Breaking; ನಾಗರಹೊಳೆಯಲ್ಲಿ ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹ ಆರಂಭ
ಮಡಿಕೇರಿ, ಫೆಬ್ರವರಿ 26; ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ವಿಸ್ತಾರವಾಗಿ ಹಬ್ಬಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಅಂತರರಾಜ್ಯ ಗಡಿಯನ್ನು ಹೊಂದಿದೆ. ಈಗ ಇತರೆ ರಾಜ್ಯದ ವಾಹನಗಳು ನಾಗರಹೊಳೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಪಡೆಯಲು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿ ಮಾಡಬೇಕಿದೆ. ಅರಣ್ಯ ಇಲಾಖೆ ವಾಹನಗಳ ಶುಲ್ಕ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ.
ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಗೋಪಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ಹೊರ ರಾಜ್ಯದ ವಾಹನಗಳಿಂದ ಪ್ರವೇಶ ಶುಲ್ಕವನ್ನು ಸಂಗ್ರಹ ಮಾಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಆರಂಭಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಲಘು ಮೋಟಾರ್ ವಾಹನಗಳು 20 ರೂ., ಭಾರೀ ವಾಹನಗಳಿಗೆ 50 ರೂ. ಪ್ರವೇಶ ದರವನ್ನು ನಿಗದಿ ಮಾಡಲಾಗಿದೆ. ವಾಹನಗಳಿಂದ ಸಂಗ್ರಹ ಮಾಡುವ ಪ್ರವೇಶ ಶುಲ್ಕದ ಹಣವನ್ನು ನಾಗರಹೊಳೆ ಅರಣ್ಯದ ಮೂಲಕ ಹಾದು ಹೋಗುವ ರಸ್ತೆಯ ಸ್ವಚ್ಛತೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಪ್ರವೇಶ ಶುಲ್ಕ ಸಂಗ್ರಹ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ನಾಗರಹೊಳೆ ವನ್ಯಜೀವಿ ವಿಭಾಗದ ಕುಟ್ಟ ನಾಣಚ್ಚಿ, ಆನೆಚೌಕೂರು, ವೀರನಹೊಸಹಳ್ಳಿ, ಮಾಲ್ದಾರೆ, ಕಾರ್ಮಾಡು ಮತ್ತು ಇತರ ಗೇಟ್‌ಗಳಲ್ಲಿ ಹೊರ ರಾಜ್ಯದ ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗಿದೆ. ನಾಗರಹೊಳೆ ಮೂಲಕ ಕರ್ನಾಟಕಕ್ಕೆ ಆಗಮಿಸುವ ವಾಹನಗಳ ಮಾಲೀಕರು, ಚಾಲಕರು ಈ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.
ಅನೇಕ ವನ್ಯಜೀವಿಗಳಿವೆ; 1955ರಲ್ಲಿ 258 ಚದರ ಕಿ. ಮೀ. ವಿಸ್ತೀರ್ಣದಲ್ಲಿದ್ದ ನಾಗರಹೊಳೆ ಈಗ 643 ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದೆ. 1988ರಲ್ಲಿ ಈ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆ ಮಾಡಲಾಯಿತು. ಅನೇಕ ವನ್ಯಜೀವಿಗಳು ಇಲ್ಲಿದ್ದು ಸಫಾರಿ ಮಾಡಲು ಸಹ ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಈ ಹುಲಿ ಸಂರಕ್ಷಿತ ಪ್ರದೇಶದೊಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ.
ಕೇರಳ ಸರ್ಕಾರ ನಾಗರಹೊಳೆ ಮೂಲಕ ರೈಲು ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾಪ ಮುಂದಿಟ್ಟಿದೆ. ಪರಿಸರವಾದಿಗಳ ವಿರೋಧದ ನಡುವೆಯೂ ತಲಶ್ಯೇರಿ-ಮೈಸೂರು ಹಾಗೂ ನಿಲಂಬೂರು ನಂಜನಗೂಡು ರೈಲು ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದ ಒಪ್ಪಿಗೆಯನ್ನು ಕೇಳಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಂಗ ಮಾರ್ಗ ಮೂಲಕ ರೈಲು ಯೋಜನೆ ಅನುಷ್ಠಾನಗೊಳಿಸುವುದು ಕೇರಳ ಸರ್ಕಾರದ ಪ್ರಸ್ತಾವನೆಯಾಗಿದೆ.












Click it and Unblock the Notifications