ಕೊಡಗಿನ ನಾಲ್ಕುನಾಡು ಅರಮನೆ ಕಾಮಗಾರಿಗೇಕೆ ಅಪಸ್ವರ?
ಮಡಿಕೇರಿ,
ಡಿಸೆಂಬರ್ 11: ಕೊಡಗನ್ನು ಆಳಿದ ರಾಜರ ಪಳೆಯುಳಿಕೆಯಾಗಿ ಸುಮಾರು ಎರಡು ಶತಮಾನ ಕಂಡ ನಾಲ್ಕುನಾಡು ಅರಮನೆಯ ತಡೆಗೋಡೆ ಮತ್ತು ಮುಖ್ಯದ್ವಾರದ ಗೋಪುರವು ಕಳೆದ ವರ್ಷದ ಗಾಳಿ, ಮಳೆಯ ಹೊಡೆತಕ್ಕೆ ಸಿಲುಕಿ ನೆಲಕ್ಕುರುಳಿತ್ತು. id="toptextpromo"> id='are-slot-1' class='oiad oi-axt oiadv'>ಇದೀಗ
ಅದನ್ನು ದುರಸ್ತಿಗೊಳಿಸುವ ಕಾಮಗಾರಿಯು ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಗ್ರಹ ಇಲಾಖೆಯಿಂದ ಆರಂಭವಾಗಿದೆ. ಆದರೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದು, ಗುಣಮಟ್ಟದ ಕಾಮಗಾರಿಗಾಗಿ ಆಗ್ರಹಿಸುತ್ತಿದ್ದಾರೆ. ನಾಲ್ಕುನಾಡು ಅರಮನೆಯು ಮಡಿಕೇರಿಯಿಂದ ನಲವತ್ತು ಕಿ.ಮೀ.ಗಳ ದೂರದ ಕಕ್ಕಬ್ಬೆಯ ಸಮೀಪದಲ್ಲಿದ್ದು, ಪಟ್ಟಣದ ಗೌಜು ಗದ್ದಲದಿಂದ ದೂರವಾಗಿ, ಕಾಫಿ ತೋಟ, ಕಾನನಗಳ ನಡುವೆ ನೆಲೆನಿಂತಿದ್ದು, ಕೊಡಗಿನ ಪ್ರವಾಸಿ ತಾಣಗಳ ಪೈಕಿ ಇದು ಒಂದಾಗಿದೆ. id='are-slot-2' class='oiad oi-axt oiadv'>
ಎರಡು ಶತಮಾನ ಕಂಡ ಅರಮನೆ
ಬ್ರಹ್ಮಗಿರಿ ಬೆಟ್ಟಶ್ರೇಣಿಯ ತಪ್ಪಲಿನಲ್ಲಿ ಮತ್ತು ತಲಕಾವೇರಿ ಭಾಗಮಂಡಲಕ್ಕೆ ಹತ್ತಿರವಿರುವುರಿಂದ ಈ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆ ಸುರಿಯುತ್ತದೆ. ಇಲ್ಲಿನ ಮಳೆಗಾಳಿಯ ಹೊಡೆತಕ್ಕೆ ಜಗ್ಗದೆ ಈ ಅರಮನೆ ಕಳೆದ ಇನ್ನೂರ ಇಪ್ಪತ್ತೊಂಬತ್ತು ವರ್ಷಗಳಿಂದ ನಿಂತಿದೆ. ಆದರೆ ಕಳೆದ ಮೂರು ಮಳೆಗಾಲದ ಭಾರೀ ಮಳೆಯಿಂದ ಅರಮನೆಯ ತಡೆಗೋಡೆ ಕುಸಿದು ಬಿದ್ದಿತು. ಅಷ್ಟೇ ಅಲ್ಲ ಅರಮನೆಯ ಮುಂಭಾಗದಲ್ಲಿರುವ ಮುಖ್ಯದ್ವಾರ ಮತ್ತು ಗೋಪುರಕ್ಕೂ ಹಾನಿಯಾಗಿತ್ತು. ಹೀಗಾಗಿ ಇದನ್ನು ದುರಸ್ತಿಗೊಳಿಸುವ ಕಾಮಗಾರಿ ಸುಮಾರು ಇಪ್ಪತ್ತೆಂಟು ಲಕ್ಷ ರೂ. ವೆಚ್ಚದಲ್ಲಿ ಆರಂಭವಾಗಿದೆ. ಇದರ ಸುತ್ತಲಿನ ಗೋಡೆಗಳು ಆಕರ್ಷಕವಾಗಿವೆ. ಒಟ್ಟು 14 ಚಿಕ್ಕ ಕೋಣೆಗಳಿದ್ದು, ಹಿಂಭಾಗದಲ್ಲಿ ನಾಲ್ಕು ಕತ್ತಲೆ ಕೋಣೆಗಳಿವೆ. ರಾಜರ ಕಾಲದಲ್ಲಿ ತಪ್ಪಿತಸ್ಥರನ್ನು ಈ ಕೋಣೆಯಲ್ಲಿ ಬಂಧಿಸಿಡುತ್ತಿದ್ದರೆಂದು ಹೇಳಲಾಗುತ್ತಿದೆ.

