ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹಬ್ಬದಂದು ಕೊಡಗಿನ ಹೊನ್ನಮ್ಮನಿಗೆ ಬಾಗಿನ

By ಬಿಎಂ ಲವಕುಮಾರ್, ಮಡಿಕೇರಿ
|
Google Oneindia Kannada News

ಕೊಡಗಿನ ಸೋಮವಾರಪೇಟೆ ಬಳಿಯಿರುವ "ಹೊನ್ನಮ್ಮನ ಕೆರೆ"ಯಲ್ಲಿ ಸಡಗರ ಸಂಭ್ರಮದಿಂದ ಗೌರಿಹಬ್ಬವನ್ನು ಆಚರಿಸಲಾಗುತ್ತಿದ್ದು, ಹೆಂಗಳೆಯರು ಭಕ್ತಿಭಾವದಿಂದ ಹೊನ್ನಮ್ಮನನ್ನು ಪೂಜಿಸಿ ಬಾಗಿನ ಅರ್ಪಿಸುತ್ತಿದ್ದಾರೆ. ಪ್ರತಿವರ್ಷವೂ ಗೌರಿಹಬ್ಬದಂದು ಹೊನ್ನಮ್ಮನಿಗೆ ಬಾಗಿನ ಅರ್ಪಿಸುವುದು ತಲತಲಾಂತರದಿಂದ ನಡೆದುಕೊಂಡು ಬಂದಿದೆ.

ಸೋಮವಾರಪೇಟೆಯಿಂದ 6 ಕಿ.ಮೀ. ದೂರದ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮನ ಕೆರೆ ಹೆಣ್ಣುಮಗಳೊಬ್ಬಳ ಸಾಹಸ ಬಲಿದಾನದ ಕಥೆಯನ್ನು ಸಾರುತ್ತಾ ನಿಂತಿದ್ದು, ಇದುವರೆಗೆ ಕೆರೆ ಬತ್ತದೆ ಇರುವುದು ಇದರ ವಿಶೇಷತೆಯಾಗಿದೆ. [ಸಂತಾನ ಕರುಣಿಸುವ ಕುದೇರು ಗ್ರಾಮದ ಹಿಟ್ಟಿನ ಗೌರಮ್ಮ]

Married women offer bagina for Kodagina Honnamma on Gowri Ganesha

ಹಾಗೆನೋಡಿದರೆ ಗೌರಿ ಹಬ್ಬದಂದು ಹೆಣ್ಣುಮಕ್ಕಳು ಹೊನ್ನಮ್ಮನನ್ನು ಪೂಜಿಸಲು ಕಾರಣವಿದೆ. ಹೊನ್ನಮ್ಮನ ಕೆರೆ ಸೃಷ್ಟಿಯ ಹಿಂದೆ ಹೆಣ್ಣುಮಗಳೊಬ್ಬಳ ಬಲಿದಾನದ ಕಥೆಯಿದೆ.

ಹಿರಿಯರು ಹೇಳುವ ಪ್ರಕಾರ, ಹೊನ್ನಮ್ಮನ ಕೆರೆಯನ್ನು 1106ರಲ್ಲಿ ನಿರ್ಮಿಸಲಾಗಿದೆ. ಆಗಿನ ಕಾಲದಲ್ಲಿ ಹೊನ್ನಮ್ಮನ ಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ.1034ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತು. [ಪ್ಲಾಆಪ್ಯಾ ಗಣೇಶ ನಿಷೇಧ ಕಸದ ಬುಟ್ಟಿಯಲ್ಲಿ ವಿಸರ್ಜನೆ]

Married women offer bagina for Kodagina Honnamma on Gowri Ganesha

1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡು, ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತು. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವು.

ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತು. ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದ. ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಬರಲೇ ಇಲ್ಲ. [ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ]

Married women offer bagina for Kodagina Honnamma on Gowri Ganesha

ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ. ಆದರೆ ಕೆರೆಗೆ ಹಾರ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ.

ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ತಾನೆ ಹಾರವಾಗಿ ಊರ ಒಳಿತನ್ನು ಕಾಪಾಡುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ.

Married women offer bagina for Kodagina Honnamma on Gowri Ganesha

ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ಹೊನ್ನಮ್ಮನ ಪತಿ ಶಾಂತರಾಜುಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ.

ಈ ದೇವಾಲಯವನ್ನು ಗ್ರಾಮಸ್ಥರು ದಶಕದ ಹಿಂದೆ ಶ್ರಮದಾನದ ಮೂಲಕ ಜೀರ್ಣೋದ್ಧಾರಗೊಳಿಸಿ ಗುಡಿಯ ಮಧ್ಯೆ ಬಸವೇಶ್ವರ ದೇವರ ವಿಗ್ರಹ, ಬಲಭಾಗಕ್ಕೆ ಗಣಪತಿ ಮತ್ತು ತಾಯಿ ಹೊನ್ನಮ್ಮನ ವಿಗ್ರಹ ಹಾಗೂ ಎಡಭಾಗಕ್ಕೆ ಅಮೃತೇಶ್ವರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ.

ನಾಡಿನ ಜನತೆಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದರು ಬಾಗಿನ ಅರ್ಪಿಸುತ್ತಾರೆ. ಅಲ್ಲದೆ, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

English summary
Have you heard a folk story where woman sacrifices for the sake of water? If not, it is the story to read, especially by present generation. On Gowri Ganesha festival married women offer bagina to Honnamma, who sacrificed herself to fill water the lake in Somwarpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X