ಮಡಿಕೇರಿಯಲ್ಲಿ ‘ಕೈ’ ಅಭ್ಯರ್ಥಿಗೆ ಶತ್ರು ಜೆಡಿಎಸ್-ಬಿಜೆಪಿಯಲ್ಲ ಮತ್ಯಾರು?
ಮಡಿಕೇರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಂದು ಹೋದ ಬೆನ್ನಲ್ಲೇ ಕೊಡಗಿನ ಕಾಂಗ್ರೆಸ್‌ನಲ್ಲಿದ್ದ ಬಂಡಾಯವನ್ನು ಶಮನ ಮಾಡುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದ್ದ ನಾಯಕರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದು ಬಿಜೆಪಿಯನ್ನು ಬಗ್ಗು ಬಡಿಯುವ ಘೋಷಣೆ ಮಾಡಿದ್ದಾರೆ.
ಆದರೆ, ಈ ಘೋಷಣೆ ನಿಜಕ್ಕೂ ಮುಕ್ತ ಮನಸ್ಸಿನಿಂದ ಬಂದಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿರುವ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿದೆ ಎಂಬಂತೆ ಕಂಡು ಬರುತ್ತಿದೆಯಾದರೂ ಇದು ತಾತ್ಕಾಲಿಕ ಶಮನದ ಮದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಟಿಕೆಟ್ ಆಕಾಂಕ್ಷಿಗಳಾಗಿದ್ದವರಲ್ಲಿ ಅಸಮಾಧಾನ ಒಳಗೊಳಗೇ ಹೊಗೆಯಾಡುತ್ತಿದೆ ಎಂಬುದು ಸತ್ಯ. ಬಂಡಾಯ ಎದ್ದವರಿಗೆ ಪಕ್ಷದಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡುವ ಭರವಸೆಯನ್ನು ನೀಡಲಾಗಿದೆ. ಹೀಗಾಗಿ ಅವರು ತಣ್ಣಗಾಗಿದ್ದಾರೆ ಎನ್ನಲಾಗುತ್ತಿದೆ.

ಚಂದ್ರಕಲಾಗೆ ಸವಾಲು
ಈ ನಡುವೆ ಬಂಡಾಯ ಎದ್ದಿದ್ದ ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ತಾವು ಸಂಘಟಿಸಿದ ಪಕ್ಷಕ್ಕೆ ಧಕ್ಕೆಯಾಗಬಾರದು ಮತ್ತು ಜಾತ್ಯತೀತ ಮತಗಳು ಹಂಚಿ ಹೋಗಬಾರದು ಎಂಬ ಉದ್ದೇಶದಿಂದ ಬಂಡಾಯವಾಗಿ ತಾವು ಸಲ್ಲಿಸಿದ ನಾಮಪತ್ರವನ್ನು ಹಿಂಪಡೆದಿರುವುದಾಗಿ ಹೇಳುವ ಮೂಲಕ ತಾವು ಕಾಂಗ್ರೆಸ್‌ನೊಂದಿಗೆ ಇದ್ದೇನೆ ಎಂಬುದಾಗಿ ಹೇಳಿದ್ದಾರೆ.

