'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!
ಮೂರು ಅಡಿ ಮುಂದೆ ನಿಂತವರೂ ಕಾಣದೆ ಇರುವಷ್ಟು ಗಾಢ ಮಂಜು ಮುಖದ ಮೇಲೆಲ್ಲ ಬಿದ್ದು ಮುತ್ತಿನ ಸರ ಪೋಣಿಸುತ್ತಿದ್ದರೆ ಅದೊಂದು ಬಣ್ಣನೆಗೆ ಸಿಗದ ಅನುಭವ. ಆ ಮಂಜಿನೊಂದಿಗೆ ಮುದನೀಡುವ ಜಿಟಿ ಜಿಟಿ ಮಳೆ ಹನಿ, ಜೊತೆಗೆ ತೆಳ್ಳಗಿರುವವರನ್ನು ಹಾರಿಸಿಕೊಂಡೇ ಹೋಗುತ್ತೇನೋ ಅನ್ನಿಸುವಂಥ ಜೋರು ಗಾಳಿ ಇವೆಲ್ಲ ಸಿಗಬೇಕಂದ್ರೆ ಮಡಿಕೇರಿಯ ಮುಗಿಲಪೇಟೆಗೆ ಹೋಗಬೇಕು!
ಮುಗಿಲಪೇಟೆಯಲ್ಲಿ ಪುಕ್ಕಟೆಯಾಗಿ ಕೊಂಡ ಆ ಮಂಜಿನ ಹನಿಗಳನ್ನು ಲೆಕ್ಕ ಇಟ್ಟವರ್ಯಾರು!? ಹನಿಗಳನ್ನೆಲ್ಲ ಮೊಗೆ ಮೊಗೆದು ಸಂಭ್ರಮವೆಂಬ ಬುಟ್ಟಿಯಲ್ಲಿ ತುಂಬಿದ್ದೊಂದೇ ಗೊತ್ತು!
ಬೇಸಿಗೆ, ಚಳಿಗಾಲವೆನ್ನದೆ ಸದಾ ಮಂಜಿನಿಂದ ಆವೃತವಾಗಿ ಭೂಲೋಕದ ಸ್ವರ್ಗವೆಂಬಂತೆ ಕಾಣುವ ಮಾಂದಲಪಟ್ಟಿಯೇ ಗಾಳಿಪಟ ಚಿತ್ರದ ನಂತರ 'ಮುಗಿಲಪೇಟೆ'ಯಾಗಿ ಬದಲಾಗಿದೆ. ಸುತ್ತೆಲ್ಲ ಹಸಿರು, ಆದರೆ ಆ ಹಸಿರನ್ನು ನೋಡುವುದಕ್ಕಾದರೂ ಮಂಜು ಕರಗಬೇಕಲ್ಲ! ಮಳೆಗಾಲದಲ್ಲಂತೂ ಮುಗಿಲುಪೇಟೆಯ ಸೌಂದರ್ಯ ಇಮ್ಮಡಿಯಾಗುತ್ತದೆ.
ಮಾಂದಲಪಟ್ಟಿ, ಮಡಿಕೇರಿಯ ಪ್ರವಾಸೋದ್ಯಮದಲ್ಲಿ ಮುಂಚೂಣಿ ಹೆಸರು. ಮಡಿಕೇರಿಗೆ ಹೋದವರು ಮಾಂದಲಪಟ್ಟಿಗೆ ಹೋಗದಿದ್ದರೆ ಆ ಪ್ರವಾಸ ಪರಿಪೂರ್ಣವಾಗಿಲ್ಲವೆಂದೇ ಲೆಕ್ಕ. ಅಷ್ಟರಮಟ್ಟಿಗೆ ಮಾಂದಲಪಟ್ಟಿಯ ಸೌಂದರ್ಯ ಮಡಿಕೇರಿಯ ಪ್ರವಾಸೋದ್ಯಮದೊಂದಿಗೆ ಬೆಸೆದುಕೊಂದಿದೆ.

ಎಂದೂ ಮರೆಯದ ಜೀಪಿನ ಪಯಣ!
ಮಡಿಕೇರಿಯಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ಮುಗಿಲಪೇಟೆಗೆ ಅಲ್ಲಿಗೆ ತೆರಳುವುದಕ್ಕೆಂದೇ ಇರುವ ಜೀಪಿನಲ್ಲಿ ಹೋದವರಿಗೆ, ಆ ಪ್ರಯಾಣ ಬದುಕಿನಲ್ಲಿ ಎಂದೂ ಮರೆಯಲಾರದ ಜೀಪಿನ ಪಯಣವಾಗಿ ನೆನಪಿನಲ್ಲುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ! ಯಾಕಂದ್ರೆ ಪುಟ್ಟ ಕೆರೆಯಂತೇ ಕಾಣುವ ರಸ್ತೆಯ ಹೊಂಡಗಳನ್ನೂ 50 ಕಿ.ಮೀ. ವೇಗದಲ್ಲೇ ದಾಟಿಕೊಂಡು ಹೋಗುವ ಈ ಚಾಲಕರ ಧೈರ್ಯಕ್ಕೆ ಮೆಚ್ಚಬೇಕೊ, ಶಪಿಸಬೇಕೋ ಎಂಬ ಗೊಂದಲವಂತೂ ಹುಟ್ಟದಿರದು. ಆ ಹಳ್ಳ, ಕೊಳ್ಳ, ಪಕ್ಕದಲ್ಲಿ ಪ್ರಪಾತ ಈ ಎಲ್ಲವುಗಳ ಪರಿವೆಯೇ ಇಲ್ಲದಂತೆ ಯಾವುದೋ ರಾಷ್ಟ್ರೀಯ ಹೆದ್ದಾರಿಯಲ್ಲೇ ಜೀಪು ಓಡಿಸುತ್ತಿದ್ದೀನಿ ಎಂಬ ಕಲ್ಪನೆಯಲ್ಲೇ ಚಾಲಕ ಇದ್ದಾನೇನೋ ಅನ್ನಿಸಲೇಬೇಕು. ಅಷ್ಟರಮಟ್ಟಿಗೆ ನಮ್ಮ ಜೀಪಿನ ಪ್ರಯಾಣವನ್ನು ಚಾಲಕ ಅವಿಸ್ಮರಣೀಯಗೊಳಿಸೋದು ಪಕ್ಕಾ!

ಸ್ವಂತವಾಹನಾವಾದರೆ ಮತ್ತೂ ಕಷ್ಟ!
ಈ ರಸ್ತೆಗೆ ಜೀಪು ಹೇಳಿ ಮಾಡಿಸಿದ ವಾಹನ. ಇಲ್ಲೇನಾದರೂ ಸ್ವಂತ ವಾಹನ ತೆಗೆದುಕೊಂಡು ಹೋದರೆ ರಸ್ತೆಯನ್ನು ಕಂಡು ಅರ್ಧಕ್ಕೇ ಕಾರು ನಿಲ್ಲಿಸಿ, ರಸ್ತೆಗೊಮ್ಮೆ ಶಿರಸಾಷ್ಟಾಂಗ ನಮಸ್ಕಾರ ಹಾಕಬೇಕಾಗುತ್ತದೆ! ಮಡಿಕೇರಿ ಪ್ರವಾಸೋದ್ಯಮದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮುಗಿಲುಪೇಟೆಗೆ ಸರಿಯಾದ ರಸ್ತೆ ಮಾಡುವುದಕ್ಕೆ ಪ್ರವಾಸೋದ್ಯಮ ಇಲಾಖೆ ಹಿಂದು ಮುಂದು ನೋಡುತ್ತದೆಯೇ ಎಂಬ ಅನುಮಾನಕ್ಕೆ ಅಲ್ಲಿನ ಜನರು ಕೊಡುವ ಉತ್ತರವೇ ಬೇರೆ. ಇಲ್ಲಿ ರಸ್ತೆ ರಿಪೇರಿ ಮಾಡೊದಕ್ಕೆ ಜೀಪ್ ಚಾಲಕರೇ ವಿರೋಧಿಸ್ತಾರೆ!

ಪಾಳು ರಸ್ತೆಯೇ ಹೊಟ್ಟೆ ಪಾಡಿನ ಹಾದಿಯಾಗಿ...
ಮುಗಿಲುಪೇಟೆಯ ಪ್ರವಾಸಕ್ಕೆಂದು ಬರುವವರನ್ನು ಕರೆದೊಯ್ಯುವ ಜವಾಬ್ದಾರಿ ಹೊತ್ತ ಇವರೆಲ್ಲ ಆದಾಯದ ಮೂಲವಾಗಿ ನಂಬಿಕೊಂಡಿರುವುದೇ ಇದನ್ನ! ಒಂದು ಟ್ರಿಪ್ ಗೆ ಏನಿಲ್ಲವೆಂದರೂ ಸಿಗುವ ಒಂದರಿಂದ ಎರಡೂವರೆ ಸಾವಿರವೇ ಅವರ ಆದಾಯ. ಸೀಸನ್ ನಲ್ಲಿ ಮಾತ್ರವೇ ಆದಾಯ. ನಂತರ ನಿರುದ್ಯೋಗಿಗಳಂತೇ ಕೂರಬೇಕು. ಇನ್ನು ಇಲ್ಲಿ ರಸ್ತೆ ಆಗಿಬಿಟ್ಟರೆ ಜನರು ಸ್ವಂತ ವಾಹನದಲ್ಲೇ ಹೋಗಿಬಿಡ್ತಾರೆ, ಆಗ ನಮ್ಮ ಹೊಟ್ಟೆ ಪಾಡಿನ ಗತಿಯೇನು ಎಂಬ ಚಾಲಕನ ಪ್ರಶ್ನೆಯನ್ನೂ ಅಲ್ಲಗಳೆಯೋದು ಕಷ್ಟ! ಆ ಹಳ್ಳ ಕೊಳ್ಳ ತುಂಬಿದ ರಸ್ತೆಗೆ ನಾವೆಷ್ಟೇ ಹಿಡಿಶಾಪ ಹಾಕಿದರೂ, ಆ ಪಾಳು ರಸ್ತೆಯೇ ಇವರಿಗೆಲ್ಲ ತುತ್ತಿನ ಚೀಲ ತುಂಬುತ್ತಿರುವುದನ್ನು ಒಪ್ಪಲೇಬೇಕಲ್ಲ!

ಗಾಳಿಪಟ ಚಿತ್ರದಲ್ಲಿ ಮುಗಿಲುಪೇಟೆ
ಯೋಗರಾಜ ಭಟ್ಟರ ಗಾಳಿಪಟ ಚಿತ್ರ ನೋಡಿದವರಿಗೆಲ್ಲ ಚಿತ್ರದಲ್ಲಿ ನಟಿ ಭಾವನಾ ಮನೋಜ್ಞವಾಗಿ ಸಾಂಪ್ರದಾಯಿಕ ನೃತ್ಯದ ಮೂಲಕ ಸೆಳೆದ "ನಧೀಂ ಧೀಂ ತನಾ" ಹಾಡು ನೆನಪಿರಲೇಬೇಕು. ಆ ಹಾಡು ಚಿತ್ರೀಕರಣಗೊಂಡಿದ್ದೇ ಮಾಂದಲಪಟ್ಟಿಯಲ್ಲಿ. ಮಾಂದಲಪಟ್ಟಿಗೆ ನಿರ್ದೇಶಕ ಯೋಗರಾಜ್ ಭಟ್ 'ಮುಗಿಲುಪೇಟೆ' ಎಂದು ಕರೆದಿದ್ದರಿಂದ, ನಂತರದ ದಿನಗಳಲ್ಲಿ ಮಾಂದಲಪಟ್ಟಿಯೇ ಮುಗಿಲುಪೇಟೆಯಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ.

ಇಲ್ಲಿ ಗೌಜು ಗದ್ದಲವಿಲ್ಲ
ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದ ದಲ್ಲಿರುವ ಇಲ್ಲಿಗೆ ಸೀಸನ್ ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಫೋಟೋಗ್ರಫಿ, ಸೆಲ್ಫಿ ಗಲಾಟೆ ಬಿಟ್ಟರೆ ಬೇರೆ ಯಾವ ಗದ್ದಲವೂ ಇಲ್ಲ. ಅಂಗಡಿಗಳೂ ಇಲ್ಲ. ನಾಲ್ಕೈದು ಗಂಟೆ ಅಲ್ಲಿಯೇ ಕಳೆಯಬೇಕೆಂದು ಹೋಗುವವರು ತಿಂಡಿ-ತಿನಿಸು ಕೊಂಡೊಯ್ಯಬಹುದು. ಮುಗಿಲುಪೇಟೆಗೆ ಹೋಗುವ ದಾರಿಯಲ್ಲೇ ಅಬ್ಬಿ ಜಲಪಾತವೂ ಸಿಗುವುದರಿಂದ ಪ್ರವಾಸಿಗರು ಎರಡೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications