ಕೊಡಗು ಕಾಂಗ್ರೆಸ್‍ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಮಡಿಕೇರಿ, ನವೆಂಬರ್. 16 : ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಕಾಂಗ್ರೆಸ್‍ ನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಇದೀಗ ಪಕ್ಷದ ಸಾರಥ್ಯವಹಿಸಿ ನಡೆಯುವ ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಕೊಡವ ಮತ್ತು ಕೊಡವೇತರರ ನಡುವೆ ಶೀತಲ ಸಮರ ಆರಂಭವಾಗಿದ್ದು. ಕೊಡವ ಸಮುದಾಯಕ್ಕೆ ಸೇರಿದ ಹೆಚ್ಚಿನ ನಾಯಕರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಬಾರಿ ಕೊಡವೇತರರಿಗೆ ಅವಕಾಶ ನೀಡಿ ಎಂಬ ಕೂಗು ಕೇಳಿ ಬಂದಿದೆಯಲ್ಲದೆ, ಒಂದಷ್ಟು ಮಂದಿ ಒಟ್ಟಾಗಿ ಸಭೆ ಸೇರಿ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಿ ಎಂಬ ಅಹವಾಲನ್ನು ಕೆಪಿಸಿಸಿ ಅಧ್ಯಕ್ಷರ ಮುಂದೆ ಇಡಲು ತಯಾರಿ ನಡೆಸಿದ್ದಾರೆ.[ಕೊಡವ ಸಮಾಜ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಬಾರದು: ಎಕೆ ಸುಬ್ಬಯ್ಯ]

Kodava and non Kodava's aspirants for Kodagu congress district president

ಹಂಗಾಮಿ ಅಧ್ಯಕ್ಷರಾಗಿ ಟಿ.ಪಿ.ರಮೇಶ್ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರಕಿರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುವ ಒಬ್ಬರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ.

ಹೀಗಾಗಿಯೇ ಪೈಪೋಟಿ ಪಕ್ಷದಲ್ಲಿ ಆರಂಭವಾಗಿದ್ದು, ಯಾರಿಗೆ ಸಾರಥ್ಯವನ್ನು ವಹಿಸುವುದು ಎಂಬ ವಿಚಾರ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಉಸ್ತುವಾರಿ ಸಚಿವರನ್ನು ಕಾಡತೊಡಗಿದೆ.

ಆಕಾಂಕ್ಷಿಗಳ ದೊಡ್ಡ ದಂಡೇ ತಮ್ಮ ತಮ್ಮ ನಾಯಕರ ಮೂಲಕ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ. ಒಂದು ಮೂಲಗಳ ಪ್ರಕಾರ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಯುವಕರಿಗೆ ಸಾರಥ್ಯ ವಹಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ ಹೀಗೆ ಮಾಡಿದರೆ ಪಕ್ಷಕ್ಕಾಗಿ ಮಣ್ಣು ಹೊತ್ತಿರುವ ಹಿರಿಯ ನಾಯಕರ ಪಾಡೇನು? ಅವರು ಅಸಮಾಧಾನಗೊಳ್ಳುವ ಸಾಧ್ಯತೆ ಹೆಚ್ಚಿದೆ ಇದು ಚುನಾವಣೆ ಸಂದರ್ಭ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.

ಕಳೆದೊಂದು ದಶಕದಿಂದ ಕೊಡಗಿನಲ್ಲಿ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ. ಬಿಜೆಪಿಯನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್‍ ನ್ನು ಗೆಲ್ಲಿಸುವ ನಾಯಕತ್ವದ ಗುಣ ಹೊಂದಿರುವ ನಾಯಕರ ಅಗತ್ಯತೆ ಕಾಂಗ್ರೆಸ್‍ ಗೆ ಇದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಬೆಂಬಲಿಸುವ ನಾಯಕನ ತಲಾಸೆಯಲ್ಲಿ ರಾಜ್ಯದ ನಾಯಕರು ತಲೆಕೆಡಿಸಿಕೊಂಡಿದ್ದಾರೆ.