ಅವೈಜ್ಞಾನಿಕ ಕಾಮಗಾರಿ ಆರೋಪ
ಈ ಕಾಮಗಾರಿ ಆರಂಭವಾದ ಬಳಿಕ ಕಾಮಗಾರಿ ಬಗೆಗೆ ಒಂದಷ್ಟು ಆರೋಪಗಳು ಕೇಳಿ ಬಂದಿವೆ. ಅದೇನೆಂದರೆ ಈಗ ನಡೆಯುತ್ತಿರುವ ಕಾಮಗಾರಿಯೇ ಅವೈಜ್ಞಾನಿಕವಾಗಿದ್ದು, ಕಾಡು ಮರದ ಬುಡದಲ್ಲಿಯೇ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದ ಮರದ ಬೇರು ತಡೆಗೋಡೆಯೊಳಗೆ ಸೇರಿದರೆ ಮತ್ತೆ ತಡೆಗೋಡೆ ಬಿರುಕು ಬಿಟ್ಟು ನೆಲಕ್ಕುರುಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮರವನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಸಲಹೆ. ಜತೆಗೆ ತಡೆಗೋಡೆ ನಿರ್ಮಿಸುತ್ತಿರುವ ಸ್ಥಳದಲ್ಲಿರುವ ಮರದ ಕೊಂಬೆಗಳು ಸಮೀಪದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಹರಡಿದ್ದು, ಒಂದು ವೇಳೆ ಕೊಂಬೆ ಮುರಿದು ಬಿದ್ದರೆ ಶಾಲೆಯ ಛಾವಣಿಗೆ ಹಾನಿಯಾಗಲಿದೆ. ಇದಲ್ಲದೆ, ಅರಮನೆಯ ಹಿಂಭಾಗದಲ್ಲಿ ಒಣಗಿದ ಮರವಿದ್ದು, ಅದನ್ನು ತೆರವುಗೊಳಿಸಿ ಬಳಿಕ ತಡೆಗೋಡೆ ನಿರ್ಮಿಸಿ. ಇಲ್ಲದೆ ಹೋದರೆ ಆ ಮರವೇನಾದರೂ ಮುರಿದು ಬಿದ್ದರೆ, ಮತ್ತೆ ತಡೆಗೋಡೆಗೆ ಹಾಗೂ ಅರಮನೆಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬುದಾಗಿ ಸ್ಥಳೀಯರ ವಾದ.

ಪ್ರವಾಸಿಗರಿಗೆ ನೆಚ್ಚಿನ ತಾಣವಾದ ಅರಮನೆ
ಇನ್ನು ಈಗ ನಡೆಯುತ್ತಿರುವ ಕಾಮಗಾರಿ ಕೂಡ ಕಳಪೆಯಿಂದ ಕೂಡಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಕೂಡ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ನಾಲ್ಕುನಾಡು ಅರಮನೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಿಸರ್ಗದ ಮಡಿಲಲ್ಲಿರುವ ಈ ಅರಮನೆ ಬಹುತೇಕ ಪ್ರವಾಸಿಗರಿಗೆ ನೆಚ್ಚಿನ ತಾಣ ಎಂದರೂ ತಪ್ಪಾಗಲಾರದು. ಇತರೆ ಕಡೆಗಳಲ್ಲಿರುವ ಅರಮನೆಗೆ ಹೋಲಿಸಿದರೆ ಇದು ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಹೀಗಾಗಿಯೇ ಇದು ಆಕರ್ಷಿಸುತ್ತದೆ. ಕೊಡಗಿನ ಅತ್ಯಂತ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಶ್ರೇಣಿಗಳ ನಡುವೆ ಯುವಕಪಾಡಿ ಗ್ರಾಮದ ಎತ್ತರವಾದ ಗುಡ್ಡದ ಮೇಲೆ ಈ ಅರಮನೆ ನಿರ್ಮಾಣವಾಗಿದೆ.

