ಡಿ.12 ಗುರುವಾರ ಅರ್ಧ ದಿನ ಕೊಡಗು ಬಂದ್: ಕಾರಣ ಇಲ್ಲಿದೆ
ಮಡಿಕೇರಿ, ಡಿಸೆಂಬರ್ 10: ಫೀಲ್ಡ್ ಮಾರ್ಷಲ್ ಕೆಎಮ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ನಿಂದಿಸಿರುವ ವಿದ್ಯಾದರ್ ಎಂಬ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಕೊಡಗು ಸರ್ವ ಜನಾಂಗದ ಒಕ್ಕೂಟ ಒತ್ತಾಯಿಸಿದೆ. ಅಲ್ಲದೇ ಗುರುವಾರ ಅರ್ಧ ದಿನ ಕೊಡಗು ಬಂದ್‌ಗೆ ಕರೆ ನೀಡಿದೆ.
ಈ ಬಗ್ಗೆ ಕೊಡಗು ಸರ್ವ ಜನಾಂಗದ ಒಕ್ಕೂಟದ ಪ್ರಮುಖ ರಾಜೀವ್ ಬೋಪಯ್ಯ , ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮತ್ತು ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತೀಯ ಸಂಘರ್ಷ ಮತ್ತು ಮತೀಯ ಸಂಘರ್ಷ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡು ಬರುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆ ಕೊಡಗಿನಲ್ಲಿ ಕೇವಲ ದ್ವೇಷ ಮತ್ತು ಅಸೂಯೆಯ ವಾತಾವರಣದಲ್ಲಿ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುವ ಸಂಭವವಿದೆ.
ಕೊಡಗಿನಲ್ಲಿ ಜಾತಿ ಮತ್ತು ಮತಗಳ ನಡುವಿನ ವೈಮನಸ್ಯ ದೂರವಾಗಬೇಕು, ಕೋಮು ಸೌಹಾರ್ದತೆ ಸ್ಥಾಪನೆಯಾಗಬೇಕು. ಕೊಡಗಿನಲ್ಲಿ ಪ್ರೀತಿ, ವಾತ್ಸಲ್ಯ, ನಂಬಿಕೆ, ಸಾಮರಸ್ಯದ ಬದುಕು ಕಂಡು ಬರಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಜಾತಿ ಮತ ಧರ್ಮದವರನ್ನು ಒಂದೆಡೆ ಸೇರಿಸಿ ಕೊಡಗು ಸರ್ವ ಜನಾಂಗದ ಒಕ್ಕೂಟ ಎಂಬ ಸಂಘಟನೆಯನ್ನು ಹುಟ್ಟು ಹಾಕಲು ತೀರ್ಮಾನಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಯಾವುದೇ ಜನಾಂಗ ಯಾವುದೇ ಧರ್ಮಗಳ ವಿರುದ್ಧ ಯಾರೇ ಆದರೂ ಸಾರ್ವಜನಿಕವಾಗಿ ನಿಂದಿಸುವುದಾಗಲಿ, ಮಾಧ್ಯಮ ಹೇಳಿಕೆಗಳನ್ನು ನೀಡುವುದಾಗಲಿ, ಸಾಮಾಜಿಕ ಜಾಲತಾಣವನ್ನು ಬಳಸಿ ಶಾಂತಿ ಕದಡುವ ಪ್ರಯತ್ನವನ್ನು ಮಾಡುವುದಾಗಲಿ, ಇವುಗಳ ವಿರುದ್ಧ ಕೊಡಗು ಸರ್ವ ಜನಾಂಗದ ಒಕ್ಕೂಟ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇದಕ್ಕೆ ಒಂದು ಉತ್ತಮ ರೂಪರೇಷೆಯನ್ನು ಕಲ್ಪಿಸಿ ಕೊಡಗು ಜಿಲ್ಲೆಯಲ್ಲಿ ಈ ಸಂಘಟನೆಯನ್ನು ಬಲಿಷ್ಠ ಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಈ ಸಂಘಟನೆಯ ಮೊದಲ ಕಾರ್ಯಕ್ರಮವಾಗಿ ಇತ್ತೀಚೆಗೆ ಫೀಲ್ಡ್ ಮಾರ್ಷಲ್ ಕೆಎಮ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ನಿಂದಿಸಿರುವ ವಿದ್ಯಾದರ್ ಎಂಬ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲು 12 ರ ಡಿಸೆಂಬರ್ 2024ರಂದು ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಕೊಡಗು ಜಿಲ್ಲಾ ಬಂದ್ ಆಚರಿಸುವ ಮೂಲಕ ಜಿಲ್ಲೆಯ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ಮುಂದೆಂದೂ ಆಗಬಾರದು ಎನ್ನುವ ಸಂದೇಶವನ್ನು ಜಿಲ್ಲೆಯ ಜನತೆಯ ಮುಂದೆ ತರುವ ಕರೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದರು.
ಈ ನಮ್ಮ ಕರೆಗೆ ಜಿಲ್ಲೆಯ ವಿವಿಧ ಜಾತಿಯ ಸಂಘಟನೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ಜಿಲ್ಲಾ ಆಟೋ ಚಾಲಕರ ಸಂಘ ಮಾಜಿ ಸೈನಿಕರ ಸಂಘ ಧಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕೊಡಗು ಬಂದ್ ಸಂದರ್ಭ ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸರಕಾರಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇವೆ.
ಕೊಡಗು ಜಿಲ್ಲಾ ಬಸ್ ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ಕಾರು ಮಾಲೀಕರು ಮತ್ತು ಚಾಲಕರ ಸಂಘ, ಹೀಗೆ ಎಲ್ಲಾ ವಾಹನಗಳ ಸಂಘಟನೆಗಳನ್ನು, ಜಿಲ್ಲೆಯ ಎಲ್ಲಾ ಅಂಗಡಿ ವಹಿವಾಟು ಮಾಲೀಕರನ್ನು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ, ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರನ್ನು, ಹಾಗೂ ಸರ್ವರನ್ನು ತಾರೀಕು 12ರ ಸಾಂಕೇತಿಕ ಬಂದ್ ಬೆಂಬಲ ನೀಡುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಿಕೊಂಡರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟನೆಗಳನ್ನು ಜೊತೆಗೂಡಿ ಕೊಡಗಿನಲ್ಲಿ ಸಾಮಾಜಿಕ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೊಡಗು ಸರ್ವ ಜನಾಂಗದ ಒಕ್ಕೂಟ ಕಾರ್ಯ ನಿರ್ವಹಿಸಲಿದೆ ಎಂದು ಈ ಮೂಲಕ ಕೊಡಗಿನ ಸಮಸ್ತ ಜನರ ಗಮನಕ್ಕೆ ತರುತ್ತಿದ್ದೇವೆ ಎಂದು ಕೊಡಗು ಸರ್ವ ಜನಾಂಗದ ಒಕ್ಕೂಟದ ಪ್ರಮುಖರು ತಿಳಿಸಿದರು.












Click it and Unblock the Notifications