ಕೊಡವ ಜನಾಂಗದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಹಲವಾರು ಅವಕಾಶಗಳು ದೊರೆತಿರುವುದರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಕೊಡವೇತರರಿಗೆ ನೀಡಿ. ಕಾಂಗ್ರೆಸ್ ಪಕ್ಷ ಕೊಡಗು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಸುಮಾರು 22 ಮಂದಿ ಅಧ್ಯಕ್ಷರಾಗಿದ್ದು.

ಇವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದಂತೆ ಅಧ್ಯಕ್ಷರಾದವರು ಬಹುತೇಕರು ಕೊಡವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಎಲ್ಲಾ ಜನಾಂಗದವರು ಒಗ್ಗೂಡಿ ಶ್ರಮಿಸುತ್ತಿದ್ದು, ಎಲ್ಲಾ ಜನಾಂಗದಲ್ಲೂ ನಾಯಕತ್ವ ಹೊಂದಿರುವ ಪ್ರಮುಖ ಕಾಂಗ್ರೆಸ್ಸಿಗರು ಇದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಎಲ್ಲ ಅರ್ಹತೆಗಳಿದ್ದರೂ ವಂಚಿತರಾಗುತ್ತಾ ಬರುತ್ತಿದ್ದಾರೆ. ಇದಕ್ಕೆ ಒಂದು ರೀತಿಯಲ್ಲಿ ಪಕ್ಷದ ವರಿಷ್ಠರ ಕಡೆಗಣನೆಯೂ ಕಾರಣವಾಗಿದೆ.

ಪಕ್ಷದ ವರಿಷ್ಠರು ಅರ್ಹರನ್ನು ಆಯ್ಕೆ ಮಾಡುವಾಗ ಜಿಲ್ಲಾ ಕಾಂಗ್ರೆಸ್‍ ಪದಾಧಿಕಾರಿಗಳ ಮತ್ತು ನಾಯಕರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು.

ಜಾತ್ಯಾತೀತ ನಿಲುವಿನ ಕಾಂಗ್ರೆಸ್ ಪಕ್ಷದ ತತ್ವ ಮತ್ತು ನೀತಿ ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಹಾಗೂ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರನ್ನು ಏಕವಾಹಿನಿಯಲ್ಲಿ ಕೊಂಡೊಯ್ಯುವ ಕೊಡವೇತರ ಜನಾಂಗದ ಒಬ್ಬರಿಗೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಡಬೇಕೆಂದು ಸಭೆ ನಿರ್ಣಯ ಕೈಗೊಂಡಿದೆ ಎಂದು ಹಿರಿಯ ಮುಖಂಡ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.

ಸಧ್ಯದ ಮಟ್ಟಿಗೆ ಇದು ರಾಜ್ಯನಾಯಕರಿಗೆ ನುಂಗಲಾರದ ತುತ್ತಾಗಿದೆ. ಕೊಡವೇತರರ ಸಭೆಯಲ್ಲಿ ಪಾಲ್ಗೊಂಡವರು ಘಟಾನುಘಟಿ ನಾಯಕರು ಮತ್ತು ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿದುಕೊಂಡು ಬಂದ ನಾಯಕರೇ ಆಗಿದ್ದಾರೆ.

ಈ ನಾಯಕರ ಮಾತನ್ನು ಕಡೆಗಣಿಸಿದರೆ ಕಾಂಗ್ರೆಸ್‍ ಗೆ ಉಳಿಗಾಲವಿಲ್ಲ. ಹಾಗೆಂದು ಕೊಡವ ಸಮುದಾಯವನ್ನು ಬದಿಗೊತ್ತಿದರೂ ತೊಂದರೆ ತಪ್ಪಿದಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dispute in Kodagu congress, Kodava and non Kodava's Congress leaders lobbying for the post of Kodagu congress district president.
Please Wait while comments are loading...