಯಬಾರದು. ಈಗಾಗಲೇ ಮಡಿಕೇರಿ ದಸರಾ ಧ್ವನಿವರ್ಧಕ(ಡಿಜೆ) ಸಂಬಂಧಿಸಿದಂತೆ ಪಿಐಎಲ್ ದಾಖಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ಮಾಹಿತಿ ಇರಬೇಕು. ಜೊತೆಗೆ ದಶಮಂಟಪಗಳ ಪುರಾಣ ಸಂಬಂಧ ಲಿಖಿತವಾಗಿ ಮಾಹಿತಿ ಒದಗಿಸಿದಲ್ಲಿ ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಲಹೆ ಮಾಡಿದರು. ಅಲ್ಲದೇ ಮಡಿಕೇರಿ ದಸರಾ ಸಂಸ್ಕೃತಿ, ಸಂಪ್ರದಾಯ, ಆಚರಣೆ ರಾಜ್ಯದ ಹೊರಗಡೆಯು ಸಹ ತಿಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಬಾರಿ ಪ್ರತೀ ಮಂಟಪದ ಬಗ್ಗೆ ಕಿರು ಪರಿಚಯದ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಶ ಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್ ಮಾತನಾಡಿ, ಧ್ವನಿವರ್ಧಕ ಬಳಕೆಗೆ ಈಗಾಗಲೇ ಎಲ್ಲಾ ಮಂಟಪಗಳ ಅಧ್ಯಕ್ಷರ ಜೊತೆ ಚರ್ಚಿಸಲಾಗಿದೆ. ಎಲ್ಲಾ ಮಂಟಪಗಳು ಸ್ವಯಂ ಪ್ರೇರಣೆಯಿಂದ ಯಾವ ರೀತಿ ಧ್ವನಿವರ್ಧಕ(ಡಿಜೆ) ಬಳಕೆ ಮಾಡಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.
ಮಂಟಪ ತೆರಳುವ ಒಂದು ಬದಿಯಲ್ಲಿ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಬೇಕು. ಎರಡು ಬದಿ ತೆರೆದರೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ ಎಂದು ಮಂಟಪ ಸಮಿತಿಯ ರಾಜೇಶ್ ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್ ಸುಂದರರಾಜ್ ಮಾತನಾಡಿ, ಸುಗಮ ಸಾರಿಗೆ ಸಂಚಾರ ಹಾಗೂ ಜನರ ಓಡಾಟಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೇ ಮಂಟಪಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಮಂಟಪಗಳು ಸಾರ್ವಜನಿಕರ ಹಿತಾಸಕ್ತಿಯಂತೆ ಸ್ವಯಂಪ್ರೇರಣೆಯಿಂದ ಕಾರ್ಯನಿರ್ವಹಿಸಬೇಕು. ನಾಡಹಬ್ಬ ಮಡಿಕೇರಿ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯ. ತಮ್ಮಲ್ಲಿಯೇ ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ದಸರಾ ಯಶಸ್ಸಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.












Click it and Unblock the Notifications