ದೊಡ್ಡವೀರರಾಜೇಂದ್ರ ನಿರ್ಮಿಸಿದ ಅರಮನೆ
1791-92ರಲ್ಲಿ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ರಾಜ ದೊಡ್ಡವೀರರಾಜೇಂದ್ರ ಟಿಪ್ಪು ಸುಲ್ತಾನನ ಬಂಧನದಿಂದ ತಪ್ಪಿಸಿಕೊಂಡು ಬಂದು ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ನಾಲ್ಕುನಾಡು ಅರಮನೆಯನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ. ದೊಡ್ಡ ವೀರರಾಜೇಂದ್ರನಿಂದ ನಿರ್ಮಿಸಿದಾಗ ಈ ಅರಮನೆಯ ಛಾವಣಿ ಹುಲ್ಲಿನ ಹೊದಿಕೆಯಿಂದ ಕೂಡಿತ್ತು. ಆ ನಂತರ ಬ್ರಿಟೀಷರ ಕಾಲದಲ್ಲಿ ಅದಕ್ಕೆ ಹೆಂಚಿನ ಹೊದಿಕೆಯನ್ನು ಹಾಕಲಾಯಿತು. ಈ ಅರಮನೆಗೆ ಎರಡು ಪ್ರವೇಶದ್ವಾರವಿದ್ದು, ಎರಡು ಅಂತಸ್ತುಗಳನ್ನು ಹೊಂದಿದೆ. ಮೇಲಿನ ಅಂತಸ್ತಿನಲ್ಲಿ ಸುಂದರ ಕೆತ್ತನೆಗಳಿವೆ. ಇಲ್ಲಿ ಚಿಕ್ಕ ಹಾಗೂ ಚೊಕ್ಕದಾದ ವಿನ್ಯಾಸಗಳಿಂದ ಕೂಡಿದ ಹಲವು ಕೋಣೆಗಳಿವೆ. ಸುಂದರ ವರ್ಣ ಲೇಪನವನ್ನು ಹೊಂದಿರುವ ಛಾವಣಿ ಕೂಡ ಮರದಿಂದಲೇ ನಿರ್ಮಾಣವಾಗಿದೆ.

ಕಣ್ಮನ ಸೆಳೆಯುವ ಕಲಾ ಕೆತ್ತನೆ
ಅರಮನೆಯ ಛಾವಣಿಯು ಷಟ್ಕೋನಾಕಾರದಲ್ಲಿದ್ದು, ಹನ್ನೆರಡು ಬೃಹತ್ ಕಂಬಗಳ ಮೇಲೆ ನಿಂತಿದೆ. ಉಬ್ಬು ಶಿಲ್ಪಗಳು ಕಂಬದ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕಿಟಿಕಿ ಹಾಗೂ ಬಾಗಿಲುಗಳು ವಿಶಿಷ್ಟ ಕೆತ್ತನೆಗಳಿಂದ ಕೂಡಿದ್ದು, ಆ ಕಾಲದ ಕಲಾನೈಪುಣ್ಯತೆಗೆ ಹಿಡಿದ ಕೈಗನ್ನಡಿ ಇದಾಗಿದೆ. ಅರಮನೆಯ ಮೊದಲ ಹಜಾರದಲ್ಲಿ ಕಾಣಸಿಗುವ ಕಲಾ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜವೈಭವಗಳನ್ನು ಸಾರುವ ಚಿತ್ರಗಳು ಅಲ್ಲಿವೆ. ಅಂಬಾರಿಯಲ್ಲಿ ಕುಳಿತ ರಾಜ, ಆತನ ಹಿಂದೆ ಹಾಗೂ ಮುಂದೆ ವಾದ್ಯವೃಂದದೊಂದಿಗೆ ಸಾಗುವ ಸೈನ್ಯದ ದೃಶ್ಯಗಳು ಕಂಡು ಬರುತ್ತವೆ. ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿರುವುದು ಈ ಅರಮನೆಯ ವಿಶೇಷತೆಯಾಗಿದೆ.

ಗಮನ ಸೆಳೆಯುವ ವಿವಾಹ ಮಂಟಪ
ಇನ್ನು ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಕಿರು ಮಂಟಪವಿದ್ದು, ಇದಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ. ಮಂಟಪದ ಮೇಲ್ಭಾಗದಲ್ಲಿ ನಾಲ್ಕು ದಿಕ್ಕಿಗೂ ಮಲಗಿರುವ ಬಸವನ ಮೂರ್ತಿಯಿದೆ. ಇನ್ನು ಈ ಕಿರುಮಂಟಪವನ್ನು 'ವಿವಾಹಮಂಟಪ' ಎಂದು ಕೂಡ ಕರೆಯಲಾಗುತ್ತದೆ. ಈ ಮಂಟಪದಲ್ಲಿ 1796ರ ಮಾಘ ಶುದ್ಧ ಭಾನುವಾರ ರಾತ್ರಿ 19 ಗಳಿಗೆ ವೃಶ್ಚಿಕ ಲಗ್ನದಲ್ಲಿ ರಾಜಪುರೋಹಿತ ಶಿವಲಿಂಗಸ್ವಾಮಿ ಅವರ ಸಮ್ಮುಖದಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹ ನಡೆದಿತ್ತು. ಇಂತಹ ಹಲವು ವೈಶಿಷ್ಟತೆ ಹೊಂದಿರುವ ಅರಮನೆಯನ್ನು ಮುಂದಿನ ತಲೆಮಾರಿಗೂ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ.












Click it and Unblock the Notifications