ರಮೇಶ್ ಜಾರಕಿಹೊಳಿ ಮೇಲಿರುವುದು ಅತ್ಯಾಚಾರ ಆರೋಪ: ಪೊನ್ನಣ್ಣ
ಮಡಿಕೇರಿ, ಮಾರ್ಚ್ 26: "ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಇರುವ ಆರೋಪ ಯಾವುದೋ ಸಣ್ಣಪುಟ್ಟ ಆರೋಪವಲ್ಲ, ಅದು ಒಂದು ಯುವತಿ ಮೇಲಿನ ಅತ್ಯಾಚಾರದ ಆರೋಪ. ಇದನ್ನು ಸರಿಯಾದ ರೀತಿಯಲ್ಲಿ ವಿಚಾರಣೆಗೆ ಒಳಪಡಿಸುವಲ್ಲಿ ಸರಕಾರ ಎಡವಿದೆ ಎಂದು ಕೆಪಿಸಿಸಿ ವಕ್ತಾರ ಎ.ಎಸ್ ಪೊನ್ನಣ್ಣ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಆರ್.ಟಿ.ಐ ಘಟಕದ ಮುಖ್ಯಸ್ಥರೂ ಆದ ಎ.ಎಸ್ ಪೊನ್ನಣ್ಣ ಮಾತನಾಡಿ, "ವಿಷಯ ಇರುವುದು ಮೂರು ಸಿಡಿಗಳ ಬಗ್ಗೆ. ಮೊದಲನೇ ಸಿಡಿ ಬಗ್ಗೆ ಜಾರಕಿಹೊಳಿ ನಾಲ್ಕು ವಾಕ್ಯಗಳ ಒಂದು ದೂರನ್ನು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದಾರೆ. ನನ್ನ ತೇಜೋವಧೆ ಮಾಡಿದವರ ಷಡ್ಯಂತ್ರದ ತನಿಖೆ ನಡೆಸಬೇಕು ಎಂದು ಅದರಲ್ಲಿ ಕೋರಿದ್ದಾರೆ. ತೇಜೋವಧೆ, ಷಡ್ಯಂತ್ರ ಅನ್ನೋದು ಪೊಲೀಸ್ ತನಿಖೆ ಮಾಡುವ ವಿಷಯವೇ ಅಲ್ಲ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರ ಕ್ರಮ ಕಾನೂನಿಗೆ ವಿರುದ್ಧವಾದುದು' ಎಂದು ತಿಳಿಸಿದರು.
"ಯುವತಿ ಬಿಡುಗಡೆ ಮಾಡಿದ ಎರಡು ಹಾಗೂ ಮೂರನೇ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಪೊನ್ನಣ್ಣ, "ಅದರಲ್ಲಿ ಆಕೆ ನೇರವಾಗಿ ರಮೇಶ್ ಜಾರಕಿಹೊಳಿ ಬಳಿ ತಾನು ಕೆಲಸ ಕೇಳಲು ಹೋದಾಗ, ತನ್ನನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಆರೋಪಿಸಿದ್ದಾಳೆ. ಇದು ನೇರವಾಗಿ ಅತ್ಯಾಚಾರದ ಆರೋಪವಾಗಿದೆ. ಆದರೂ ಅದರ ಮೇಲೆ ಸರಕಾರ ಕ್ರಮ ಕೈಗೊಂಡಿಲ್ಲ' ಎಂದು ಟೀಕಿಸಿದರು.

"ನಿನ್ನೆ (ಮಾ.25) ಯುವತಿಯ 2ನೇ ಸಿಡಿಯಲ್ಲಿ ತನಗೆ ಪ್ರಾಣ ಭಯ ಇರುವುದಾಗಿ ಮತ್ತು ತನಗೆ ರಕ್ಷಣೆ ದೊರೆತರೆ ತಾನೇ ಖುದ್ದಾಗಿ ದೂರು ಕೊಡಲು ಸಿದ್ಧ ಎಂದು ಹೇಳಿದ್ದಾಳೆ. ಆದರೆ, ಅವಳನ್ನು ಪತ್ತೆ ಹಚ್ಚುವ ಹಾಗೂ ರಕ್ಷಣೆ ಒದಗಿಸುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ' ಎಂದು ಪೊನ್ನಣ್ಣ ಆರೋಪಿಸಿದರು.
"ಜಾರಕಿಹೊಳಿಯವರ ದೂರಿನ ಮೇಲೆ ತಪ್ಪು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ದಿಕ್ಕು ತಪ್ಪಿಸುವ ಎಸ್ಐಟಿ ಸ್ಥಾಪಿಸಲಾಗಿದೆ. ಆದರೆ ಯುವತಿ ಹೇಳಿದ ಅತ್ಯಾಚಾರ ಆರೋಪದ ಗುರುತರ ದೂರನ್ನು ಮಾತ್ರ ದಾಖಲಿಸಿಕೊಂಡಿಲ್ಲ" ಎಂದು ಪೊನ್ನಣ್ಣ ಆಶ್ಚರ್ಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ವಿಧಾನಸಭೆ ಒಳಗೆ ಮಾತ್ರವಲ್ಲದೆ ಹೊರಗೆ ಕೂಡಾ ಈ ವಿಷಯದ ಬಗ್ಗೆ ಹೋರಾಟ ನಡೆಸುತ್ತಿದೆ ಎಂದು ಕೊಡಗಿನ ಪೊನ್ನಂಪೇಟೆಯಲ್ಲಿ ಪೊನ್ನಣ್ಣ ಹೇಳಿದರು.












Click it and Unblock the Notifications