Get Updates
Get notified of breaking news, exclusive insights, and must-see stories!

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್

ಮಡಿಕೇರಿ, ಮಾರ್ಚ್ 08: ರಾಜ್ಯದಲ್ಲಿ ವಿಶಿಷ್ಟ ಸಂಸ್ಕೃತಿ ಹೊಂದಿರುವ ಪುಟ್ಟ ಜಿಲ್ಲೆ ಕೊಡಗು. ಶೌರ್ಯ ಸಾಹಸಕ್ಕೆ ಕೊಡಗು ಎಷ್ಟು ಹೆಸರು ವಾಸಿಯಾಗಿದೆಯೋ ಅಷ್ಟೇ ಕ್ರೀಡಾ ರಂಗದಲ್ಲೂ ತನ್ನದೇ ಆದ ಕೊಡುಗೆ ನೀಡಿದೆ. ಅಲ್ಲದೇ ವಿವಿಧ ರಂಗಗಳಲ್ಲಿ ಕೊಡಗಿನ ಪ್ರತಿಭೆಗಳು ತಮ್ಮ ಹಿರಿಮೆಯನ್ನು ಸಾಕಷ್ಟು ಬಾರಿ ಪ್ರದರ್ಶಿಸಿದ್ದಾರೆ.

ಕೊಡಗು ಹಲವು ಬುಡಕಟ್ಟು ಜನಾಂಗಗಳಿರುವ ಜಿಲ್ಲೆ. ಇಲ್ಲಿ ಪ್ರಮುಖವಾಗಿ ಮೂಲನಿವಾಸಿಗಳಾದ ಕೊಡವ ಮತ್ತು ಗೌಡ ಜನಾಂಗದ ಸಂಸ್ಕೃತಿ ಮತ್ತು ಪರಂಪರೆ ಎದ್ದು ಕಾಣುತ್ತಿದೆ. ನಮ್ಮ ಯುವ ಜನಾಂಗ ಆಧುನಿಕತೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಶ್ರೀಮಂತ ಕಲೆ ಮತ್ತು ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಮಿಲನಾ ಭರತ್‌.

ರಾಜ್ಯದ ಎಷ್ಟೋ ಸಮುದಾಯಗಳಿಗೆ ಈಗಲೂ ಮಾತನಾಡಲು ಸರಿಯಾದ ಭಾಷೆ ಇಲ್ಲ. ಸಂಸ್ಕೃತಿ-ಭಾಷೆಗಳು ಅವಸಾನ ಕಂಡಿವೆ. ಆದರೆ, ಇಂಥ ಶ್ರೀಮಂತ ಸಂಸ್ಕೃತಿ ಮರೆಯಾಗಬಾರದು ಎಂದು ಕೊಡಗಿನ ಮಹಿಳೆಯೊಬ್ಬರು ಪಣತೊಟ್ಟಿದ್ದಾರೆ.

ನಾಟ್ಯ ಮಿಲನ ಶಾಲೆ ಮೂಲಕ ಉಚಿತ ನೃತ್ಯ ತರಬೇತಿ

ನಾಟ್ಯ ಮಿಲನ ಶಾಲೆ ಮೂಲಕ ಉಚಿತ ನೃತ್ಯ ತರಬೇತಿ

ಕೊಡಗು ಜಿಲ್ಲೆಯ ಭಾಗಮಂಡಲದ ಮಿಲನ ಭರತ್, ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿದ್ದರೂ, ರಜೆ ದಿನಗಳಲ್ಲಿ ತಮ್ಮ ಗೌಡ ಸಮುದಾಯದ ಅರೆ ಭಾಷೆ, ಸಂಸ್ಕೃತಿ ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಂಡಲ ಗ್ರಾಮದಲ್ಲಿ ಕಳೆದ 14 ವರ್ಷಗಳಿಂದ "ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್' ಅಡಿಯಲ್ಲಿ "ನಾಟ್ಯ ಮಿಲನ ನೃತ್ಯ ಶಾಲೆ' ಮೂಲಕ ಉಚಿತ ನೃತ್ಯ ತರಬೇತಿ ನೀಡುತ್ತಿದ್ದಾರೆ.

