ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಓಡಾಡೋದು ನರಕ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 18: ವೀಕೆಂಡ್ ಬಂತೆಂದರೆ ಮಂಜಿನ ನಗರಿ ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿರುವುದರಿಂದ ಟ್ರಾಫಿಕ್ ಜಾಮ್ ಆಗಿ, ಜನಸಾಮಾನ್ಯರು ಪರದಾಡುವಂತಾಗಿದೆ.

ಇದರ ಮಧ್ಯೆ ಮಳೆಗೆ ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ವಾಹನ ಸವಾರರು ಸರ್ಕಸ್ ಮಾಡುತ್ತಾ ತೆರಳಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಸಂಭವಿಸುವುದರಲ್ಲಿ ಎರಡು ಮಾತಿಲ್ಲ.

Many roads in madikeri are damaged due to heavy rain

ಮಡಿಕೇರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ರಸ್ತೆಗಳ ಮಾರುದ್ದದ ಗುಂಡಿಗಳಲ್ಲಿ ಏಳುತ್ತಾ ಬೀಳುತ್ತಾ ಸಂಚರಿಸುವಾಗ ಹಿಡಿ ಶಾಪ ಹಾಕುವುದು ಮಾಮೂಲು! ನಗರದ ಪ್ರಮುಖ ರಸ್ತೆಗಳೇ ಗುಂಡಿ ಬಿದ್ದಿದ್ದು, ಇನ್ನು ನಗರದ ಗಲ್ಲಿಗಳ ರಸ್ತೆಯ ಸ್ಥಿತಿಯಂತೂ ಹೇಳತೀರದ್ದಾಗಿದೆ. ಹಳ್ಳಕೊಳ್ಳಗಳಲ್ಲಿ ಡಾಂಬರ್ ಕಿತ್ತು ಬರುತ್ತಿವೆ. ಕೆಲವು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಲಾಗಿದ್ದು, ಅಂತಹ ಸ್ಥಳಗಳನ್ನು ಹೊರತು ಪಡಿಸಿದರೆ, ಉಳಿದಂತೆ ಹೆಚ್ಚಿನ ಭಾಗಗಳಲ್ಲಿ ರಸ್ತೆಗಳು ಹೊಂಡಬಿದ್ದಿವೆ. ಅದರಲ್ಲಿ ನೀರು ತುಂಬಿಕೊಂಡಿದ್ದು ಎಚ್ಚರ ತಪ್ಪಿ ಎಲ್ಲಿಯಾದರೂ ವಾಹನ ಚಾಲಕರು ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಮಡಿಕೇರಿ-ಕೇರಳ ರಸ್ತೆ ದುರಸ್ಥಿ: ನಿರಾಳರಾದ ಜನರು

ಇಷ್ಟೆಲ್ಲ ಸಮಸ್ಯೆ ಇದ್ದರೂ ಸ್ಥಳೀಯ ಪುರಸಭೆಯಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿ ನಡೆಯುವ ಸಭೆ ಅಭಿವೃದ್ಧಿ ಕುರಿತ ಚರ್ಚೆಗಿಂತ ವೈಯಕ್ತಿಕ ನಿಂದನೆ, ಆರೋಪ ಪ್ರತ್ಯಾರೋಪಗಳಲ್ಲೇ ಮುಗಿದು ಹೋಗುತ್ತಿದೆ. ಈ ಬಾರಿ ಮಡಿಕೇರಿಯ ಹೊಂಡ ಗುಂಡಿಗಳ ರಸ್ತೆಯಿಂದ ಶ್ರೀಸಾಮಾನ್ಯ ಅನುಭವಿಸುವ ತೊಂದರೆ ಇಲ್ಲಿನ ಉಸ್ತುವಾರಿ ಸಚಿವರಿಗೂ ಅರ್ಥವಾಗಿದೆ. ಅವರು ಮನಸ್ಸು ಮಾಡಿದರೆ ಇದರ ತಡೆಗೆ ಕ್ರಮ ಕೈಗೊಳ್ಳಬಹುದು ಆದರೆ ಅದ್ಯಾವುದೂ ಆಗುವ ಲಕ್ಷಣಗಳು ಕಾಣುತ್ತಿಲ್ಲ.

Many roads in madikeri are damaged due to heavy rain

ಈ ಬಗ್ಗೆ ನಗರಸಭೆಯಿಂದ ಬರುವ ಉತ್ತರವೇನೆಂದರೆ ಒಳಚರಂಡಿ ಕಾಮಗಾರಿಯಿಂದ ಹೊಂಡಗುಂಡಿಗಳಾಗಿದೆ ಎಂಬ ಸಬೂಬು. ಇಷ್ಟಕ್ಕೂ ಈ ಕಾಮಗಾರಿಯನ್ನು ಮಳೆಗಾಲದ ಸಂದರ್ಭ ಮಾಡಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ. ಜನ, ವಾಹನಗಳು ಹೆಚ್ಚಾಗಿ ಓಡಾಡುವ ರಾಜಾಸೀಟ್, ವೆಬ್ಸ್ ರಸ್ತೆ, ಕಾನ್ವೆಂಟ್ ಜಂಕ್ಷನ್, ಎ.ವಿ. ಶಾಲೆ ಜಂಕ್ಷನ್, ಉಕ್ಕಡ ಮೊದಲಾದ ರಸ್ತೆಗಳ ಪರಿಸ್ಥಿತಿ ಹೇಳುವಂತಿಲ್ಲ. ಇಲ್ಲಿ ಚರಂಡಿಯಿಲ್ಲದೆ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಮಾಡಬೇಕಾದ ಕೆಲಸಗಳನ್ನು ಮಾಡದ ಕಾರಣದಿಂದಾಗಿ ಜನ ಪರದಾಡುವಂತಾಗಿದೆ. ಜತೆಗೆ ಇಲ್ಲಿನ ಅವ್ಯವಸ್ಥೆಯಿಂದಾಗಿ ದೂರದಿಂದ ಕನಸು ಹೊತ್ತು ಬರುವ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡು ಹಿಂತೆರಳುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many roads in Madikeri have damaged due to heavy rain, and tourists who come to Madikeri are irritating to travel in this road. District administration do not bother about it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