ಮಡಿಕೇರಿ: ಭಾರಿ ಮಳೆ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು
ಮಡಿಕೇರಿ, ಸೆಪ್ಟೆಂಬರ್ 10 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬೆಟ್ಟದಲ್ಲಿ ಬಿರುಕು ಬಿಟ್ಟ ಸ್ಥಳದೊಳಗೆ ನೀರು ಹೋಗದಂತೆ ತಡೆಯಲಾಗುತ್ತಿದೆ.
ಭಾರತೀಯ ಸರ್ವೇಕ್ಷಣಾ ಇಲಾಖಾ ಅಧಿಕಾರಿಗಳ ತಂಡ ಬ್ರಹ್ಮಗಿರಿ ಬೆಟ್ಟಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ಬಿರುಕು ಕಾಣಿಸಿಕೊಂಡ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ತಂಡ ವರದಿ ನೀಡಿದೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ, ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು. ರಸ್ತೆಯಿಂದ 200 ಮೀಟರ್ ಎತ್ತರದಲ್ಲಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಳಭಾಗದಲ್ಲಿರುವ ಅಂಗಡಿಗಳ ಮಾಲೀಕರಿಗೆ ತಾತ್ಕಾಲಿಕವಾಗಿ ಅಂಗಡಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ.
ಬೆಟ್ಟದ ಕೆಳಭಾಗದಲ್ಲಿರುವ ಮನೆಗಳ ಮಾಲೀಕರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮನೆಗಳನ್ನು ಖಾಲಿ ಮಾಡಲು ಗ್ರಾಮ ಪಂಚಾಯತಿ ನೋಟಿಸ್ ನೀಡಿದೆ. ಇದೇ ಪ್ರದೇಶದ ಇನ್ನೊಂದು ಭಾಗದಲ್ಲಿ ಜಾರಿರುವ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ.

ಪ್ಲಾಸ್ಟಿಕ್ ಹೊದಿಕೆ ಮೇಲೆ ಮಣ್ಣು
ಭೂ ಸರ್ವೇಕ್ಷಣಾ ಇಲಾಖೆಯ ಸಲಹೆಯಂತೆ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಬಿಟ್ಟ ಸ್ಥಳದೊಳಗೆ ನೀರು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸಿ ಮಣ್ಣು ಮುಚ್ಚಲಾಗುತ್ತಿದೆ.

ಅರ್ಚಕರ ಮನೆಗಳಿವೆ
ಬ್ರಹ್ಮಗಿರಿ ಬೆಟ್ಟದ ತಳಭಾಗದಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ಅರ್ಚಕರ ಮನೆಗಳಿವೆ. ಒಟ್ಟು ನಾಲ್ಕು ಮನೆಗಳಿದ್ದು 15ಕ್ಕೂ ಅಧಿಕ ಜನರಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಅವರು ಬೇರೆ ಕಡೆಗೆ ತೆರಳುತ್ತಿದ್ದಾರೆ.

ನೀರು ಇಳಿಮುಖ
ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಯುತ್ತಿದೆ. ಜಿಲ್ಲಾಡಳಿತದ ಜನರಿಗೆ ಯಾವುದೇ ಮುನ್ಸೂಚನೆಯನ್ನು ಎರಡು ದಿನಗಳ ಕಾಲ ನೀಡಿಲ್ಲ.

ಐವರು ಮೃತಪಟ್ಟಿದ್ದರು
ಆಗಸ್ಟ್ ತಿಂಗಳಿನಲ್ಲಿ ಭಾಗಮಂಡಲ ವ್ಯಾಪ್ತಿಯ ಕೋರಂಗಾಲದಲ್ಲಿ ಭೂ ಕುಸಿತ ಉಂಟಾಗಿ ಐವರು ಮೃತಪಟ್ಟಿದ್ದರು. ಈ ದುರ್ಘಟನೆ ಜನರ ಮನಸ್ಸಿನಲ್ಲಿರುವಾಗಲೇ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ.












Click it and Unblock the Notifications