ಕೊಡಗು ಬಿಜೆಪಿ ನಾಯಕರಲ್ಲೂ ಭುಗಿಲೆದ್ದಿದೆ ಅಸಮಾಧಾನ
ಕೊಡಗು, ಆಗಸ್ಟ್ 21: ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವಾದ ಇಂದು ನೂತನ ಸಚಿವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸುತ್ತಿದ್ದಾರೆ. ಅಲ್ಲದೇ ಮಳೆ ಹಾನಿಯ ವರದಿಯನ್ನು ತಯಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ತಮ್ಮ ನಾಯಕರ ಅಣತಿಯಂತೆ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಸ್ಥಳಕ್ಕೆ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನಾ ಕಾರ್ಯವನ್ನು ಆರಂಭಿಸಿದ್ದಾರೆ.
ಆದರೆ ಸಚಿವ ಸುರೇಶ್ ಕುಮಾರ್ ಗೆ ಸಾಥ್ ನೀಡಬೇಕಿದ್ದ ಬಿಜೆಪಿಯ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಗೈರಾಗಿದ್ದರು. ಅಲ್ಲದೇ ಸ್ಥಳೀಯ ಎಂಎಲ್ಸಿ ಎಂ.ಪಿ. ಸುನೀಲ್ ಸುಬ್ರಮಣಿ ಸಹ ಬರದೇ ಇದ್ದದ್ದು ಅಸಮಾಧಾನ ಎದ್ದು ಕಾಣುವಂತೆ ಮಾಡಿತು.

ಮೊದಲ ಬಾರಿಗೆ ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ಕೊಡಗು ಪ್ರವೇಶಿಸಿದ ಸಚಿವರನ್ನು ಸ್ವಾಗತಿಸುವ ಗೋಜಿಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೋಗಲಿಲ್ಲ. ಸಾಮಾನ್ಯವಾಗಿ ಸಚಿವರನ್ನು ಮಡಿಕೇರಿಯ ಕೊಪ್ಪ ಗೇಟ್ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಆದರೆ ಆ ಕಾರ್ಯಕ್ರಮವೂ ನಡೆಯಲಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ, ವಿ.ಕೆ.ಲೋಕೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಮಾತ್ರ ಹಾಜರಿದ್ದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್, ಸಿಇಒ ಕೆ.ಲಕ್ಷ್ಮೀಪ್ರಿಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications