ಕೊಡಗು ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ; ಜನರ ಆತಂಕ ದೂರ?
ಮಡಿಕೇರಿ, ಮಾರ್ಚ್ 17: ಕೊಡಗು ಜಿಲ್ಲಾಡಳಿತ ಭವನದ ಬಳಿ ಮಂಗಳೂರು ರಸ್ತೆಯಲ್ಲಿ ನಿರ್ಮಾಣ ಮಾಡಿರುವ ತಡೆಗೋಡೆ ಸದಾ ಚರ್ಚೆಯ ವಿಚಾರ. ಜನರು, ಸಂಘ ಸಂಸ್ಥೆಗಳು ಹಲವಾರು ಬಾರಿ ಈ ತಡೆಗೋಡೆಯ ಸುರತಕ್ಷತೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ತಡೆಗೋಡೆಯಿಂದ ಜನರ ಆತಂಕ ದೂರವಾಗಿಲ್ಲ.
ಈ ಕಾಮಗಾರಿ ಆರಂಭದ ಸಂದರ್ಭದಲ್ಲಿಯೇ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿತ್ತು, ಆದರೆ ದೆಹಲಿಯಿಂದ ವಿನ್ಯಾಸಕರನ್ನು ಕರೆಸಿ ಸ್ಲ್ಯಾಬ್ ಮಾದರಿಯಲ್ಲಿ ತಡೆಗೋಡೆ ಮಾಡಿದ್ದಾರೆ. ಸ್ಲ್ಯಾಬ್ ಮಾದರಿಯ ತಡೆಗೋಡೆ ಕೊಡಗು ಜಿಲ್ಲೆಯ ಮಣ್ಣಿಗೆ ಸರಿ ಬಂದಿಲ್ಲ. ಮಳೆಯ ಹೊಡೆತಕ್ಕೆ ಸಿಲುಕಿ ಕುಸಿದು ಹೋಗಿದ್ದು, ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು.

ಸುಮಾರು 9 ಕೋಟಿ ರೂ. ವೆಚ್ಚದ ಈ ತಡೆಗೋಡೆ ಕಾಮಗಾರಿ ಮಾಡುವ ಮೊದಲು ಕೊಡಗು ಜಿಲ್ಲೆಯಲ್ಲಿನ ಮಳೆ, ಮಣ್ಣಿನ ಪರೀಕ್ಷೆಗಳನ್ನು ಮಾಡಿಲ್ಲ ಎಂಬದು ಆರೋಪವಾಗಿದೆ. ಈ ಕಾಮಗಾರಿ ಕಳೆಪೆಯಾಗಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಹ ಒತ್ತಾಯಿಸಲಾಗುತ್ತಿದೆ.
ಸಮಿತಿಯ ಸದಸ್ಯರ ಭೇಟಿ: ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿ ಸಭೆಯ ಸದಸ್ಯರು ಹಾಗೂ ಶಾಸಕ ಎಸ್. ಸುರೇಶ್ ಕುಮಾರ್, ಎ. ಮಂಜು, ಸುರೇಶ್ ಬಾಬು, ಡಾ. ಮಂತರ್ ಗೌಡ ಹಾಗೂ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ವೀಕ್ಷಿಸಿದರು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ, ಅಂದಾಜು ಸಮಿತಿಯ ಜಯಪ್ರಸಾದ್, ಸದಸ್ಯರಾದ ಭುರ್ಜಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಶಿವಕುಮಾರ್ ಇತರರು ತಡೆಗೋಡೆಯನ್ನು ವೀಕ್ಷಿಸಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಕಛೇರಿಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಹಂತದ ಇಂಜಿನಿಯರ್‌ಗಳು, ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಸಭೆ ನಡೆಸಲಾಯಿತು.
ಬಳಿಕ ಮಾತನಾಡಿದ ಎಸ್. ಸುರೇಶ್ ಕುಮಾರ್, "ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಆತಂಕ ಇದ್ದ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯು ಬೆಂಗಳೂರಿನಲ್ಲಿ ಮೂರು ಬಾರಿ ಸಭೆ ನಡೆಸಿ, ಚರ್ಚಿಸಿದೆ. ಆ ನಿಟ್ಟಿನಲ್ಲಿ ಖುದ್ದಾಗಿ ತಡೆಗೋಡೆ ಸಂಬಂಧ ಸ್ಥಳ ಪರಿಶೀಲಿಸಲು ನಿರ್ಧರಿಸಲಾಗಿತ್ತು. ಅದರಂತೆ ಸ್ಥಳ ಪರಿಶೀಲಿಸಿ ಮಾಹಿತಿ ಪಡೆಯಲಾಗಿದೆ" ಎಂದರು.
"ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ತಡೆಗೋಡೆ ಸಂಬಂಧ ಒಟ್ಟು ಯೋಜನೆ ರೂಪುರೇಷ ಬಗ್ಗೆ ಮರು ಪರಿಶೀಲಿಸಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತಡೆಗೋಡೆ ಸಂಬಂಧ ಪರ್ಯಾಯ ಅಭಿವೃದ್ಧಿ ಬಗ್ಗೆ ಯೋಚಿಸಲಾಗಿದ್ದು, ಬೆಂಚು ಮಾದರಿಯಲ್ಲಿ ತಡೆಗೋಡೆ ನಿರ್ಮಿಸುವ ಸಂಬಂಧ 15 ದಿನದಲ್ಲಿ ಡಿಪಿಆರ್ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಿಗೆ ಸೂಚಿಸಲಾಗಿದೆ" ಎಂದು ಹೇಳಿದರು.
ತಾಂತ್ರಿಕ ತಜ್ಞರು ನೀಡುವ ವರದಿ ಆಧರಿಸಿ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಜಿಲ್ಲಾಡಳಿತ ಭವನಕ್ಕೆ ತೆರಳಲು ಉದ್ದೇಶಿಸಲಾಗಿರುವ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ತಡೆಗೋಡೆ ಸಂಬಂಧ ಕೆಲಸಗಳು ಆದ ನಂತರ ಮುಂದಿನ ಹಂತದಲ್ಲಿ ರಸ್ತೆ ನಿರ್ಮಿಸಲು ಸೂಚನೆ ನೀಡಲಾಗಿದೆ.
ಮಡಿಕೇರಿ ಶಾಸಕ ಹಾಗೂ ಸಮಿತಿ ಸದಸ್ಯ ಡಾ. ಮಂತರ್ ಗೌಡ ಮಾತನಾಡಿ, "ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಹಲವು ಬಾರಿ ಸರ್ಕಾರದ ಗಮನಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ವಿಧಾನಸಭೆಯ ಅರ್ಜಿ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಸಮಿತಿ ನಿರ್ಣಯಗಳು ಹಾಗೂ ತಾಂತ್ರಿಕ ತಜ್ಞರು ನೀಡುವ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ" ಎಂದರು.
"ಮುಂದಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗುವುದು. ತಡೆಗೋಡೆ ಸಂಬಂಧ ಸರ್ಕಾರದ ಗಮನ ಸೆಳೆದು ಶೀಘ್ರ ಪೂರ್ಣಗೊಳಿಸಲಾಗುವುದು" ಎಂದು ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.











Click it and Unblock the Notifications