ಮೇ 13ಕ್ಕೆ ಸಿದ್ದರಾಮಯ್ಯ ಸೋಲು + ಮುಸ್ಲಿಮ್ ಓಲೈಕೆ ಅಂತ್ಯ: ಸಿಂಹ
ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ & ಸಂಸದ ಪ್ರತಾಪ್ ಸಿಂಹ ವಾಗ್ಯುದ್ಧ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ಮುಂದುವರಿಸಿರುವ ಸಂಸದ ಪ್ರತಾಪ್ ಸಿಂಹ, ಮುಸ್ಲಿಮರ ಓಲೈಕೆ ಮಾಡುವ ಕೆಲಸ 2023 ಮೇ 13ರಂದು ಸಿದ್ದರಾಮಯ್ಯ ಸೋಲಿನ ಜೊತೆಗೆ ಅಂತ್ಯವಾಗುತ್ತದೆ ಎಂದಿದ್ದಾರೆ. ಈ ಮೂಲಕ ನೇರವಾಗಿ ಮಾಜಿ ಸಿಎಂ ವಿರುದ್ಧ ತೊಡೆತಟ್ಟಿದ್ದಾರೆ ಸಿಂಹ.
ಮಂಜಿನ ನಗರಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸಂಸದ ಪ್ರತಾಪ್ ಸಿಂಹ ಭರ್ಜರಿ ಚುನಾವಣಾ ಪ್ರಚಾರವನ್ನ ಕೈಗೊಂಡಿದ್ದಾರೆ. ಸೋಮವಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರ ಮತಯಾಚನೆಗೆ ಆಗಮಿಸಿದ ವೇಳೆ ಮಾತಾನಾಡಿದ ಸಿಂಹ, ಸಿದ್ದರಾಮಯ್ಯ ಜಾತಿವಾದಿ. ವೀರಶೈವ ಲಿಂಗಾಯತರನ್ನ ಒಡೆಯುವ ಕೆಲಸ, ಹಿಂದೂಗಳನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಮುಸ್ಲಿಂರ ಓಲೈಕೆ ಮಾಡುವ ಕೆಲಸ 2023 ಮೇ 13ಕ್ಕೆ ಸಿದ್ದರಾಮಯ್ಯ ಸೋಲಿನ ಜೊತೆಗೆ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸೋಲಿನ ಭಯದಲ್ಲಿ ಮಾಜಿ ಸಿಎಂ?
ಇದೇ ವೇಳೆ ವರುಣಾ ಕ್ಷೇತ್ರದ ವಿಚಾರವನ್ನೂ ಎಳೆದು ತಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ. ಹತಾಶೆ ಹಾಗೂ ಭಯದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಮತ ಕೇಳಲು ಹೋದ್ರೆ ಅಲ್ಲಿ ಕಾರ್ಯಕರ್ತರನ್ನು ಬಿಟ್ಟು ಛೀಮಾರಿ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಮತದಾನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಹೊಸ ಬಾಂಬ್ ಸಿಡಿಸಿದ್ದಾರೆ ಪ್ರತಾಪ್ ಸಿಂಹ.
ಭವಿಷ್ಯ ನುಡಿದ ಪ್ರತಾಪ್ ಸಿಂಹ!
ಸಿದ್ದರಾಮನ ಹುಂಡಿಯಲ್ಲಿ ರಾಮ ಭಕ್ತರಿಗೆ ಬೆಲೆ ಇದೆ ಹೊರತು ರಾಮ ವಿರೋಧಿಗಳಿಗೆ ಬೆಲೆ ಇಲ್ಲ. ರಾಮನ ಬಂಟನಾದ ಆಂಜನೇಯ ಹುಟ್ಟಿದ್ದು ಯಾವಾಗ ಅನ್ನೊದು ಗೊತ್ತಾ? ಎಂದು ಪ್ರಶ್ನಿಸಿದ್ದವರನ್ನು ವರುಣಾ ಜನ ಆಶೀರ್ವಾದ ಮಾಡಲ್ಲ. ತಕ್ಕ ಪಾಠ ಕಲಿಸುತ್ತಾರೆ, ಮೇ 13ರಂದು ಸೋಮಣ್ಣ ಅವರ ಗೆಲುವು ನಿಶ್ಚಿತ ಎಂದಿದ್ದಾರೆ. ಈಗಾಗಲೇ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿರುವ ವರುಣಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಸುತ್ತಿನ ವಾಗ್ದಾಳಿಗೆ ಪ್ರತಾಪ್ ಸಿಂಹ ಹೇಳಿಕೆ ವೇದಿಕೆ ಒದಗಿಸಿದೆ.
ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ @AmitShah ರವರ ನೇತೃತ್ವದಲ್ಲಿ ನಾಳೆ ವರುಣಾ ವಿಧಾನಸಭಾ ಕ್ಷೇತ್ರದ ಹೊಸಕೋಟೆಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಗಳನ್ನು ಪರಿಶೀಲಿಸಲಾಯಿತು. pic.twitter.com/kbZd9aAAtF
— Pratap Simha (@mepratap) May 1, 2023
ವರುಣಾದಲ್ಲಿ ಅಮಿತ್ ಶಾ ಅಬ್ಬರ
ಮತ್ತೊಂದ್ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಣವ್ಯೂಹ ರಚಿಸಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ದಿಲ್ಲಿಯಿಂದ ನೇರವಾಗಿ ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಈಗ ಗೃಹಸಚಿವ ಅಮಿತ್ ಶಾ ವರುಣಾದಲ್ಲಿ ಪ್ರಚಾರ ನಡೆಸಲು ಬರುತ್ತಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 'ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ @AmitShah ರವರ ನೇತೃತ್ವದಲ್ಲಿ ನಾಳೆ ವರುಣಾ ವಿಧಾನಸಭಾ ಕ್ಷೇತ್ರದ ಹೊಸಕೋಟೆಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಗಳನ್ನು ಪರಿಶೀಲಿಸಲಾಯಿತು.' ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ
ಕಾಂಗ್ರೆಸ್‌ನ ಮಾಸ್ ಲೀಡರ್‌ಗಳ ಪೈಕಿ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ 2018ರ ಚುನಾವಣೆಯಲ್ಲಿ ಮೈಸೂರಿನಲ್ಲೇ ಹೀನಾಯವಾಗಿ ಸೋಲು ಎದುರಾಯ್ತು. ಈಗ ಇದೇ ಅಸ್ತ್ರ ಮರು ಪ್ರಯೋಗಿಸಲು ಬಿಜೆಪಿ ಸಿದ್ಧವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಇದು ಕೊನೇ ಚುನಾವಣೆ ಅಂತಾ ಬೇರೆ ಹೇಳಿಬಿಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಲಾಕ್ ಆಗುವಂತೆ ಮಾಡಿದರೆ, ಈ ಕಾರಣಕ್ಕೆ ವರುಣಾ ರಣಕಣ ರಂಗೇರಿದೆ.
ಒಟ್ನಲ್ಲಿ ಮತದಾನಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಅಸ್ತ್ರ ಮತ್ತು ಪ್ರತ್ಯಸ್ತ್ರ ಜೋರಾಗಿದೆ. ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಕ್ಕೆ ಕರ್ನಾಟಕದ ಮತದಾರ ಪ್ರಭು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications