ನೈಋತ್ಯ ಮುಂಗಾರು ಮಳೆ; ಅಧಿಕಾರಿಗಳಿಗೆ ಕೊಡಗು ಡಿಸಿ ಸೂಚನೆಗಳು
ಮಡಿಕೇರಿ, ಮೇ 25: ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದು, ಉತ್ತಮ ಮಳೆಯಾಗಿ ಜೀವನದಿ ಕಾವೇರಿ ತುಂಬಿದೆ. ಜೂನ್‌ನಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, "ಮುಂದಿನ ಮುಂಗಾರು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಗಾರು ಸಂದರ್ಭದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಈಗಿನಿಂದಲೇ ಎಚ್ಚರ ವಹಿಸಬೇಕಿದೆ" ಎಂದು ಸೂಚಿಸಿದ್ದಾರೆ.

ಮುಂಗಾರು ಸಂದರ್ಭದಲ್ಲಿ ಅಗತ್ಯ ಕಾರ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರು ಪೂರೈಕೆ ಮತ್ತಿತರ ಸಂಬಂಧ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಇಒಗಳು ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಪ್ರಾಕೃತಿಕ ವಿಕೋಪ ಎದುರಿಸಲು ಸದಾ ಎಚ್ಚರವಹಿಸಬೇಕು ಎಂದರು.
ಪ್ರವಾಹ ಪರಿಸ್ಥಿತಿ: ಜಿಲ್ಲಾಧಿಕಾರಿಗಳು, "ಹೆಚ್ಚಿನ ಮಳೆಯಾಗಿ ಪ್ರವಾಹ ಉಂಟಾದಲ್ಲಿ, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಮುಂದಾಗಬೇಕು. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು" ಎಂದು ನಿರ್ದೇಶನ ನೀಡಿದರು.
"ಕುಡಿಯುವ ನೀರು ಸಂಬಂಧಿಸಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಪ್ರತಿ ನಿತ್ಯ ಕುಡಿಯುವ ನೀರನ್ನು ಪರೀಕ್ಷೆ ಮಾಡಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು. ಯಾವುದೇ ರೀತಿಯ ಲೋಪ ಉಂಟಾಗದಂತೆ ಗಮನಹರಿಸಬೇಕು" ಎಂದು ಸೂಚಿಸಿದರು.
"ಪರಿಸರ ಮತ್ತು ಸ್ವಚ್ಛತೆ ಕಾಪಾಡುವತ್ತ ಹೆಚ್ಚಿನ ಮುತುವರ್ಜಿ ವಹಿಸಬೇಕು. ಶಾಲಾ-ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಎಲ್ಲೆಡೆ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಚಗೊಳಿಸುವಂತೆ" ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.
"ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಹೊಟ್ಟೆನೋವು, ತಲೆನೋವು, ವಾಂತಿಬೇಧಿ ಇತರೆ ರೋಗಗಳು ಕಂಡುಬಂದರೆ ಕೂಡಲೇ ಚಿಕಿತ್ಸೆ ನೀಡಬೇಕು. ಎಲ್ಲಾ ಹಂತದ ಅಧಿಕಾರಿಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಪರಿಶೀಲಿಸಬೇಕು" ಎಂದರು.
"ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ. ಅದು ಬಿಟ್ಟು ಇತರರಿಗೆ ಬೊಟ್ಟು ಮಾಡುವುದು ಬೇಡ. ಪೂರ್ವ ಮುಂಗಾರು ಸಂದರ್ಭದಲ್ಲಿ ಮನೆ ಹಾನಿಯಾಗಿದ್ದಲ್ಲಿ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಪರಿಹಾರ ನೀಡಬೇಕು. ಮಳೆ ಹಾನಿ ಸಂಬಂಧಿಸಿದಂತೆ ಛಾಯಾಚಿತ್ರ ಸಹಿತ ಮಾಹಿತಿಯನ್ನು ಕಳುಹಿಸಬೇಕು" ಎಂದು ಸೂಚಿಸಿದರು.
ಸೆಸ್ಕ್ ಇಲಾಖೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆಯಡಿ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಿಕೊಂಡು ಮುಂಗಾರು ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಹಲವು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 309.96 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 146.44 ಮಿ. ಮೀ. ಮಳೆಯಾಗಿತ್ತು. 2018ರಲ್ಲಿ ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಭಾರೀ ಹಾನಿಯಾಗಿತ್ತು. ಬಳಿಕ ಪ್ರತಿ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗುತ್ತಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.80 ಅಡಿಗಳು. ಜಲಾಶಯಕ್ಕೆ ಒಳಹರಿವು 460 ಕ್ಯುಸೆಕ್, ಕಳೆದ ವರ್ಷ ಇದೇ ದಿನ 89 ಕ್ಯುಸೆಕ್ ಒಳಹರಿವು ಇತ್ತು. ಹೊರ ಹರಿವು ನದಿಗೆ 200 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್ ಆಗಿದೆ.












Click it and Unblock the Notifications