"ರಾಜಕೀಯ ಭೇದ ಮರೆತು ಎಲ್ಲರೂ ಕೊಡಗಿನ ಹಾನಿಗೆ ಶಾಶ್ವತ ಪರಿಹಾರ ರೂಪಿಸಬೇಕು''
ಮಡಿಕೇರಿ, ಆಗಸ್ಟ್ 09: ರಾಜ್ಯಕ್ಕೆ ಕಿರೀಟದಂತಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ, ರಾಜಕೀಯ ಭೇದ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತವಾದ ಪರಿಹಾರ ಕ್ರಮಗಳ ಯೋಜನೆಯನ್ನು ಸರ್ಕಾರದ ಮೂಲಕ ಜಾರಿಗೊಳಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ, ಜೀವನದಿ ಕಾವೇರಿಯ ತವರು, ಕರ್ನಾಟಕ ರಾಜ್ಯಕ್ಕೆ ವಿಲೀನಗೊಂಡ ಅಂದಿನ ಸಂದರ್ಭದಲ್ಲಿಯೇ 10 ಲಕ್ಷ ರೂ. ತೆರಿಗೆ ನೀಡಿದ ಕೊಡಗಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ. ನಾಡಿಗೆ ಮಳೆ ಅಗತ್ಯವಾಗಿದೆ, ಆದರೆ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲೇಬೇಕಾಗಿದೆ. ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.
ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಭರವಸೆ ನೀಡಿದ್ದ ಪರಿಹಾರ ಇನ್ನೂ ನೀಡಿಲ್ಲ. ಶಾಸಕರು, ಸಂಸದರಿಗೆ ಈ ಬಗ್ಗೆ ಪ್ರಶ್ನಿಸಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಯಿದೆ. ರಾಜ್ಯದಲ್ಲಿ ಕೊರೊನಾ ಮತ್ತು ಮಳೆ ಹಾನಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಿವಕುಮಾರ್ ಆರೋಪಿಸಿದರು.

ಮಳೆ ಹಾನಿ ಪರಿಸ್ಥಿತಿ ನಿಭಾಯಿಸುವಲ್ಲಿ ಕೊಡಗಿನ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಅಥವಾ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಎಂಬ ಬಗ್ಗೆ ಪರಿಶೀಲಿಸುವುದಾಗಿ ಡಿ.ಕೆ ಶಿವಕುಮಾರ್ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿದ್ದರು.












Click it and Unblock the Notifications