ತಲಕಾವೇರಿ ದೇವಾಲಯದ ಇ-ಪ್ರಸಾದ ಸೇವೆಗೆ ಚಾಲನೆ
ಕೊಡಗು ಜಿಲ್ಲೆಯ ಪ್ರಸಿದ್ಧ ತಲಕಾವೇರಿ ದೇವಾಲಯದ ಇ-ಪ್ರಸಾದವನ್ನು ನೀವು ಮನೆ ಬಾಗಿಲಲ್ಲಿಯೇ ಪಡೆಯಬಹುದಾಗಿದೆ.
ಮಡಿಕೇರಿ, ಮಾರ್ಚ್ 07; ಕರ್ನಾಟಕದ ಪ್ರಸಿದ್ಧ ತಲಕಾವೇರಿ ಮತ್ತು ಭಾಗಮಂಡಲದ ಪ್ರಸಾದವನ್ನು ಜನರು ಮನೆ ಬಾಗಿಲಿನಲ್ಲಿಯೇ ಪಡೆಯಬಹುದಾಗಿದೆ. ಹೌದು, ಭಾರತೀಯ ಅಂಚೆ ಇಲಾಖೆ ಸಹಾಕಾರದೊಂದಿಗೆ ಇ-ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ. 300 ರೂ. ಪಾವತಿಸಿದಲ್ಲಿ ಇ-ಪ್ರಸಾದವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ತಲಕಾವೇರಿ ಮತ್ತು ಭಾಗಮಂಡಲಕ್ಕೆ ಲಕ್ಷಾಂತರ ಭಕ್ತರಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅವರು ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಗಳ ಇ-ಪ್ರಸಾದ ಮತ್ತು ತೀರ್ಥ ವಿತರಣೆಗೆ ಚಾಲನೆ ನೀಡಿದರು. ಇ-ಪ್ರಸಾದದಲ್ಲಿ ಕಾವೇರಿ ತೀರ್ಥ, ಪಂಚಕಜ್ಜಾಯ, ಕುಂಕುಮ, ಶ್ರೀಗಂಧ ಇರಲಿದೆ.

ಇ-ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಧತ್ತಿ ಇಲಾಖೆಯಿಂದ ಅಂಚೆ ಕಚೇರಿ ಮೂಲಕ ಇ-ಪ್ರಸಾದವನ್ನು www.indiapost.gov.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಮತ್ತು ಸಹಾಯವಾಣಿ 18002666868 ಬುಕ್ ಮಾಡಿ 300 ರೂ. ಪಾವತಿಸಿದಲ್ಲಿ ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ" ಎಂದರು.

ಪ್ರಾಯೋಗಿಕವಾಗಿ ಈ ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ. ಭಕ್ತಾಧಿಗಳ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಆಡಳಿತಾಧಿಕಾರಿ ಡಾ. ನಂಜುಂಡೇಗೌಡ ಮಾಹಿತಿ ನೀಡಿದರು.
ತಲಕಾವೇರಿ ಪ್ರಸಿದ್ಧ ದೇವಾಲಯ; ಮಡಿಕೇರಿಯ ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನ. ಇದು ಬಹಳ ಪ್ರಸಿದ್ಧ ಕ್ಷೇತ್ರವಾಗಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಕೇರಳದಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡುತ್ತಾರೆ. ಕೊಡಗು ಜಿಲ್ಲಾಡಳಿತವು ಸಹ ಪವಿತ್ರ ತೀರ್ಥೋಧ್ಬವದ ಸಮಯದಲ್ಲಿ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸಲು ಅಗತ್ಯ ವ್ಯವಸ್ಥೆ ಮಾಡುತ್ತದೆ.
ಮಡಿಕೇರಿಯಿಂದ ಸುಮಾರು 46 ಕಿ.ಮೀ. ದೂರದಲ್ಲಿ ಪ್ರಶಾಂತ ಮತ್ತು ಸುಂದರವಾದ ಪ್ರದೇಶದಲ್ಲಿ ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನವಾಗಿ ತಲಕಾವೇರಿ ಇದೆ. ಸಾಮಾನ್ಯವಾಗಿ ಪ್ರತಿ ವರ್ಷವು ಅಕ್ಟೋಬರ್‌ನಲ್ಲಿ ನಡೆಯಲಿದೆ. ಈ ಸ್ಥಾನದ ಬಳಿ ಬ್ರಹ್ಮ ಶಿಖರವಿದೆ. ಇಲ್ಲಿನ ಪರ್ವತಗಳ ವಿಹಂಗಮ ನೋಟ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.












Click it and Unblock the Notifications