ಕೊಡಗಿನಲ್ಲಿ ಕಳಪೆ ಕಾಮಗಾರಿ ಬಯಲು ಮಾಡಿದ ಮಳೆ!

Posted By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 22: ಕೊಡಗಿನಲ್ಲಿ ಯಾವುದೇ ಕಾಮಗಾರಿ ನಡೆದರೂ ಅದರ ಗುಣಮಟ್ಟ ಖಾತರಿಯಾಗಬೇಕಾದರೆ ಮಳೆಗಾಲ ಕಳೆಯಲೇ ಬೇಕು! ಒಂದು ಮಳೆಗಾಲ ಕಳೆದು ಅದಕ್ಕೆ ಯಾವುದೇ ಹಾನಿಯಾಗದೆ ಉಳಿದರೆ ಅದನ್ನು ಖಡಾಖಂಡಿತವಾಗಿ ಗುಣಮಟ್ಟದ ಕಾಮಗಾರಿ ಎಂದು ಒಪ್ಪಿಕೊಳ್ಳಬಹುದಾಗಿದೆ.

ನಾಲೆಗಳಿಗೆ ನೀರು, ಮಂಡ್ಯದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

ಆದರೆ ಇತ್ತೀಚೆಗೆ ನಡೆಯುವ ಕಾಮಗಾರಿಗಳ ಗುಣಮಟ್ಟ ಒಂದೇ ಒಂದು ಮಳೆಗಾಲಕ್ಕೆ ಬಯಲಾಗಿ ಬಿಡುತ್ತದೆ. ಇದಕ್ಕೆ ಐಗೂರು ಗ್ರಾಮ ಪಂಚಾಯಿತಿಯ ಯಡವನಾಡು ಫಾರೆಸ್ಟ್‍ನಿಂದ ಕಾಜೂರು ಜಂಕ್ಷನ್‍ವರೆಗೆ ನಡೆದ ರಸ್ತೆ ಕಾಮಗಾರಿ ಸಾಕ್ಷಿಯಾಗಿದೆ.

Madikeri roads damaged due to rain

ಐಗೂರು ಗ್ರಾಮ ಪಂಚಾಯಿತಿಯ ಯಡವನಾಡು ಫಾರೆಸ್ಟ್‍ನಿಂದ ಕಾಜೂರು ಜಂಕ್ಷನ್‍ವರೆಗೆ 6 ಕಿ.ಮೀ. ರಸ್ತೆ ಕಾಮಗಾರಿಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5ಕೋಟಿ 63 ಲಕ್ಷ ರೂ. ವೆಚ್ಚದಲ್ಲಿ ಮಾಡಿದೆ.

ಕೊಡಗಿನಲ್ಲಿ ಆಶಾಭಾವನೆ ಮೂಡಿಸಿದ ಮಳೆ

ಈ ಕಾಮಗಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಯೋಜನಾ ವಿಭಾಗ ಮಂಗಳೂರು ಇವರಿಂದ ನಡೆಸಲಾಗಿದ್ದು, ಕಾಮಗಾರಿಗೆ ಜೂ. 25, 2015 ರಂದು ಭೂಮಿಪೂಜೆ ನೇರವೇರಿಸಲಾಗಿತ್ತು. ಅಲ್ಲದೆ ಮೇ.24, 2016ಕ್ಕೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು.

Madikeri roads damaged due to rain

ಮಂಗಳೂರಿನ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಮಡಿಕೇರಿಯ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ಈ ಕಾಮಗಾರಿಯ ಜವಾಬ್ದಾರಿ ವಹಿಸಿದ್ದು ಕುಶಾಲನಗರದ ಗುತ್ತಿಗೆದಾರ ದಿನೇಶ್ ಕುಮಾರ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು.

ಭೂಮಿಪೂಜೆ ಮಾಡುವಾಗ ಇದ್ದ ಕಾಳಜಿ, ಆಸಕ್ತಿ ಬಳಿಕ ಇಲ್ಲದೇ ಹೋದ ಕಾರಣ ರಸ್ತೆ ಕಾಮಗಾರಿ ಮಂದಗತಿಯಲ್ಲೇ ಸಾಗಿತ್ತು. ಇದರಿಂದ ಆಕ್ರೋಶಗೊಂಡ ಯಡವಾರೆ ಕಾಜೂರು ಗ್ರಾಮಸ್ಥರು ಆಗಾಗ್ಗೆ ಒತ್ತಾಯ ಹೇರಿದ ಪರಿಣಾಮ ವಿಳಂಬವಾಗಿ ಕೊನೆಗೂ ಮಾರ್ಚ್ ವೇಳೆಗೆ ಅರ್ಧಂಬರ್ಧ ಪೂರ್ಣಗೊಳಿಸಲಾಯಿತು. ಆದರೆ ಇನ್ನೂ 1 ಕಿ.ಮೀ. ರಸ್ತೆ ಕಾಮಗಾರಿ ಬಾಕಿಯಿದೆ.

ಈ ನಡುವೆ ಇದೀಗ ನಡೆದ ರಸ್ತೆ ಕಾಮಗಾರಿ ಸಂಪೂರ್ಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಜ್ಜಳ್ಳಿ ಯಡವಾರೆ ಗ್ರಾಮಸ್ಥರು ಹೇಳುತ್ತಾ ಬಂದಿದ್ದರಾದರೂ ಮೇಲ್ನೋಟಕ್ಕೆ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿದಂತೆ ತಿಪ್ಪೆ ಸಾರಿಸಲಾಗಿತ್ತು. ಆದರೆ ಕಾಮಗಾರಿ ನಡೆದ ಮೂರೇ ತಿಂಗಳಿಗೆ ಮಳೆಗಾಲ ಆರಂಭವಾಗಿದ್ದು, ಸುರಿದ ಅಲ್ಪ ಮಳೆಗೆ ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಬಂದು ಮಳೆಯೊಂದಿಗೆ ಕೊಚ್ಚಿಹೋಗಿದೆ. ಇದರಿಂದಾಗಿ ವಾಹನಗಳು ಸಾಗುವುದಿರಲಿ ಮಕ್ಕಳು, ಸಾರ್ವಜನಿಕರು ನಡೆದುಕೊಂಡು ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗೆನೋಡಿದರೆ ಬಹಳ ವರ್ಷದಿಂದ ಐಗೂರು ಕಾಜೂರು ಸಜ್ಜಳ್ಳಿಗಾಗಿ ಯಡವನಾಡಿಗೆ ತೆರಳುವ ರಸ್ತೆ ಹದಗೆಟ್ಟು ಹೋಗಿತ್ತು. ಜನರು ನಡೆದಾಡಲು ವಾಹನ ಸಂಚರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ರಸ್ತೆ ಅಭಿವೃದ್ಧಿಯಾಗುತ್ತದೆ ನಾವಿನ್ನು ನೆಮ್ಮದಿಯಾಗಿ ಓಡಾಡಬಹುದೆಂದು ನಂಬಿಕೊಂಡಿದ್ದ ಜನ ರಸ್ತೆ ತಲುಪಿರುವ ದುಸ್ಥಿತಿ ನೋಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಸಂಬಂಧಿಸಿದವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After continuous rain in Madikeri the roads in the district damaged. The damaged roads show government's improper works in the district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X