ಮತ್ತಿಗೋಡು ಆನೆ ಶಿಬಿರ: ಕಾಡಾನೆ ದಾಳಿಯಿಂದ ಸಾಕಾನೆ ಮೃತ
ಮಡಿಕೇರಿ, ಅಕ್ಟೋಬರ್ 15: ಕಾಡಾನೆಯೊಂದು ದಾಳಿ ನಡೆಸಿದಾಗ ಸಾಕಾನೆಯೊಂದು ಮೃತ ಪಟ್ಟ ಘಟನೆ ಮಡಿಕೇರಿಯ ಮತ್ತಿಗೋಡು ಆನೆ ಶಿಬಿರದಿಂದ ವರದಿಯಾಗಿದೆ.
ರಾಜೇಂದ್ರ (56) ಆನೆಯನ್ನು ಮಂಗಳವಾರ ರಾತ್ರಿ ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಮರುದಿನ ಬೆಳಿಗ್ಗೆ ಮಾವುತ ಮತ್ತು ಕಾವಾಡಿಗರು ಆನೆಯನ್ನು ಶಿಬಿರಕ್ಕೆ ಕರೆತರಲು ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ ಆನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು.
ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು ಗುರುವಾರ ಮೃತಪಟ್ಟಿದೆ ಎಂದು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ತಿಳಿಸಿದರು.

ಪಶುವೈದ್ಯ ಮುಜಿಬ್ ರೆಹಮಾನ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಡಿ.ಮಹೇಶ್ ಕುಮಾರ್, ಹುಣಸೂರು ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ, ವನ್ಯಜೀವಿ ಮಂಡಳಿ ಸದಸ್ಯ ಸುಬ್ರು ಪರಿಶೀಲಿಸಿದರು.
1990 ರಲ್ಲಿ ಸೋಮವಾರಪೇಟೆ ವಲಯದ ಯಡವನಾಡು ಅರಣ್ಯದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. 30 ವರ್ಷಗಳ ಕಾಲ ಈ ಆನೆ ಶಿಬಿರದಲ್ಲಿತ್ತು.












Click it and Unblock the Notifications