ಭಾಗಮಂಡಲದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ವ್ಯಕ್ತಿ ಸಾವು
ಮಡಿಕೇರಿ, ಜೂನ್ 22: ಇಲ್ಲಿಗೆ ಸಮೀಪದ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಇಂದು ಪೂಜೆ ಸಲ್ಲಿಸಲು ಹುಣಸೂರಿನಿಂದ ಬಂದಿದ್ದ ಸುಬ್ರಮಣಿ (31) ಎಂಬುವವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ಳಂಬೆಳಿಗ್ಗೆ ನಡೆದಿದೆ.
ಹುಣಸೂರಿನಿಂದ ಬಂದಿದ್ದ ಕುಟುಂಬ ಇಂದು ನೀರಿಗೆ ಇಳಿದಿದ್ದಾಗ ಮಣಿಕಂಠ ಎಂಬಾತ ಮುಳುಗತೊಡಗಿದ. ಆತನನ್ನು ಮೇಲೆತ್ತಲು ಹೋದ ಸಹೋದರ ಸುಬ್ರಮಣಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜೊತೆಯಲ್ಲಿದ್ದ ಪ್ರಮೀಳಾ ಮತ್ತು ಯಶೋದಾ ಕೂಡ ನೀರಲ್ಲಿ ಮುಳುಗಿದ್ದರು. ಕೂಡಲೇ ನೆರವಿಗಾಗಿ ಕೂಗಿಕೊಂಡಾಗ ಸ್ಥಳೀಯರಾದ ಗೋಪಾಲ್ ಅವರು ಇವರನ್ನು ರಕ್ಷಿಸಿದ್ದಾರೆ. ಆದರೆ ಸುಬ್ರಮಣಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತ ಸುಬ್ರಮಣಿ ಮತ್ತು ಮಣಿಕಂಠ ಇಬ್ಬರೂ ಕಾರ್ ಮೆಕ್ಯಾನಿಕ್ ಗಳಾಗಿ ಹುಣಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ಪ್ರಮೀಳಾ ಮತ್ತು ಯಶೋದಾ ಅವರ ಸ್ಥಿತಿ ಗಂಭೀರವಾಗಿದ್ದು, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಗಮಂಡಲ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications