ರಾಜಾಸೀಟ್, ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ
ಮಡಿಕೇರಿ, ಡಿಸೆಂಬರ್ 18: ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಈ ಬಾರಿ ಹಲವು ಕಡೆ ಹೊಸ ವರ್ಷಾಚರಣೆಗೆ ನಿಷೇಧ ಹೇರಿದೆ. ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲೂ ಸಹ ಹೊಸ ವರ್ಷಾಚರಣೆ ಮಾಡುವುದಕ್ಕೆ ನಿಷೇಧ ಹಾಕಲಾಗಿದೆ.
ಅರಣ್ಯ ಇಲಾಖೆ ಬಂಡಿಪುರ ಮತ್ತು ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಕಡಿವಾಣ ಹಾಕಿದೆ. ಎರಡು ದಿನಗಳ ಕಾಲ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಪ್ರತಿ ವರ್ಷ ನೂರಾರು ಪ್ರವಾಸಿಗರು ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಭ್ರಮದಿಂದ ಆಚರಣೆಯನ್ನು ಮಾಡುತ್ತಿದ್ದರು.

ಡಿಸೆಂಬರ್ 31 ಹಾಗೂ ಜನವರಿ 1ರಂದು ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಬುಕ್ಕಿಂಗ್ ನಿಲ್ಲಿಸಲಾಗಿದೆ. ವರ್ಷದ ಕೊನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು.
ಡಿಸೆಂಬರ್ 31ರಂದು ವರ್ಷಾಚರಣೆಗೆ ಪ್ರವಾಸಿಗರ ಬುಕ್ಕಿಂಗ್ ಗಳಿಂದ ಕಾಟೇಜ್ ಮತ್ತು ಡಾರ್ಮೆಟರಿಗಳು ಭರ್ತಿಯಾಗುತ್ತಿತ್ತು. ಅರಣ್ಯ ಇಲಾಖೆ ಈ ಬಾರಿ ಎರಡು ದಿನಗಳ ಕಾಲ ಆನ್ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಿದೆ. ಎಂದಿನಂತೆ ಇರಲಿರುವ ಬೆಳಗ್ಗೆ ಹಾಗೂ ಸಂಜೆ ಸಫಾರಿ ಪ್ರವಾಸಿಗರಿಗೆ ಮುಕ್ತವಾಗಿರಲಿದೆ.
ಕೊಡಗು ಜಿಲ್ಲಾಡಳಿತ ರಾಜಾ ಸೀಟ್‌ನಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಿದೆ. ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ನಿರ್ಬಂಧ ವಿಧಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನೂತನ ವರ್ಷಾಚರಣೆಯಲ್ಲಿ ಪ್ರತಿ ವರ್ಷವೂ ರಾಜಾಸೀಟ್ ನಲ್ಲಿ ಸಾವಿರಾರು ಪ್ರವಾಸಿಗರು ಸೇರುತಿದ್ದರು.
ಕೆಲವೊಮ್ಮೆ ಈ ರಸ್ತೆಯೇ ಜನಜಂಗುಳಿಯಿಂದ ಬ್ಲಾಕ್ ಆಗುತಿತ್ತು. ಕೋವಿಡ್ ಕಾರಣದಿಂದ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ರಾಜಾಸೀಟ್‌ನಲ್ಲಿ ನಡೆಯಬೇಕಿದ್ದ ಫಲ ಪುಷ್ಪ ಪ್ರದರ್ಶನವ ಸಹ ರದ್ದುಗೊಂಡಿತ್ತು












Click it and Unblock the Notifications