ಕೊಡಗಿನ ಮುದ್ದಂಡ ಹಾಕಿ ಉತ್ಸವದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
ಮಡಿಕೇರಿ, ಮಾರ್ಚ್ 24: ಕೊಡಗಿನಲ್ಲಿ ಕಾಫಿ, ಕರಿಮೆಣಸು ಕೊಯ್ಲು ಮುಗಿದಿದೆ..ಜೊತೆಗೆ ವರುಣ ಕರುಣೆ ತೋರಿ ಅಲ್ಲಲ್ಲಿ ಮಳೆ ಸುರಿಸುವ ಮೂಲಕ ತಂಪಾಗಿಸಿದ್ದಾನೆ. ಇದೆಲ್ಲದರ ನಡುವೆ ಜಿಲ್ಲೆಯಾದ್ಯಂತ ಅಲ್ಲಲ್ಲಿ, ಸಂಘ, ಸಂಸ್ಥೆ, ಕುಟುಂಬ, ಸಮುದಾಯ ಹೀಗೆ ಹಲವು ರೀತಿಯ ಕ್ರೀಡಾಕೂಟಗಳು ನಡೆಯಲಿದ್ದು ಮುಂದಿನ ಎರಡು ತಿಂಗಳ ಕಾಲ ಇಡೀ ಜಿಲ್ಲೆ ಕ್ರೀಡಾಮಯವಾಗಲಿದೆ.
ಜಿಲ್ಲೆಯಾದ್ಯಂತ ಆಟೋಟ, ಕ್ರಿಕೆಟ್, ಹಾಕಿ ಹೀಗೆ ಹಲವು ರೀತಿಯ ಪಂದ್ಯಾವಳಿಗಳು ನಡೆಯಲಿದ್ದು ಅವುಗಳೆಲ್ಲದರ ನಡುವೆ ಕಳಸವಿಟ್ಟಂತೆ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಿಂತ ಕಡಿಮೆ ಇಲ್ಲದಂತೆ ನಡೆಯುತ್ತದೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಈ ಬಾರಿ ದಾಖಲೆಯ 396 ತಂಡಗಳು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಈ ಬಾರಿ 25ನೇ ವರ್ಷದ ಪಂದ್ಯಾವಳಿ ನಡೆಯುತ್ತಿದ್ದು ಪಂದ್ಯಾವಳಿಯ ಆಯೋಜನೆಯ ಜವಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು ಅವರ ಕುಟುಂಬದ ಹೆಸರಿನಲ್ಲಿ ಮುದ್ದಂಡ ಕಪ್‌ನ್ನು ನೀಡಲಾಗುತ್ತಿದೆ. ಈ ಬಾರಿ ವಿಶೇಷ ಮುತುವರ್ಜಿ ವಹಿಸಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, ದಾಖಲೆಯ ತಂಡಗಳು ಸೆಣಸಾಡಲು ಸಜ್ಜಾಗುತ್ತಿವೆ. ಹೀಗಾಗಿ 'ಮುದ್ದಂಡ ಹಾಕಿ ಉತ್ಸವ' ಹತ್ತು ಹಲವು ಭರವಸೆಗಳನ್ನು ಮೂಡಿಸಿದೆ.
ಇದು ಪಂದ್ಯಾವಳಿ ಮಾತ್ರವಲ್ಲ ವಿಶೇಷತೆಗಳ ಆಗರ
ಇನ್ನು ಮೇಲ್ನೋಟಕ್ಕೆ ಹಾಕಿ ಪಂದ್ಯಾವಳಿಯಷ್ಟೇ ಕಾಣಿಸಬಹುದಾದರೂ ಅದರ ಹಿಂದೆ ಹಲವಾರು ವಿಶೇಷತೆಗಳಿರುವುದನ್ನು ನೋಡಬಹುದಾಗಿದೆ. ಈ ಪಂದ್ಯಾವಳಿಯ ಹಿಂದೆ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ಹರಡಿ ಹರಡಿ ಹೋಗಿರುವ ಸಮುದಾಯದ ಸದಸ್ಯರು ಒಂದು ಕಡೆ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ನು ಯುವಕರು, ಯುವತಿಯರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಬಂಧ ಬೆಸೆಯಲು ಅವಕಾಶವಾಗಿದೆ.

ಕಲೆ, ಸಂಸ್ಕೃತಿ, ಪ್ರತಿಭೆಯ ಅನಾವರಣಕ್ಕೂ, ಒಗ್ಗಟ್ಟಿನ ಪ್ರದರ್ಶನಕ್ಕೂ ಪಂದ್ಯಾವಳಿ ವೇದಿಕೆಯಾಗುತ್ತಿದೆ. ಇದರಾಚೆಗೆ ರಸಪ್ರಶ್ನೆ ಸ್ಪರ್ಧೆ ಮತ್ತು ತಂದ್- ಬೆಂದ್ (ವಧು ವರರ ಅನ್ವೇಷಣೆ) ಕಾರ್ಯಕ್ರಮವನ್ನು ಪಂದ್ಯಾವಳಿ ನಡೆಯುವ ಮೈದಾನದ ಆವರಣದಲ್ಲಿ ಆಯೋಜಿಸುತ್ತಿರುವುದು ವಿಶೇಷವಾಗಿದೆ.
ಇನ್ನು ಪಂದ್ಯಾವಳಿ ಹಿನ್ನಲೆಯಲ್ಲಿ ಏ.26 ರಂದು ಮಡಿಕೇರಿಯಲ್ಲಿ ಸೈಕ್ಲೋಥಾನ್ ನಡೆಯಲಿದೆ. ಪ್ರೀ ಕ್ವಾರ್ಟರ್ ಪಂದ್ಯ ನಡೆಯುವ ದಿನದಿಂದ ಅಂತಿಮ ಪಂದ್ಯಾವಳಿವರೆಗೆ ಡಿಜೆ ಕಾರ್ಯಕ್ರಮ ಇರಲಿದೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮುಕ್ತ ಮಜಾ ರನ್ ನಡೆಯಲಿದೆ. ಅಂತಿಮ ದಿನದ ಸಮಾರಂಭದ ಸಂದರ್ಭ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಲಿದೆ.