ಗೌಡರ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಹುತ್ತರಿ ಕೋಲು, ಸುಗ್ಗಿ ಕುಣಿತ, ಭೂತಕೋಲ, ಆಟಿ ಕಳಂಜ, ಜೋಗಿ ಕುಣಿತ, ಸೋಬಾನೆ ಪದ ಇವುಗಳನ್ನು ಪ್ರದರ್ಶನ ಕಲೆಯಾಗಿ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲನ ಭರತ್

ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲನ ಭರತ್

"ಅರೆ ಭಾಷೆ ಗೌಡರ ಸಿರಿ ಸಂಸ್ಕೃತಿ' ಎಂಬ ಹೆಸರಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವರ ತಂಡ ಪ್ರದರ್ಶನ ನೀಡಿದೆ. ನೃತ್ಯ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷ ಭೂಷಣ, ಕಾರ್ಯಕ್ರಮ ನೀಡುವ ಪ್ರಯಾಣದ ವೆಚ್ಚ ಎಲ್ಲವನ್ನೂ ಟ್ರಸ್ಟ್ ಮೂಲಕ ಭರಿಸಲಾಗುತ್ತಿದೆ. ಇನ್ನು ಸಾಹಿತ್ಯದತ್ತ ಒಲವು ಹೊಂದಿರೋ ಮಿಲನ ಅವರು "ಭಾವಲಹರಿ' ಮತ್ತು "ಮೌನ ಮುರಿಯೋ ಸಮಯ' ಅನ್ನೋ ಕವನ ಸಂಕಲನ ಹಾಗೂ

"ಕೊಡಗಿನಲ್ಲಿ ಐನ್ ಮನೆಗಳು' ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ.

ತಮಗೆ ದೊರೆಯುವ ಪ್ರತಿ ನಿಮಿಷವನ್ನೂ ಸಾರ್ಥಕವಾಗಿ ಬಳಸಿಕೊಳ್ಳುತ್ತಿರುವ ಮಿಲನ ಅವರು ಸಮಯದ ಮಿತಿಯಲ್ಲಿ ಸ್ವಯಂ ಸ್ಫೂರ್ತಿಯಿಂದ ನಿಶ್ಯಬ್ಧವಾಗಿ ಸೇವೆ ಸಲ್ಲಿಸುತ್ತಿರುವ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದಾರೆ. ಮಿಲನ ಕೆ ಭರತ್‌ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೃತ್ತಿಯೊಂದಿಗೆ ಸಾಂಸ್ಕೃತಿಕ ಪ್ರವೃತ್ತಿ

ವೃತ್ತಿಯೊಂದಿಗೆ ಸಾಂಸ್ಕೃತಿಕ ಪ್ರವೃತ್ತಿ

ಸರ್ಕಾರಿ ಕೆಲಸ ಸಿಕ್ಕರೆ ಸಾಕು ಹುಟ್ಟಿದ್ದಕ್ಕೂ ಜೀವನ ಸಾರ್ಥಕವಾದಂತೆ ಎನ್ನುವವರ ಮಧ್ಯೆಯಲ್ಲಿ ಮಿಲನ ಕೆ.ಭರತ್‌ ಅವರ ಕರ್ತವ್ಯವು ಅವರ ಬದುಕಿನ ಸಾಕ್ಷಿಪ್ರಜ್ಞೆ ಎನ್ನಬಹುದು. ಅದರಲ್ಲೂ ಸರ್ಕಾರಿ ಕೆಲಸ, ಅದರಲ್ಲಿ ಸಿಗುವ ರಜೆಗಳನ್ನು ಅನುಭವಿಸಿಕೊಂಡು ಅಧಿಕಾರದ ದರ್ಪದೊಂದಿಗೆ ಕಾಲ ಕಳೆಯುವ ಅನೇಕರಲ್ಲಿ ಅಪರೂಪದ ವ್ಯಕ್ತಿತ್ವದ ಮಿಲನ ಭರತ್ ನಮ್ಮ ಮಧ್ಯೆದಲ್ಲಿದ್ದಾರೆ.

ಸರ್ಕಾರಿ ಸೇವೆಯನ್ನು ಜನಸೇವೆ ಮಾಡಲು ಸಿಕ್ಕಿರುವ ಸಮಾನ ಅವಕಾಶವೆಂದು ವೃತ್ತಿಯೊಂದಿಗೆ ಸಾಂಸ್ಕೃತಿಕ ಪ್ರವೃತ್ತಿಯನ್ನು ಬೆಳಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಿಲನ ಅವರು ಕೊಡಗಿನ ಭಾಗದಲ್ಲಿನ ಯುವ ಚೇತನಗಳಿಗೆ ಸಾಂಸ್ಕತಿಕ ಪ್ರತಿಭೆಯನ್ನು ಧಾರೆ ಎರೆಯುತ್ತಾ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.

ತಿಂಗಳ ಸಂಬಳದಲ್ಲಿ ಶೇ.30% ರಷ್ಟು ಹಣವನ್ನು ತಮ್ಮ ಟ್ರಸ್ಟ್ ಗೆ

ತಿಂಗಳ ಸಂಬಳದಲ್ಲಿ ಶೇ.30% ರಷ್ಟು ಹಣವನ್ನು ತಮ್ಮ ಟ್ರಸ್ಟ್ ಗೆ

ಸಮಯವನ್ನು ವ್ಯರ್ಥ ಮಾಡದೇ ಅವಕಾಶಗಳಿಗೆ ಸೆಣಸಾಡಬೇಕು ಎನ್ನುವ ರವೀಂದ್ರರ ಮಾತಿನಲ್ಲಿ ಬಹುಶಃ ನಂಬಿಕೆಯಿಟ್ಟವರು ಮಿಲನ.

ತರಬೇತಿ ಪಡೆದವರಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರದರ್ಶನ ನೀಡಿ ಕಲಾಸಕ್ತರಿಗೆ ಉತ್ತೇಜನ ನೀಡುತ್ತಿದ್ದಾರೆ.

ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೇ, ತಮ್ಮ ತಿಂಗಳ ಸಂಬಳದಲ್ಲಿ ಶೇ.30% ರಷ್ಟು ಹಣವನ್ನು ತಮ್ಮ ಟ್ರಸ್ಟಿನ ಖಾತೆಗೆ ಸೇರಿಸಿ ಸ್ವಾವಲಂಬಿ ತರಬೇತಿ ಕೇಂದ್ರವಾಗಿಸಿದ್ದಾರೆ. ಸಾಹಿತ್ಯಕ್ಕೂ ಸಾಕಷ್ಟು ಕೊಡುಗೆ ನೀಡುತ್ತಿರುವ ಇವರನ್ನು ಪ್ರೇಮಕವಿ ಹೃದಯಿ ಎನ್ನುವುದುಂಟು.

ಯುವ ಜನಾಂಗಕ್ಕೆ ಪ್ರೇರಣೆ, ಸ್ಪೂರ್ತಿಯಾಗಿದ್ದಾರೆ ಮಿಲನ

ಯುವ ಜನಾಂಗಕ್ಕೆ ಪ್ರೇರಣೆ, ಸ್ಪೂರ್ತಿಯಾಗಿದ್ದಾರೆ ಮಿಲನ

ಮಿಲನ ಕೆ ಭರತ್‌ ಅವರ ಸಾಧನೆಗೆ ಮಹಿಳಾ ಸಾಧಕಿ, ನೃತ್ಯ ಸರಸ್ವತಿ, ಕಿರುತೆರೆಯ ಮಿಸ್‌ ಟ್ಯಾಲೆಂಟ್ ಮತ್ತು ಮಿಸ್‌ ವಿವೆಲ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದರೂ ಕೂಡ ಬಿಗುಮಾನವಿಲ್ಲದೆ ನಾಡು ನುಡಿ, ಕಲೆ ಸಂಸ್ಕೃತಿ, ಸಾಹಿತ್ಯ ಆರಾಧಕಿಯಾಗಿದ್ದಾರೆ.

ಇವರ ಪ್ರತಿಭೆಯಿಂದಲೇ ಇವರ ಮನೆಯು ನೂರಾರು ಪ್ರಶಸ್ತಿಗಳಿಂದ ತುಂಬಿದೆ. ಅನೇಕ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಈಗಲೂ ಭಾಗವಹಿಸುತ್ತಿರುವ ಮಿಲನ ಅವರು, ಸರ್ಕಾರಿ ಅಧಿಕಾರಿಯಾಗಿಯೂ ಸಮರ್ಥ ಸೇವೆ ಸಲ್ಲಿಸುತ್ತಿದ್ದು, ಗೃಹಿಣಿಯಾಗಿಯೂ ಸಾರ್ಥಕ ಸೇವೆ ಹಾಗೂ ನೃತ್ಯ ಗುರು ಮತ್ತು ಸಾಹಿತಿ ಆಗಿಯೂ ಅನುಪಮ ಸೇವೆ ಮಾಡುತ್ತಿದ್ದಾರೆ. ಇವರ ಜೀವನಗಾಥೆ ನಮ್ಮ ಯುವಜನಾಂಗಕ್ಕೆ ನಿಜಕ್ಕೂ ಪ್ರೇರಣೆ ,ಸ್ಪೂರ್ತಿ ಆಗುತ್ತದೆ. ಇಂಥಹ ಸಮಾಜಮುಖಿ ಪ್ರತಿಭೆಗಳು ನಮಗೆ ಅಗತ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+