ಕೊಡಗು ಸೈನಿಕ ಶಾಲೆ ವಿದ್ಯಾರ್ಥಿ ಸಾವು, ಶಾಲಾ ಸಿಬ್ಬಂದಿ ಮೇಲೆ ಎಫ್ಐಆರ್
ಮಡಿಕೇರಿ, ಜೂನ್ 25: ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆಯ ಸೈನಿಕ್ ಶಾಲೆಯಲ್ಲಿ ಶನಿವಾರ ಸಂಜೆ 14 ವರ್ಷದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಶಾಲೆಯ ಐವರು ಸಿಬ್ಬಂದಿಗಳು ಹಾಗೂ ಉಪ ಪ್ರಾಂಶುಪಾಲರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸೈನಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಎನ್.ಪಿ.ಚಿಂಗಪ್ಪ ಸಾವಿಗೀಡಾದ ವಿದ್ಯಾರ್ಥಿಯಾಗಿದ್ದಾನೆ. ಚಿಂಗಪ್ಪ ಶಾಲೆಯ ಹಾಕಿ ತರಬೇತುದಾರರಾಗಿರುವ ನಗಂಡ ಟಿ.ಪೂವಯ್ಯ ಅವರ ಪುತ್ರನಾಗಿದ್ದಾನೆ.
ಈ ಕುರಿತು ಹೇಳಿಕೆ ನೀಡಿರುವ ಪೂವಯ್ಯ, "ಶನಿವಾರ ಸಂಜೆ 6 ಗಂಟೆಗೆ ಶಾಲೆಯಿಂದ ಕರೆಯೊಂದು ಬಂದಿತ್ತು. ಮಧ್ಯಾಹ್ನ 2 ಗಂಟೆಯಿಂದಲೂ ಮಗ ಕಾಣುತ್ತಿಲ್ಲ ಎಂದು ತಿಳಿಸಿದ್ದರು. ರಾತ್ರಿ 7.45ಕ್ಕೆ ನನ್ನ ಮಗ ಸಾವನ್ನಪ್ಪಿದ್ದಾನೆಂದು ತಿಳಿಸಿದರು," ಎಂದಿದ್ದಾರೆ.

ಬಾಲಕ ಶಾಲೆಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಳಿಕ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ವೈದ್ಯರು ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ಈ ಸಂಬಂಧ 'ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನೂ ನೀಡದೆ ಶಾಲೆಯ ಆ್ಯಂಬುಲೆನ್ಸ್ ನಲ್ಲೇ ಆಸ್ಪತ್ರೆಗೆ ಹೆಣ ಸಾಗಿಸಿದ್ದಾರೆ' ಎಂದು ಬಾಲಕನ ಕುಟುಂಬಸ್ಥರು ದೂರಿದ್ದಾರೆ.
ಈ ಹಿಂದೆಯೇ ಮಗ ಕಂಪ್ಯೂಟರ್, ಕನ್ನಡ ಮತ್ತು ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ವಾರ್ಡನ್ ನನಗೆ ಹಿಂಸೆ ನೀಡುತ್ತಿದ್ದಾರೆಂದು ಹೇಳುತ್ತಿದ್ದ ಎಂದಿರುವ ಪೂವಯ್ಯ ಈ ಸಂಬಂಧ ಉಪ ಪ್ರಾಂಶುಪಾಲರಿಗೂ ದೂರು ನೀಡಿದ್ದರು. ಆದರೆ ಇದನ್ನು ನಿರ್ಲಕ್ಷಿಸಲಾಗಿತ್ತು ಎಂಬುದು ಪೂವಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯೋಗಲಾಯದಲ್ಲಿ ಬಳಕೆ ಮಾಡುತ್ತಿದ್ದ ವಿಷಕಾರಿ ಅಂಶವನ್ನು ಬಾಲಕ ಸೇವನೆ ಮಾಡಿರಬಹುದು ಇದರಿಂದ ಆತ ಸಾವನ್ನಪ್ಪಿರಬಹುದು ಎಂದು ಪೊಲೀಸರಿಗೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಆದರೆ ಈ ಸಾವಿಗೆ ಕಾರಣ ಏನು ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.












Click it and Unblock the Notifications