ಪಂದ್ಯಾವಳಿಗೆ ಆಗಮಿಸುವ ತಂಡಗಳ ಮತ್ತು ವೀಕ್ಷಕರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಸುಮಾರು ಎರಡು ಸಾವಿರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಬೆಂಗಳೂರಿನ ವಂದನಾ ಟ್ರಸ್ಟ್ ಸಂಸ್ಥೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳ ನಿರ್ವಹಣೆಯನ್ನು ಮಾಡಲಿದೆ.
ಮೂವತ್ತಕ್ಕೂ ಹೆಚ್ಚು ಮಹಿಳಾ ತಂಡ ಭಾಗಿ
ಕೊಡವ ಹಾಕಿ ಉತ್ಸವ ಬೆಳ್ಳಿಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. 30ಕ್ಕೂ ತಂಡಗಳು ನೋಂದಾಯಿಸಿಕೊಂಡಿದ್ದು, ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
'ಮುದ್ದಂಡ ಕಪ್ ಹಾಕಿ ಉತ್ಸವ'ದ ಕ್ರೀಡಾಜ್ಯೋತಿ ಮಾ.25ರಂದು ಕೊಡವ ಹಾಕಿ ಹಬ್ಬದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್ ಮನೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಮತ್ತು ಕೊಡವ ಹಾಕಿ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಅವರು ಉದ್ಘಾಟಿಸಲಿದ್ದಾರೆ. 1997ರಿಂದ ಇಲ್ಲಿಯವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುತ್ತಿದೆ.
ಪಂದ್ಯ ನಡೆಸಿದ ಕುಟುಂಬಗಳ ಐನ್ ಮನೆಗೆ ಕ್ರೀಡಾಜ್ಯೋತಿ
ಮಾ.28ರಂದು ಬೆಳಿಗ್ಗೆ 9ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿ ಸಾಗಲಿದೆ. ಕ್ರೀಡಾಜ್ಯೋತಿಯು ಮಾ.25ರಂದು ಕರಡ ಪಾಂಡಂಡ, ಕಿರುಗೂರು ಚೆಪ್ಪುಡಿರ, ಅಲಮೇಂಗಡ, ಟಿ.ಶೆಟ್ಟಿಗೇರಿ- ಒಂಟಿಯಂಗಡಿ ಮಚ್ಚಮಾಡ, ಚೆಕ್ಕೇರ, ಕಳ್ಳಿಚಂಡ, ಕುಂದ ಮನೆಯಪಂಡ, ನಾಂಗಾಲ ಕುಪ್ಪಂಡಕ್ಕೆ ತೆರಳಲಿದೆ.
ಮಾ.26ರಂದು ವಿರಾಜಪೇಟೆ ಕಾವಾಡಿ ನೆಲ್ಲಮಕ್ಕಡ, ಚೆಂಬೆಬೆಳ್ಳೂರು ಈಶ್ವರ ದೇವಾಲಯ, ಮಂಡೇಪಂಡ, ಕುಕ್ಲೂರು ತಾತಂಡ, ವಿರಾಜಪೇಟೆ ಕೊಡವ ಸಮಾಜ, ಅರಮೇರಿ ಮುದ್ದಂಡ, ಐಚೆಟ್ಟಿರ, ಕಾಕೋಟುಪರಂಬು ಮಂಡೇಟಿರ, ಬಲ್ಲಚಂಡ, ಕರಡ ಕೋಡಿರ, ಬಾವಲಿ ಬಿದ್ದಂಡ, ಮಾ.27ರಂದು ಬಾವಲಿ ಮಾದಂಡ, ಕಲಿಯಂಡ, ನೆಲ್ಜಿ ಮಾಳೆಯಂಡ, ಅಪ್ಪಚೆಟ್ಟೋಳಂಡ, ನಾಪೋಕ್ಲು ಕುಲ್ಲೇಟಿರ, ಬಿದ್ದಾಟಂಡ, ಕೊಳಕೇರಿ ಕುಂಡ್ಯೋಳಂಡ, ಮಡಿಕೇರಿ ಶಾಂತೆಯಂಡ ಮತ್ತು ಮಾ.28ರಂದು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಪಂದ್ಯಾವಳಿ ನಡೆಯುವ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನವನ್ನು ತಲುಪಲಿದೆ.












Click it and Unblock the Notifications