ಹಾಲೇರಿ ರಾಜರಿಂದ ಜನೋತ್ಸವದವರೆಗೆ ಮಡಿಕೇರಿ ದಸರಾ ನಡೆದು ಬಂದಿದ್ದೇಗೆ?
Madikeri Dasara 2024: ಮೈಸೂರು ದಸರಾ ಸಂಪನ್ನಗೊಳ್ಳುತ್ತಿದ್ದಂತೆಯೇ ಅತ್ತ ಕೊಡಗಿನ ಮಂಜಿನ ನಗರಿ ಮಡಿಕೇರಿಯಲ್ಲಿ ಬೆಳಕಿನ ದಸರಾ ಆರಂಭವಾಗಲಿದೆ. ಮೈಸೂರಿನ ದಸರಾದಂತೆ ಮಡಿಕೇರಿ ದಸರಾಕ್ಕೂ ತನ್ನದೇ ಆದ ಇತಿಹಾಸವಿದ್ದು, ನೂರಾರು ವರ್ಷಗಳಿಂದ ಆಚರಣೆ ನಡೆಯುತ್ತಾ ಬರುತ್ತಿದ್ದು, ಇಲ್ಲಿನ ದಸರಾ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯೊಂದಿಗೆ ಜನೋತ್ಸವವಾಗಿ ಮುನ್ನಡೆಯುತ್ತಾ ಬರುತ್ತಿರುವುದು ವಿಶೇಷವಾಗಿದೆ.
ರಾತ್ರಿಪೂರ್ತಿ ದಶಮಂಟಪಗಳ ಶೋಭಾಯಾತ್ರೆ ನಡೆದು ಕೊನೆಯಲ್ಲಿ ಬನ್ನಿಪೂಜೆಯೊಂದಿಗೆ ದಸರಾ ಸಂಪನ್ನಗೊಳ್ಳುತ್ತದೆ. ಮಡಿಕೇರಿ ದಸರಾ ಎಂದರೆ ನಮ್ಮ ಕಣ್ಣಮುಂದೆ ಹಾದು ಹೋಗುವ ದೃಶ್ಯವೇನೆಂದರೆ, ಜಗಮಗಿಸುವ ವಿದ್ಯುತ್ ಬೆಳಕಿನ ಶೋಭಾಯಾತ್ರೆಯಲ್ಲಿ ಸಾಗುವ ದಶಮಂಟಪಗಳು ಹಾಗೂ ನಾಲ್ಕು ಶಕ್ತಿದೇವತೆಯ ಕರಗಗಳಾಗಿವೆ.

ಈ ಕಾರ್ಯಕ್ರಮಗಳೇ ದಸರಾದ ಮೆರಗು ಹೆಚ್ಚಿಸಲಿವೆ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ, ದಸರಾದಲ್ಲಿ ಪಾಲ್ಗೊಳ್ಳುವ ದಶಮಂಟಪಗಳು ದಶ ದೇವಾಲಯಗಳನ್ನು ಪ್ರತಿನಿಧಿಸುತ್ತಾ ಬರುತ್ತಿದ್ದು, ಪ್ರತಿ ದೇವಾಲಯಗಳು ಸಹ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವುದು ವಿಶೇಷವಾಗಿದೆ.
ಇಲ್ಲಿನ ದಶ ದೇಗುಲಗಳ ಕಾರ್ಯಕರ್ತರು ಹಗಲಿರುಳು ಎನ್ನದೆ ಬೆವರು ಸುರಿಸಿ ಶ್ರಮಪಟ್ಟು ನಿರ್ಮಿಸಿದ ಮಂಟಪಗಳೇ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಈ ದೇವಾಲಯಗಳ ಸಮಿತಿಯ ಕಾರ್ಯಕರ್ತರ ಶ್ರಮದ ಪ್ರತಿಫಲದಿಂದ ದಸರಾ ದಿನದಂದು ಝಗಝಗಿಸುವ ಬೆಳಕಿನ ನಗರದಲ್ಲಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ. ಇನ್ನು ದಸರಾ ಆರಂಭವಾಗಲು ಮುರ್ನಾಲ್ಕು ತಿಂಗಳ ಮುಂಚೆಯೇ ದೇವಾಲಯದ ಮಂಟಪಗಳ ಸಮಿತಿಯ ಸದಸ್ಯರು ಮಂಟಪವನ್ನು ಅದ್ಧೂರಿಯಾಗಿ ತಯಾರು ಮಾಡುವ ಸಿದ್ಧತೆಯಲ್ಲಿ ತೊಡಗುತ್ತಾರೆ.
ಶೋಭಾಯಾತ್ರೆಗೆ ಅದ್ಧೂರಿ ಮಂಟಪಗಳ ನಿರ್ಮಾಣ: ಜಿಲ್ಲೆ ಸೇರಿದಂತೆ ಹೊರ ಊರುಗಳಿಗೆ ತೆರಳಿ ಜನರಿಂದ ತನು ಮನ ಧನದ ಸಹಾಯ ಪಡೆಯುತ್ತಾರೆ. ಬಳಿಕ ಪೌರಾಣಿಕ ಕಥಾ ಹಂದರದಲ್ಲಿ ದೇವರ ಹಾಗೂ ದಾನವರ ಕಲಾಕೃತಿಗಳನ್ನು ಸಂಬಂಧಿಸಿದ ನುರಿತ ಕಲಾವಿದರಿಂದ ತಯಾರು ಮಾಡುತ್ತಾರೆ. ನಂತರ ಅದಕ್ಕೆ ಬೇಕಾದ ಚಲನವಲನಕ್ಕೋಸ್ಕರ ತಂತ್ರಜ್ಞರ ಸಹಾಯ ಪಡೆಯುತ್ತಾರೆ.
ದೂರದ ದಿಂಡಿಗಲ್‌ನಿಂದ ಲೈಂಟಿಂಗ್, ಕೇರಳದ ಪೂಕೋಡಿನಿಂದ ಹೀಗೆ ವಿವಿಧೆಡೆಗಳಿಂದ ಬ್ಯಾಂಡ್‌ಗಳನ್ನು ಕರೆಸಲಾಗುತ್ತದೆ. ಹೀಗೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ತಯಾರಾದ ಮಂಟಪಗಳು ದಸರಾ ದಿನದಂದು ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ.
ಮಡಿಕೇರಿ ದಸರಾ ಶೋಭಯಾತ್ರೆಗಳಲ್ಲಿ ಶ್ರೀ ಪೇಟೆ ರಾಮಮಂದಿರ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀ ದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಸಾಗುತ್ತವೆ. ಈ ಮಂಟಪಗಳು ಒಂದಕ್ಕಿಂತ ಒಂದು ಅದ್ಧೂರಿಯಾಗಿ ನಿರ್ಮಾಣವಾಗುತ್ತವೆ.
ಮೈಸೂರು ಮಹಾರಾಜರಂತೆ ದಸರಾ ಆಚರಣೆ: ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದ್ದು, ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಇತಿಹಾಸದ ಮೆಲುಕು ಹಾಕಿದರೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ.
1781ರಿಂದ 1809ರ ವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರಂತೆ. ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃ ಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳ ಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು.
ಅವತ್ತಿನ ಜಂಬೂಸವಾರಿ ಹೇಗಿರುತ್ತಿತ್ತು ಗೊತ್ತಾ?: ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.
ಜೊತೆಗೆ ವಿಜಯದಶಮಿಯಂದು ಎಲ್ಲೆಡೆ ದೇವಾಲಯಗಳಲ್ಲಿ ಭಜನೆ, ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಉತ್ಸವಗಳು ನಡೆಯುತ್ತಿದ್ದವು. ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭ ಆಗುತ್ತಿತ್ತು.
ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದೆಡೆ ಮಹಾರಾಜರನ್ನು ಹೊತ್ತ ಆನೆ ಹೀಗೆ ಎರಡು ಆನೆಗಳು ಮುನ್ನಡೆದರೆ ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.
1834ರ ಬಳಿಕ ಆಚರಣೆಯಲ್ಲಿ ಬದಲಾವಣೆ: ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ. 1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜನನ್ನು ಬ್ರಿಟೀಷರು ಸೆರೆಹಿಡಿದರು. ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರೆಸಿದವು.
ಅಲ್ಲದೆ, ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು.
ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು.
ದಸರಾಕ್ಕೆ ಮೆರಗು ತಂದ ದಶಮಂಟಪಗಳು: ಹಾಗೆನೋಡಿದರೆ ಹಾಲೇರಿ ವಂಶಸ್ಥರ ಕಾಲದಿಂದ ಆರಂಭಗೊಂಡ ಮಡಿಕೇರಿ ದಸರಾ ನಂತರದ ಕಾಲದಲ್ಲಿ ನಿಲ್ಲದೆ ಮುಂದುವರೆಯುತ್ತಾ ಬಂದಿರುವುದು ಇತಿಹಾಸವೇ ಎನ್ನಬೇಕು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಗ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಉತ್ಸವವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ನಿಲ್ಲಲಿಲ್ಲವಂತೆ. ಮುಂದೆ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿಯೂ ಕರಗವನ್ನು ಹೊರಡಿಸುವುದು ನಿಲ್ಲಲಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಮಡಿಕೇರಿ ದಸರಾ ಅಭಿವೃದ್ಧಿಯತ್ತ ಸಾಗತೊಡಗಿತು.
ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಾಸ್ತಾನದಿಂದ ಬಂದು ಮಡಿಕೇರಿಯ ನೆಲೆಸಿದ್ದ ಭೀಮ್‌ಸಿಂಗ್ ರವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು.
ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಭತ್ತು ಆಯಿತು. ಬಳಿಕ ಹನ್ನೊಂದಕ್ಕೆ ಏರಿತಾದರೂ ದಸರಾ ಸಮಿತಿ ಮಂಟಪದ ಸಂಖ್ಯೆಯನ್ನು ಹತ್ತಕ್ಕೆ ಸೀಮಿತಗೊಳಿಸಿದೆ.
1969ರಲ್ಲಿ ಜನೋತ್ಸವವಾದ ದಸರಾ: ಅವತ್ತು ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನು ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ.ಕೆ.ಎಸ್.ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸುವ ಮೂಲಕ ಭಜನಾ ಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications