ಕೊಡಗಿನಲ್ಲಿ ಕಮಲ ಕಲಿಗಳಿಂದ ಆತ್ಮಾವಲೋಕನ: ಸೋಲಿಗೆ ಕಾರ್ಯಕರ್ತರು ನೀಡಿದ ಕಾರಣಗಳೇನು?
ಕೊಡಗು ಮೇ 19: ಕೊಡಗಿನಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಬಿಜೆಪಿಯ ಹಿಡಿತದಲ್ಲಿದ್ದ ವಿಧಾನಸಭಾ ಕ್ಷೇತ್ರಗಳು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದೆ. ಹೀಗಾಗಿ ಪತರಗುಟ್ಟುತ್ತಿರುವ ಕಮಲಕಲಿಗಳು ಎಲ್ಲಿ ತಪ್ಪಾಯಿತು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.
ಇಲ್ಲಿ ಹಾಲಿ ಶಾಸಕರು ಸೋಲು ಕಂಡಿದ್ದರೂ ಕೂಡ ಸೋಲಿನ ಹೊಣೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸೋಲಿಗೆ ಕಾರಣಗಳನ್ನು ಹುಡುಕಿಕೊಂಡು ಅದನ್ನು ಸರಿಪಡಿಸಿಕೊಂಡು ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ತಕ್ಷಣದಿಂದಲೇ ಮಾಡಲು ಒಮ್ಮತದ ನಿರ್ಧಾರಕ್ಕೆ ಬಂದಿರುವುದು ಹೊಸ ಬೆಳವಣಿಗೆಯಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಅದು ಭದ್ರವಾಗಿದೆಯಾ ಎಂಬುದು ಮುಂದೆ ಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಗೊತ್ತಾಗಬೇಕಿದೆ. ಗ್ರಾಪಂ ಮಟ್ಟದಿಂದ ಜಿಪಂ ವರೆಗೆ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಬೇಕಾದರೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ವರ್ಚಸ್ಸನ್ನು ಮರುಸ್ಥಾಪಿಸಿ ಕೊಡಗು ಬಿಜೆಪಿಯ ಭದ್ರಕೋಟೆ ಎಂಬ ಸಂದೇಶವನ್ನು ರವಾನಿಸುವ ಅಗತ್ಯತೆ ನಾಯಕರಿಗೆ ಬಹುಮುಖ್ಯವಾಗಿದೆ.
ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಚುನಾವಣೆ ಮುಗಿದು ಫಲಿತಾಂಶ ಬಂದ ಮಾರನೆಯ ದಿನದಿಂದಲೇ ಪಕ್ಷ ಸಂಘಟನೆಗಿಳಿಯುತ್ತದೆ. ಆ ಕೆಲಸವನ್ನು ಕೊಡಗಿನಲ್ಲಿ ಮಾಡುವ ತೀರ್ಮಾನಕ್ಕೆ ನಾಯಕರು ಬಂದಂತೆ ಕಾಣಿಸುತ್ತದೆ. ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಆತ್ಮಾವಕೋಕನ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ.

ಸೋಲಿಗೆ ಕಾರಣಗಳ ಪಟ್ಟಿ ನೀಡಿದ ಕಾರ್ಯಕರ್ತರು
ಈ ನಡುವೆ ವೀರಾಜಪೇಟೆಯಲ್ಲಿ ಆತ್ಮಾವಲೋಕನ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಪರಾಜಿತ ಅಭ್ಯರ್ಥಿ ಕೆ.ಜಿ.ಬೋಪಯ್ಯ, ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಮಾಜಿ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿಯ ಚುನಾವಣಾ ಉಸ್ತುವಾರಿ ರವೀಂದ್ರ, ಅಕ್ರಮ ಸಕ್ರಮ ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ, ತಾಲೂಕು ಮಹಿಳಾ ಅಧ್ಯಕ್ಷರು, ಎಸ್ ಟಿ ಅಧ್ಯಕ್ಷರು, ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದು, ಸಭೆಯಲ್ಲಿ ಕಾರ್ಯಕರ್ತರು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾರ್ಯಕರ್ತರು ದೊಡ್ಡದಾದ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಅವರ ಪ್ರಕಾರ ಸೋಲಿಗೆ ಪ್ರಮುಖ ಕಾರಣ ಅಡ್ಡಂಡ ಕಾರ್ಯಪ್ಪ ಅವರ ಅಸಂಬದ್ಧ ಭಾಷಣ, ಕಾರ್ಯಕರ್ತರಲ್ಲಿ ಹೊಂದಾಣಿಕೆ ಕೊರತೆ, ಕೆಲವು ಮುಖಂಡರ ತಟಸ್ಥ ಧೋರಣೆ, ಶಾಸಕರ ಕೆಲವು ಆಪ್ತರ ವಿಚಿತ್ರ ನಡವಳಿಕೆ ಅಷ್ಟೇ ಅಲ್ಲದೆ, ಜಿಲ್ಲಾಧ್ಯಕ್ಷರು ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಹಾಗೂ ಪಕ್ಷದ ಕೆಲಸದಲ್ಲಿ ಅವರು ತೋರಿರುವ ಅಸಡ್ಡೆ ಹೀಗೆ ಹತ್ತಾರು ಆರೋಪಗಳನ್ನು ಮಾಡಿದ್ದು, ಇದೆಲ್ಲವೂ ಬಿಜೆಪಿಯ ಸೋಲಿಗೆ ಕಾರಣವಾಯಿತು ಎಂಬುದನ್ನು ಬಹಿರಂಗವಾಗಿಯೇ ಕಾರ್ಯಕರ್ತರು ಹೇಳಿದ್ದಾರೆ.

ಮುಂದೆ ಪಕ್ಷವನ್ನು ಬಲಪಡಿಸೋಣ
ಕಾರ್ಯಕರ್ತರ ಆಕ್ರೋಶ, ಆರೋಪಗಳೆಲ್ಲವನ್ನು ಶಾಂತ ಚಿತ್ತವಾಗಿಯೇ ಆಲಿಸಿದ ಪರಾಜಿತ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರು ಕಾರ್ಯಕರ್ತರು ಎಲ್ಲರೂ ಕೂಡ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತ ನಮ್ಮ ಪಕ್ಷಕ್ಕೆ ದೊರಕಿದೆ. ಆದರೆ ಪಕ್ಷದೊಳಗಿನ ಹೊಂದಾಣಿಕೆಯ ಕೊರತೆಯಿಂದ ಇನ್ನಷ್ಟು ಮತಗಳನ್ನು ಪಡೆಯುವಲ್ಲಿ ನಾವು ವಿಫಲರಾಗಿ ಸೋಲು ಕಾಣುವಂತಾಗಿದೆ. ಇದರ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಮುಂದೆ ಪಕ್ಷವನ್ನು ಬಲಪಡಿಸೋಣ. ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ಒಗ್ಗಟ್ಟು ತೋರಿಸೋಣ ಎನ್ನುವ ಮೂಲಕ ಕಾರ್ಯಕರ್ತರನ್ನು ಸಮಾಧಾನಗೊಳಿಸಿದ್ದಾರೆ.
ಸಭೆಯ ಕೊನೆಯಲ್ಲಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ನಾನು ಪ್ರಾಮಾಣಿಕವಾಗಿ ಪಕ್ಷದಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ. ನಾನು ಯಾವುದೇ ರೀತಿಯ ಅಸಡ್ಡೆ ಮನೋಭಾವನೆಯನ್ನು ತೋರಿಲ್ಲ. ಪಕ್ಷದ ಕಾರ್ಯಕರ್ತರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದೇನೆ ಮುಂದೆಯೂ ಪಕ್ಷದ ಬಲ ವರ್ಧನೆಗೆ ಅವಿರತ ಶ್ರಮವನ್ನು ಪಡುತ್ತೇನೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ ನೀವೆಲ್ಲ ಬಯಸಿದ್ದರೆ ಈಗಲೇ ನಾನು ನನ್ನ ರಾಜೀನಾಮೆಯನ್ನು ನೀಡುತ್ತೇನೆ ಎಂದು ಹೇಳಿದರು.
ಬಿಜೆಪಿಯ ಮುಂದಿನ ಕಾರ್ಯತಂತ್ರವೇನು?
ಜಿಲ್ಲಾಧ್ಯಕ್ಷರ ಮಾತಿಗೆ ಪ್ರತಿಕ್ರಿಯೆ ನೀಡಿದ ಕಾರ್ಯಕರ್ತರು ನೀವು ರಾಜೀನಾಮೆ ನೀಡುವುದು ಬೇಡ ಸೋಲಿಗೆ ಕಾರಣಗಳು ದೊರಕಿದ್ದು, ಮುಂದಿನ ದಿನಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವುದರೊಂದಿಗೆ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೊಡಗು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಲು ಪಣತೊಡೋಣ ಎಂದಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications