ಕೈ ಕೊಟ್ಟ ಮುಂಗಾರು: ಕೊಡಗಿನಲ್ಲಿ ವಾಡಿಕೆಗಿಂತ ಶೇ.11 ರಷ್ಟು ಮಳೆ ಕಡಿಮೆ
ಮಡಿಕೇರಿ, ಜೂನ್ 22: ನೈಋತ್ಯ ಮುಂಗಾರು ಹಂಗಾಮು ಆರಂಭವಾಗಿದೆ. ಆದರೆ ಜೂನ್ 22 ಬಂದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಈವರೆಗೆ 490.6 ಮಿ. ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ 11.5ರಷ್ಟು ಕಡಿಮೆ ಮಳೆಯಾಗಿದೆ.
ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟ ಕಾರಣ ಈ ವರ್ಷ ಕೊಡಗು ಜಿಲ್ಲೆಯ ಬರ ಜನರನ್ನು ಕಾಡಿತ್ತು. ಜೀವನದಿ ಕಾವೇರಿ ಬತ್ತಿ ಹೋಗಿತ್ತು. ಮಡಿಕೇರಿಯಲ್ಲಿ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆ ಉಂಟಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಸುರಿದಿತ್ತು.

ಆದರೆ ನೈಋತ್ಯ ಮುಂಗಾರು ರಾಜ್ಯಕ್ಕೆ ಆಗಮಿಸಿದ ಬಳಿಕ ಮಳೆ ಕಡಿಮೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಸುರಿದ ಮಳೆಯ ಪ್ರಮಾಣ ವಾಡಿಕೆ ಅಷ್ಟಿಲ್ಲ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ರೈತರು ಕೃಷಿ ಚಟುಟಿಕೆ ಆರಂಭಿಸಿದ್ದಾರೆ.
ಯಾವ-ಯಾವ ಬೆಳೆಗಳು?: ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಮತ್ತು ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದೆ. ಕೃಷಿ ಚಟುವಟಿಕೆಗೆ ಭೂಮಿ ಹದ ಮಾಡುವ ಕಾರ್ಯ ನಡೆದಿದೆ. ಭತ್ತ ಸಸಿಮಡಿ ಕಾರ್ಯ ಆರಂಭವಾಗಲಿದೆ. ಹಾಗೆಯೇ ಮುಸುಕಿನ ಜೋಳ ಬಿತ್ತನೆ ಕಾರ್ಯ ಶುರುವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭತ್ತದ ಸಸಿಮಡಿ ಕಾರ್ಯವು ಪ್ರಾರಂಭಗೊಂಡಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಾಟಿ ಕಾರ್ಯಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯ ಪ್ರಾರಂಭಗೊಂಡಿದ್ದು, ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 2171 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 1198.3 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದ್ದು,ಇಲ್ಲಿಯವರೆಗೆ 636.14 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಹಾರಂಗಿ ಜಲಾಶಯವಿದೆ. ಡ್ಯಾಂನ ಗರಿಷ್ಠ ಮಟ್ಟ 2,859 ಅಡಿಗಳು, ಸದ್ಯದ ನೀರಿನ ಮಟ್ಟ 2828.25 ಅಡಿಗಳು. ಕಳೆದ ವರ್ಷ ಇದೇ ದಿನ 2819.01 ಅಡಿಗಳ ನೀರಿನ ಸಂಗ್ರಹವಿತ್ತು. ಒಳಹರಿವು 366 ಕ್ಯುಸೆಕ್, ಕಳೆದ ವರ್ಷ ಇದೇ ದಿನ 137 ಕ್ಯುಸೆಕ್ ಒಳಹರಿವು ಇತ್ತು. ಹೊರ ಹರಿವು ನದಿಗೆ 200 ಕ್ಯುಸೆಕ್.
ಜಿಲ್ಲೆಯಲ್ಲಿ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ರಕ್ಷಣಾ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ ಪಡೆ ಆಗಮಿಸಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪ್ರಕರಣಗಳು ವರದಿಯಾದಲ್ಲಿ ಮಾಹಿತಿ ನೀಡಲು ವಿಪತ್ತು ನಿರ್ವಹಣಾ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಮುಂಗಾರು ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಆಗಮಿಸಿರುವ ಎನ್‍ಡಿಆರ್‍ಎಫ್ ತಂಡವು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದೆ. ಮಳೆಗಾಲದಲ್ಲಿ ಅನುಸರಿಸಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಿದೆ.
ಜಿಲ್ಲಾಧಿಕಾರಿಗಳು ಮಳೆ ಸಂಬಂಧ ಹವಾಮಾನ ಇಲಾಖೆಯಿಂದ ಕಾಲಕಾಲಕ್ಕೆ ಬಿಡುಗಡೆ ಆಗುವ ಮಾಹಿತಿಯನ್ನು ಅಪ್‍ಡೇಟ್ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರವಹಿಸಿ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.












Click it and Unblock the Notifications