ನಾಪಂಡ ಮುತ್ತಪ್ಪ ಅಸಮಾಧಾನ
ನಾಪಂಡ ಮುತ್ತಪ್ಪ ಬೆಂಬಲ ಜತೆಯಲ್ಲೇ ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ತಮಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಕೊನೆಯ ಕ್ಷಣದಲ್ಲಿ ಅದು ಬೇರೆಯವರ ಪಾಲಾಯಿತು. ಬಿಜೆಪಿಯನ್ನು ಸೋಲಿಸಲೇಬೇಕೆಂದು ಕೆಲಸ ಮಾಡಿದ್ದ ತಮಗೆ ಟಿಕೆಟ್ ಸಿಗದ ಕಾರಣ ಬಂಡಾಯವಾಗಿ ನಾಮಪತ್ರ ಸಲ್ಲಿಸಬೇಕಾಯಿತು ಎಂದು ನೋವು ಹಂಚಿಕೊಂಡಿದ್ದಾರೆ.
'ನಾನು ಕಾರ್ಯಕರ್ತರ ಬಳಿ ಇರುವ ನಾಯಕ. ಪಕ್ಷದೊಳಗಿರುವ ಡೋಂಗಿ ನಾಯಕರು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ' ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತಮ ಸ್ಥಾನಮಾನದ ಭರವಸೆ
'ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಅನಿವಾರ್ಯವಾಗಿ ಬೆಂಬಲ ನೀಡಬೇಕಾಗಿದೆ. ನಮ್ಮ ಕಾರ್ಮಿಕ ಘಟಕದಲ್ಲಿ 21 ಲಕ್ಷ ಸದಸ್ಯರಿದ್ದು, ನನ್ನ ಅಧ್ಯಕ್ಷತೆಯ ಸಂಘಟನೆಯಲ್ಲಿ 3.50 ಲಕ್ಷ ಸದಸ್ಯರಿದ್ದಾರೆ. ಇವರ ಹಿತವನ್ನು ಕಾಯುವ ಉದ್ದೇಶದಿಂದ ನಾಮಪತ್ರ ಹಿಂಪಡೆದೆ' ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬಂಡಾಯ ಅಭ್ಯರ್ಥಿಗಳಿಗೆ ರಾಜ್ಯ ನಾಯಕರು ಡಿಸಿಸಿ ಜಿಲ್ಲಾಧ್ಯಕ್ಷ ಅಥವಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಭರವಸೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು. ನಾಪಂಡ ಮುತ್ತಪ್ಪ ಅವರು ಇನ್ನೆರಡು ತಿಂಗಳಿನಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ.
ಚುನಾವಣೆ ಕಳೆಯುವ ತನಕ ಒಗ್ಗಟ್ಟಿನ ಮಂತ್ರದ ಜಪ ನಡೆದರೂ ಬಳಿಕ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳಿವೆ.

ತ್ರಿಕೋನ ಪೈಪೋಟಿ ಸಾಧ್ಯತೆ
ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಪಿ.ಚಂದ್ರಕಲಾ ಮತ್ತು ಜೆಡಿಎಸ್‍ನ ಬಿ.ಎ.ಜೀವಿಜಯ, ಬಿಜೆಪಿಯ ಅಪ್ಪಚ್ಚುರಂಜನ್ ಎಲ್ಲರೂ ಸೋಮವಾರಪೇಟೆ ತಾಲ್ಲೂಕಿನವರೇ ಆಗಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ ಅಪ್ಪಚ್ಚುರಂಜನ್ ಹೊರತು ಪಡಿಸಿ ಉಳಿದವರಿಗೆ ಹೆಚ್ಚಿನ ಹಿಡಿತವಿಲ್ಲ. ಸೋಮವಾರಪೇಟೆ ಮತ್ತು ಮಡಿಕೇರಿಯಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಆದರೂ ಮಡಿಕೇರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬಂದಿದೆ.

ನಾಣಯ್ಯನಿಂದ ಬಲ ಸಿಕ್ಕೀತೇ?
ಹಿರಿಯನಾಯಕ ಎಂ.ಸಿ.ನಾಣಯ್ಯ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಬಂದಿರುವುದು ನಮಗೆ ಶಕ್ತಿ ನೀಡಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಹೇಳಿಕೊಂಡಿದ್ದಾರೆ. ಆದರೆ ಎಂ.ಸಿ.ನಾಣಯ್ಯ ಅವರು ಇಳಿ ವಯಸ್ಸಿನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಅವರ ನಾಯಕತ್ವ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಲಾಭ ತಂದುಕೊಡುತ್ತೆ ಎನ್ನುವುದು ಚುನಾವಣೆ ಬಳಿಕವಷ್ಟೆ ಗೊತ್ತಾಗಬೇಕಿದೆ.
ಏನೇ ಆದರೂ ಈ ಬಾರಿ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಶತ್ರುವಾಗಿರುವುದು ಬಿಜೆಪಿ ಮತ್ತು ಜೆಡಿಎಸ್ ಅಲ್ಲ. ಬದಲಿಗೆ ಸ್ವಪಕ್ಷದವರೇ ಎನ್ನುವುದು ಅನೇಕರ ಅಭಿಪ್ರಾಯ. ಕೆ.ಪಿ.ಚಂದ್ರಕಲಾ ಎಲ್ಲರ ಮನವೊಲಿಸಿ ಗೆಲುವು ಸಾಧಿಸುತ್ತಾರೆಯೇ ಎಂಬುದು ಕುತೂಹಲವಾಗಿದೆ.












Click it and Unblock the Notifications