ಮಡಿಕೇರಿಯ ಮಾಂದಲಪಟ್ಟಿಯಲ್ಲಿ ಜೀಪು ಚಾಲಕರಿಂದ ಪ್ರವಾಸಿಗರ ಸುಲಿಗೆ
ಮಡಿಕೇರಿ: ಕಳೆದೊಂದು ದಶಕಗಳಿಂದ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಸುಲಿಗೆ ಮಾಡುವ ಕಾರ್ಯವೂ ಯಥೇಚ್ಛವಾಗಿ ನಡೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅದರಲ್ಲೂ ಮಾಂದಲಪಟ್ಟಿಯಲ್ಲಿ ಇದು ತುಸು ಹೆಚ್ಚು ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಎಲ್ಲ ಬೆಟ್ಟಗಳಂತೆ ಇದ್ದ ಈ ಬೆಟ್ಟಕ್ಕೆ ದನ ಮೇಯಿಸುವವರು, ಶಿಕಾರಿಗೆ ತೆರಳುವವರು ಹೋಗುತ್ತಿದ್ದರಷ್ಟೆ. ಇಲ್ಲಿ ಕಾಳಚಂಡ ರವಿತಮ್ಮಯ್ಯ ಎಂಬುವರು ಗುಡ್ಡಗಾಡು ಕ್ರೀಡಾಕೂಟವನ್ನು ಆರಂಭಿಸಿದ ಬಳಿಕ ಇದರ ಖ್ಯಾತಿ ಹೆಚ್ಚಾಯಿತು. ಅದರಲ್ಲೂ ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆ ಹೆಸರಿನಲ್ಲಿ ನಿಸರ್ಗದ ಸೊಬಗನ್ನು ಪರಿಚಯಿಸಿದ ಬಳಿಕ ಇದರ ಖ್ಯಾತಿ ಇಮ್ಮಡಿಸಿತು. ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಪರಿಣಾಮ ದೂರದಿಂದ ಬಂದವರನ್ನು ಯಾಮಾರಿಸಲು ಕೆಲವರು ಸಜ್ಜಾಗಿಬಿಟ್ಟರು.

ಮಡಿಕೇರಿಯಲ್ಲಿ ಬಾಡಿಗೆಗಾಗಿ ನಿಲ್ಲುತ್ತಿದ್ದ ಜೀಪುಗಳು ಮಾಂದಲಪಟ್ಟಿಯತ್ತ ಮುಖಮಾಡಿದವು ದೂರದಿಂದ ಬರುವ ಪ್ರವಾಸಿಗರನ್ನು ಮಾಂದಲಪಟ್ಟಿಗೆ ಕರೆದೊಯ್ಯುವ ಕಾಯಕಕ್ಕಿಳಿದವು. ಜತೆ ಜತೆಯಲ್ಲೇ ಒಂದಕ್ಕೆ ಎರಡು ಶುಲ್ಕ ವಸೂಲಿ ಮಾಡಲು ಆರಂಭಿಸಿದರು. ಮೊದಲೆಲ್ಲ ಇಲ್ಲಿಗೆ ಒಂದೋ ಎರಡೋ ಜೀಪುಗಳು ಹೋಗುತ್ತಿದ್ದವಾದರೂ ಈಗ ಸುಮಾರು 40 ಜೀಪುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಾಲುಗಟ್ಟಿ ನಿಲ್ಲುತ್ತಿವೆ.
ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರು ತಮ್ಮ ವಾಹನದಲ್ಲೇ ಬಂದರೂ ನಂದಿಮೊಟ್ಟೆ ಎಂಬಲ್ಲಿ ವಾಹನವನ್ನು ನಿಲ್ಲಿಸಿ ಅಲ್ಲಿಂದ ಜೀಪುಗಳಲ್ಲೇ ಸಾಗುವುದು ಅನಿವಾರ್ಯ. ಪ್ರವಾಸಿಗರನ್ನು ಏರು ರಸ್ತೆಯಲ್ಲಿ ಕರೆದೊಯ್ಯುವ ಜೀಪು ಚಾಲಕರು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ನಡುವೆ ಜೀಪು ಚಾಲಕರು ಮತ್ತು ಸ್ಥಳೀಯ ಗ್ರಾಮಸ್ಥರ ನಡುವೆ ಜಟಾಪಟಿ ಆರಂಭವಾಗಿದ್ದು, ಜೀಪು ಚಾಲಕರ ವಿರುದ್ಧ ಸ್ಥಳೀಯ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಾರೆ, ಅತೀ ವೇಗದಿಂದ ಜೀಪು ಚಾಲನೆ ಮಾಡುತ್ತಾರೆ, ಇದರಿಂದ ರಸ್ತೆ ಹಾಳಾಗುತ್ತಿದೆ ಹೀಗೆ ಹತ್ತಾರು ಕಾರಣಗಳನ್ನು ನೀಡುವ ಗ್ರಾಮಸ್ಥರು ನಂದಿಮೊಟ್ಟೆಯಲ್ಲಿ ಜೀಪು ನಿಲುಗಡೆಗೆ ಅವಕಾಶ ಮಾಡಿಕೊಡಬೇಡಿ ಎಂಬ ಒತ್ತಾಯವನ್ನು ಮಾಡುತ್ತಿದ್ದಾರೆ.
ಆದರೆ ಇದನ್ನೆಲ್ಲ ತಳ್ಳಿಹಾಕುತ್ತಿರುವ ಜೀಪು ಚಾಲಕರು ಗ್ರಾಮಸ್ಥರ ಆರೋಪದಲ್ಲಿ ಹುರುಳಿಲ್ಲ ಎನ್ನುತ್ತಿದ್ದಾರೆ. ಕಳೆದ ಕೆಲವು ಸಮಯಗಳಿಂದ ಗ್ರಾಮಸ್ಥರು ಮತ್ತು ಜೀಪು ಚಾಲಕರ ನಡುವೆ ಅಸಮಾಧಾನ ಮುಂದುವರೆದಿದ್ದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ. ಆದರೆ ಸ್ವತಃ ಪ್ರವಾಸಿಗರೇ ಹೇಳುವಂತೆ ಜೀಪು ಚಾಲಕರಿಂದ ಸುಲಿಗೆಯಂತೂ ನಡೆಯುತ್ತಿರುವುದು ಸತ್ಯ.
ಈ ಬಗ್ಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಪ್ರವಾಸಿಗರ ಸೆಳೆಯುವಂತಿರಬೇಕೇ ಹೊರತು ಸುಲಿಗೆಯ ಕೇಂದ್ರವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ.












Click it and Unblock the Notifications