ಕೊಡಗಿನಲ್ಲಿ ಬಿರುಸಾದ ಮುಂಗಾರು: ಭಾಗಮಂಡಲದಲ್ಲಿ ಉಕ್ಕಿದ ಕಾವೇರಿ

ಮಡಿಕೇರಿ, ಜೂನ್ 27: ಕೊಡಗಿನಲ್ಲಿ ಮುಂಗಾರು ಚೇತರಿಸಿಕೊಳ್ಳತೊಡಗಿದೆ. ಕಾವೇರಿ ತವರು ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ತ್ರಿವೇಣಿ ಸಂಗಮದ ಸ್ನಾನಘಟ್ಟ ಜಲಾವೃತವಾಗಿದೆ.

ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದೆ. ಭಾಗಮಂಡಲ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ 100 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದಿದೆ. ಈ ನಡುವೆ ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದ್ದು, ಮಂಗಳವಾರ ಜಿಲ್ಲೆಯಲ್ಲಿ ಮಳೆ ಆರ್ಭಟ ಕೊಂಚ ತಗ್ಗಿದಂತೆ ಕಂಡು ಬಂದಿದೆ.

ಇದೇ ರೀತಿ ಮಳೆ ಸುರಿದರೆ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಸೇರಿದಂತೆ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರಲಿದೆ. ಈ ಬಾರಿ ಜನವರಿಯಿಂದ ಆಗಾಗ್ಗೆ ಮಳೆ ಸುರಿಯುತ್ತಿತ್ತಾದರೂ ಬಿರುಸು ಪಡೆದುಕೊಂಡಿರಲಿಲ್ಲ. ಆದರೆ ಭಾನುವಾರ(ಜೂನ್ 25)ದಿಂದ ಬಿರುಸುಗೊಂಡಿದ್ದು ನದಿ, ತೊರೆ, ಹಳ್ಳಗಳಲ್ಲಿ ನೀರು ಕಾಣಿಸಿಕೊಂಡಿದೆ.

ಹೆಚ್ಚುತ್ತಿದೆ ಮಳೆಯ ಆರ್ಭಟ

ಹೆಚ್ಚುತ್ತಿದೆ ಮಳೆಯ ಆರ್ಭಟ

ಭಾಗಮಂಡಲ, ತಲಕಾವೇರಿ ಬೆಟ್ಟಶ್ರೇಣಿಗಳಿಂದ ಆವೃತವಾಗಿರುವ ಕಾರಣ ಮಳೆಯ ಆರ್ಭಟ ಹೆಚ್ಚಾಗಿದ್ದು, ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರು ಕಾವೇರಿ ನದಿಯನ್ನು ಸೇರುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರು ಸ್ನಾನಘಟ್ಟವನ್ನು ಆಕ್ರಮಿಸಿಕೊಂಡಿದೆ. ಮಳೆಯ ತೀವ್ರತೆ ಹೆಚ್ಚಾಗಿ ಕಾವೇರಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದೇ ಆದರೆ ಭಾಗಮಂಡಲ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆಯಿದೆ.

ಕಾವೇರಿ ಉಕ್ಕಿ ಹರಿಯುವ ಸಾಧ್ಯತೆ

ಕಾವೇರಿ ಉಕ್ಕಿ ಹರಿಯುವ ಸಾಧ್ಯತೆ

ಮೊದಲೆಲ್ಲ ಇಷ್ಟರಲ್ಲೇ ಹಲವು ಬಾರಿ ಜಲಾವೃತಗೊಂಡು ಭಾಗಮಂಡಲ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಈ ಬಾರಿ ಪ್ರಥಮ ಬಾರಿಗೆ ಭಾಗಮಂಡಲದಲ್ಲಿ ನೀರು ಕಾಣಿಸಿಕೊಂಡಿದೆ. ಈ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದರೆ ಮಾತ್ರ ಕಾವೇರಿ ಉಕ್ಕಿ ಹರಿಯಲು ಸಾಧ್ಯವಾಗಲಿದೆ. ಕಾವೇರಿ ನದಿ ತಟದ ಪ್ರದೇಶಗಳಾದ ಬಲಮುರಿ, ಅಯ್ಯಂಗೇರಿ, ಸಿದ್ದಾಪುರ, ನೆಲ್ಯಹುದಿಕೇರಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಅಪಾಯ ಉಂಟಾಗುವ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚಿಸಲಾಗಿದೆ.

ಮಡಿಕೇರಿಯಲ್ಲೇ ಹೆಚ್ಚಿನ ಮಳೆ

ಮಡಿಕೇರಿಯಲ್ಲೇ ಹೆಚ್ಚಿನ ಮಳೆ

ಜಿಲ್ಲೆಯಲ್ಲಿ ಮಂಗಳವಾರ 51.83 ಮಿ.ಮೀ. ಮಳೆ ಸುರಿದಿದ್ದು, ಜನವರಿಯಿಂದ ಇಲ್ಲಿವರೆಗೆ 635.62 ಮೀ.ಮೀ ಮಳೆ ಸುರಿದಿದೆ. ಜಿಲ್ಲೆಯ ಮೂರು ತಾಲೂಕುಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ಹೆಚ್ಚಿನ ಮಳೆ ಸುರಿದಿದ್ದು, ಒಂದೇ ದಿನ 61.45 ಮಿ.ಮೀ. ಸುರಿದಿದೆ. ವಿರಾಜಪೇಟೆ ತಾಲೂಕಿನಲ್ಲಿ 53 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 41.03 ಮಿ.ಮೀ. ಮಳೆ ಸುರಿದಿದೆ.

ಹಾರಂಗಿಯಲ್ಲಿ ಹೆಚ್ಚಿದ ಒಳಹರಿವು

ಹಾರಂಗಿಯಲ್ಲಿ ಹೆಚ್ಚಿದ ಒಳಹರಿವು

ಮಡಿಕೇರಿ ತಾಲೂಕಿನಲ್ಲಿ ಮಳೆ ಬಿರುಸುಗೊಂಡಿರುವುದರಿಂದ ಹಾರಂಗಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 2123 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಇದೀಗ 2819.26 ಅಡಿಯಷ್ಟು ನೀರು ತುಂಬಿದೆ. ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಳ್ಳುವ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಭತ್ತದ ಕೃಷಿ ಸೇರಿದಂತೆ ಹಲವು ರೀತಿಯ ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿರುವುದು ಜಿಲ್ಲೆಯಲ್ಲಿ ಗೋಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+