Get Updates
Get notified of breaking news, exclusive insights, and must-see stories!

World Honey Bee Day: ಕೊಡಗಿನ ಶುದ್ಧ ಜೇನು ಮಾಯ..ಈಗ ಕಳಪೆ ಜೇನಿನದೇ ದರ್ಬಾರ್!

ಮಡಿಕೇರಿ, ಮೇ 20: ಮೇ 20ನ್ನು ವಿಶ್ವ ಜೇನುನೊಣದ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದು ಕಾಲದಲ್ಲಿ ನಮ್ಮ ಸುತ್ತಮುತ್ತಲ ನಿಸರ್ಗದಿಂದ ಶುದ್ಧ ಜೇನನ್ನು ತಯಾರಿಸಿ ನಮ್ಮ ಅಗತ್ಯತೆ ನೀಗಿಸಿ ಔಷಧಿಯಾಗಿ, ದಿನಬಳಕೆಯ ಪದಾರ್ಥವಾಗಿ ಹಲವು ಬಗೆಯಲ್ಲಿ ಉಪಯೋಗಕ್ಕೆ ಬರುತ್ತಿದ್ದ ಜೇನಿನ ಬಗ್ಗೆ ನೆನಪು ಮಾಡಿಕೊಳ್ಳುವ ದಿನವಾಗಿದೆ.

ಇವತ್ತಿನ ಕಳಪೆ ಜೇನಿನ ಆರ್ಭಟದಲ್ಲಿ ಅವತ್ತಿನ ಆ ಶುದ್ಧ ಜೇನು ಎಲ್ಲಿ ಹೋಯಿತು? ಏನಾಯಿತು ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಈಗ ಎಲ್ಲೆಂದರಲ್ಲಿ ಮಳಿಗೆಗಳಲ್ಲಿ ಮಾರಾಟಕ್ಕೆ ತುಂಬಿಸಿಟ್ಟುವ ಜೇನಿನ ಬಾಟಲಿಗಳನ್ನು ನೋಡಿದಾಗ ಅಚ್ಚರಿಯಾಗುತ್ತಿದೆ. ಮತ್ತು ಇಷ್ಟು ಸುಲಭವಾಗಿ ಎಲ್ಲಿಂದ ಜೇನು ತಯಾರಾಗಿ ಬರುತ್ತಿದೆ ಎಂಬ ಅಚ್ಚರಿಯೂ ಮೂಡುತ್ತಿದೆ.

May 20 Is Celebrated As World Honey Bee Day

ಈಗಿನ ಪರಿಸ್ಥಿತಿಯಲ್ಲಿ ಒಂದು ಕೆಜಿ ಜೇನು ತುಪ್ಪ ಸಂಗ್ರಹಿಸಬೇಕಾದರೆ ಎಷ್ಟೊಂದು ಕಷ್ಟವಿದೆ ಎನ್ನುವುದು ಜೇನು ಸಾಕಣೆ ಮಾಡುವವರಿಗಷ್ಟೇ ಗೊತ್ತು. ಇನ್ನು ಮೊದಲಿನಂತೆ ಎಲ್ಲೆಂದರಲ್ಲಿ ಕಾಡಿನಲ್ಲಿಯೂ ಜೇನು ಸಿಗುತ್ತಿಲ್ಲ. ಹಾಗಾದರೆ ಇಷ್ಟೊಂದು ಜೇನು ಎಲ್ಲಿಂದ ಬರುತ್ತಿದೆ? ಎಂಬ ಪ್ರಶ್ನೆಯೂ ಮೂಡುತ್ತಿದೆ.

ಅವಸಾನದಂಚಿನಲ್ಲಿ ಕೊಡಗಿನ ಜೇನು

ಮೊದಲೆಲ್ಲ ಮಲೆನಾಡಿನ ಕಾಡಿನ, ಕಾಫಿ ತೋಟಗಳ ಮರದ ಪೊಟರೆಗಳಲ್ಲಿ.. ಹುತ್ತಗಳ ಸಂದಿನಲ್ಲಿ.. ಮನೆಗಳ ಮುಂದಿನ ಪೆಟ್ಟಿಗೆಯಲ್ಲಿ.. ಹೀಗೆ ಎಲ್ಲೆಂದರಲ್ಲಿ ಶುದ್ಧ ಜೇನುಗಳು ಸಿಗುತ್ತಿದ್ದವು. ಕಾಡಿನಲ್ಲಂತೂ ವಿವಿಧ ಬಗೆಯ ಜೇನುಗಳು ದೊರೆಯುತ್ತಿದ್ದವು. ಆದರೀಗ ಶುದ್ಧ ಜೇನು ಪಡೆಯುವುದು ಮರೀಚಿಕೆಯಾಗುತ್ತಿದೆ. ಒಂದು ಕಾಲದಲ್ಲಿ ಕೊಡಗಿನ ಜೇನಿಗೆ ಎಲ್ಲಿಲ್ಲದ ಬೇಡಿಕೆಯಿತ್ತು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಜೇನು ಉತ್ಪತ್ತಿಯಾಗುತ್ತಿತ್ತು. ಅವತ್ತು ಏಲಕ್ಕಿ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಮತ್ತು ಕಾಡುಗಳು ಹೇರಳವಾಗಿದ್ದವು. ಮಳೆ ಚೆನ್ನಾಗಿ ಸುರಿಯುತ್ತಿದ್ದರಿಂದ ವಾತಾವರಣ ತಂಪಾಗಿ ಜೇನಿಗೆ ಪೂರಕವಾಗಿತ್ತು.

ಹೀಗಾಗಿ ಇಲ್ಲಿನ ಬೆಳೆಗಾರರಿಗೆ ಜೇನು ಉಪ ಕಸುಬಾಗಿ ಒಂದಷ್ಟು ಆದಾಯ ತರುತ್ತಿತ್ತು. ಕೆಲವರು ಮನೆ ಸುತ್ತಮುತ್ತ ಜೇನು ಪೆಟ್ಟಿಗೆಯನ್ನಿಟ್ಟು ಸಾಕಣೆ ಮಾಡುತ್ತಿದ್ದರು. ಇದರಿಂದ ವರ್ಷದ ಖರ್ಚಿಗೆ ಜೇನು ಸಿಗುತ್ತಿತ್ತಲ್ಲದೆ, ಹೆಚ್ಚಾದ ಜೇನನ್ನು ಮಾರಾಟ ಮಾಡುತ್ತಿದ್ದರು. ಆದರೆ ಎರಡು ಮೂರು ದಶಕಗಳಿಂದ ಜೇನು ಸಾಕಾಣಿಕೆ ಅವಸಾನದ ಅಂಚಿಗೆ ತಲುಪಿದೆ.

May 20 Is Celebrated As World Honey Bee Day

ಕೊಡಗಿನಲ್ಲಿ ಜೇನು ನಶಿಸಲು ಕಾರಣಗಳೇನು?

ಇದಕ್ಕೆ ಕಾರಣ ಹುಡುಕುತ್ತಾ ಹೋದರೆ, ಕೊಡಗಿನ ನಿಸರ್ಗದಲ್ಲಾದ ಬದಲಾವಣೆ, ಪರಿಸರ ನಾಶ, ಹೇರಳವಾಗಿ ಉಪಯೋಗಿಸುತ್ತಿರುವ ಕ್ರಿಮಿನಾಶಕಗಳು ಹೀಗೆ ಹತ್ತಾರು ಕಾರಣಗಳು ಸಿಗುತ್ತವೆ. ಮೊದಲೆಲ್ಲ ಏಲಕ್ಕಿ ತೋಟಗಳಿದ್ದ ಕಾಲದಲ್ಲಿ ಹೆಮ್ಮರಗಳಿದ್ದವು. ಅವು ಹೂ ಬಿಡುತ್ತಿದ್ದವು. ಈ ಹೂಗಳಿಂದ ಮಕರಂದ ಹೀರಿ ಜೇನುನೊಣಗಳು ಜೇನು ತಯಾರಿಸುತ್ತಿದ್ದವು. ಏಲಕ್ಕಿ ತೋಟ ನಾಶವಾಗಿ ಕಾಫಿ ತೋಟವಾಗಿ ಮಾರ್ಪಟ್ಟ ಕಾರಣ ಹೆಮ್ಮರಗಳು ನಾಶವಾದವು.

ಮೊದಲಿಗೆ ಹೋಲಿಸಿದರೆ ಅರಣ್ಯವೂ ಕಡಿಮೆಯಾಗಿದೆ. ಜೊತೆಜತೆಯಲ್ಲೇ ಬೆಳೆಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುತ್ತಿರುವುದರಿಂದ ಮಕರಂದ ಹೀರಲು ಬರುವ ಜೇನು ನೊಣಗಳು ಸಾವನ್ನಪ್ಪುತ್ತಿವೆ. ಇದು ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವುದರಿಂದ ಜೇನು ಅವನಾಶದ ಅಂಚಿಗೆ ಬಂದು ತಲುಪಿವೆ.

ಕೃಷಿಕರಲ್ಲಿ ಜೇನು ಸಾಕಣೆಯತ್ತ ನಿರಾಸಕ್ತಿ

ಹಿಂದೆ ಕೊಡಗಿನಾದ್ಯಂತ ಹಲವರು ಜೇನು ಸಾಕಣೆ ಮಾಡಿ ಯಶಸ್ಸು ಕಂಡಿದ್ದರು. ಜೇನು ಕೃಷಿಕರಿಗೆ ಉತ್ತೇಜನ ನೀಡಲು ಹಲವು ಜೇನು ಸಾಕಾಣಿಕೆ, ಮಾಹಿತಿ, ತರಬೇತಿ ಕೇಂದ್ರಗಳು ಹುಟ್ಟಿಕೊಂಡಿದ್ದವು. ಆದರೆ ಯಾವಾಗ ಜೇನು ಹುಳುಗಳಿಗೆ ರೋಗ ಬಂದು ಅವುಗಳ ಸಂತತಿ ಕಡಿಮೆಯಾಯಿತೋ ಈ ತರಬೇತಿ ಕೇಂದ್ರಗಳು ಕೂಡ ಅವಸಾನ ತಲುಪಿವೆ. ಮನೆಗಳ ಮುಂದಿನ ತೋಟಗಳಲ್ಲಿ ಕಂಡು ಬರುತ್ತಿದ್ದ ಜೇನು ಪೆಟ್ಟಿಗೆಗಳು ಜೇನು ಕುಟುಂಬಗಳಿಲ್ಲದೆ ಗೆದ್ದಲು ಹಿಡಿಯತೊಡಗಿವೆ. ಸಾಮಾನ್ಯವಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಜಾಗ ಅರಸಿಕೊಂಡು ಬರುತ್ತಿದ್ದ ಜೇನು ನೊಣಗಳು ಈಗ ಬರುವುದೇ ಕಡಿಮೆಯಾಗಿವೆ.

ಜೇನು ಕುಟುಂಬಗಳನ್ನು ಹುಡುಕಿ ಅವುಗಳನ್ನು ಜೇನುಪೆಟ್ಟಿಗೆಯಲ್ಲಿಟ್ಟು ಸಾಕುವುದು ಕೂಡ ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಜೇನು ಕೃಷಿಯತ್ತ ಆಸಕ್ತಿ ಹೊರಟು ಹೋಗಿದೆ. ಕೃಷಿಕರೇ ಇಲ್ಲದ ಮೇಲೆ ಜೇನು ಸಾಕಾಣಿಕೆ ಕೇಂದ್ರಗಳಿಗೇನು ಕೆಲಸ? ಹೀಗಾಗಿ ಅವುಗಳಿಗೂ ಬೀಗ ಬಿದ್ದಿದೆ. ಜೇನು ಕೃಷಿ ಬಗ್ಗೆ ಆಸಕ್ತಿ ಮೂಡಿಸಿ ಅವರಿಗೆ ಸೂಕ್ತ ತರಬೇತಿ ನೀಡಲು ತೆರೆಯಲಾಗಿದ್ದ ಜೇನು ಸಾಕಾಣಿಕೆ ಮತ್ತು ತರಬೇತಿ ಕೇಂದ್ರಗಳಿಗೆ ಈಗ ಭೇಟಿ ನೀಡಿದರೆ ಅವು ಜೇನು ಅವಸಾನದ ಅಂಚಿಗೆ ತಲುಪಿರುವುದಕ್ಕೆ ಜೇನು ಪೆಟ್ಟಿಗೆಯಿಲ್ಲದ ಖಾಲಿ ಜಾಲರಿಗಳು.. ಗೆದ್ದಲು ಹಿಡಿಯುತ್ತಿರುವ ಪೆಟ್ಟಿಗೆಗಳು.. ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣಗಳು.. ಬಾಗಿಲು ಮುಚ್ಚಿದ ಕಟ್ಟಡಗಳು.. ಸಾಕ್ಷಿಯಾಗಿವೆ.

ಕಳಪೆ ಜೇನಿಗೆ ಕಡಿವಾಣ ಹಾಕುವವರು ಯಾರು?

ಹಾಗೆನೋಡಿದರೆ ಕೊಡಗಿನ ಜೇನಿಗೆ ಇಂದಿಗೂ ಬೇಡಿಕೆಯಿದೆ. ಆದರೆ ಪರಿಶುದ್ಧ ಜೇನಿನ ಅಗತ್ಯತೆ ಇರುವುದರಿಂದ ಮತ್ತು ಮುಂದಿನ ಪೀಳಿಗೆಗೂ ಕೊಡಗಿನ ಜೇನನ್ನು ಉಳಿಸಿಕೊಳ್ಳಬೇಕಾದ ಕಾರಣದಿಂದಾಗಿ ಜೇನಿನ ಬಗ್ಗೆ ಆಸಕ್ತಿ ಮೂಡಿಸಿ, ಉತ್ತೇಜನ ನೀಡಬೇಕಾಗಿದೆ. ಆದರೆ ಇದ್ಯಾವುದೂ ಆದಂತೆ ಕಾಣಿಸುತ್ತಿಲ್ಲ. ಬದಲಿಗೆ ಎಲ್ಲಿಂದಲೋ ಬರುತ್ತಿರುವ ಕಳಪೆ ಜೇನು ಮಾತ್ರ ರಾರಾಜಿಸುತ್ತದೆ.

ಕೊಡಗಿನಲ್ಲಿ ಮಾರಾಟವಾಗುತ್ತಿರುವ ಕಳಪೆ ಜೇನನ್ನು ನಿಯಂತ್ರಿಸದೆ ಹೋದರೆ ಮುಂದಿನ ದಿನಗಳಲ್ಲಿ ಕೊಡಗಿನ ಜೇನಿಗೆ ಈಗ ಖ್ಯಾತಿಗೆ ಅಪಖ್ಯಾತಿ ಬರುವ ದಿನಗಳು ದೂರವಿಲ್ಲ. ಪ್ರವಾಸೋದ್ಯಮ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಈ ಸಮಯದಲ್ಲಿ ಕೊಡಗಿನ ಜೇನು ತುಪ್ಪ ವೆಂದು ಕಳಪೆ ಜೇನು ತುಪ್ಪ ಮಾರಾಟ ಮಾಡುವುದೆಷ್ಟು ಸರಿ? ಕಡಿವಾಣ ಹಾಕುವವರು ಯಾರು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+