ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡರೆ ಜೈಲು ಶಿಕ್ಷೆ, ದಂಡ ಎಷ್ಟು?
ಮಡಿಕೇರಿ, ಏಪ್ರಿಲ್ 7: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಭೂ ಮಾಫಿಯಾದ ಕೈವಾಡ ಸಹ ಹೆಚ್ಚಾಗುತ್ತಿದೆ. ನಕಲಿ ದಾಖಲೆಗಳ ಮೂಲಕ ಗೋಮಾಳ, ಕೆರೆ, ರಾಜ ಕಾಲುವೆ ಹೀಗೆ ವಿವಿಧ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದರೆ ಯಾವ ಶಿಕ್ಷೆ? ಎಂಬ ಕುರಿತು ಮಾಹಿತಿ ಇಲ್ಲಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದ ಅಡಿ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಬಿ. ಎ. ಪಾಟೀಲ್ ಈ ಕಾರ್ಯಾಗಾರದಲ್ಲಿ ಮಾತನಾಡಿ, ಸರ್ಕಾರಿ ಭೂಮಿ ಕಬಳಿಕೆ ಕುರಿತು ಹಲವು ಮಾಹಿತಿಗಳನ್ನು ತಿಳಿಸಿಕೊಟ್ಟರು. ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಕರೆ ನೀಡಿದರು.
ಸರ್ಕಾರಿ ಭೂಮಿ ಒತ್ತುವರಿ ಶಿಕ್ಷೆ ಏನು?; ಬಿ. ಎ. ಪಾಟೀಲ್ ಮಾತನಾಡಿ, "ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತಿ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ. ಭೂ ಕಬಳಿಕೆ ಅಥವಾ ಒತ್ತುವರಿ ಎಲ್ಲಿ ಮಾಡಿದ್ದಾರೆ?, ಅಲ್ಲಿ ಜಗಳ ಇರುತ್ತದೆ. ಸಾಕಷ್ಟು ಕಾನೂನುಗಳಿದ್ದರೂ ಸಹ ಭೂ ಕಬಳಿಕೆ ನಿಂತಿಲ್ಲ" ಎಂದರು.
"ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುವುದರಿಂದ ಭೂಮಾಫಿಯ ಹೆಚ್ಚಾಗಿದೆ. ಗೋಮಾಳ, ಕೆರೆಕಟ್ಟೆ, ಹಳ್ಳಕೊಳ್ಳ, ರಾಜ ಕಾಲುವೆ ಸೇರಿದಂತೆ ಎಲ್ಲವನ್ನು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ತಡೆಯುವುದು ವಿವಿಧ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಭೂ ಕಬಳಿಕೆ ಹೆಚ್ಚಾಗಿರುವುದಕ್ಕೆ ಪ್ರಮುಖ ಕಾರಣ ಕಾರಣ ಶಿಕ್ಷೆ ಪ್ರಮಾಣ ಕಡಿಮೆ ಎಂದರೆ ತಪ್ಪಾಗಲಾರದು. ಮೂರು ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ಇದ್ದರೂ ಸಹ ಭೂ ಕಬಳಿಕೆಗೆ ಮುಂದಾಗುತ್ತಿದ್ದಾರೆ" ಎಂದು ಹೇಳಿದರು.
"ಒತ್ತುವರಿ ಮಾಡಿರುವ ಅಥವಾ ಭೂ ಕಬಳಿಕೆ ಮಾಡಿರುವ ಆಸ್ತಿಯನ್ನು ಮಾರುತ್ತಾರೆ. ಆ ನಿಟ್ಟಿನಲ್ಲಿ ಕೊಳ್ಳುವವರು ಯೋಚಿಸಬೇಕು. ಜೊತೆಗೆ ಪರಾಮರ್ಶಿಸಬೇಕು. ಸುಮ್ಮನೆ ಏಕಾಏಕಿ ಭೂಮಿ ಕೊಳ್ಳುವುದು ಸರಿಯಲ್ಲ" ಎಂದು ಸಲಹೆ ಕೊಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, "ಕುರುಕ್ಷೇತ್ರ ಯುದ್ಧ ನಡೆದಿರುವುದೇ ಭೂಮಿಗಾಗಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅನಾದಿಕಾಲದಿಂದಲೂ ನೀರು, ಭೂಮಿಗಾಗಿ ಯುದ್ದಗಳೇ ನಡೆದಿವೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ" ಎಂದರು.
"ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಿದೆ. ಜೊತೆಗೆ ಜನರಲ್ಲಿ ದುರಾಸೆಯು ಸಹ ಹೆಚ್ಚಾಗಿದೆ. ಆದ್ದರಿಂದ ಭೂ ಕಬಳಿಕೆಯೂ ಸಹ ಅಧಿಕವಾಗುತ್ತಿದೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಣೆ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು" ಎಂದು ತಿಳಿಸಿದರು.
"ಮುಂಗಾರು ಸಂದರ್ಭದಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಆದ್ದರಿಂದ ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ಉಳಿಸುವುದು ಹಿಂದಿಗಿಂತ ಇಂದು ಹೆಚ್ಚಿನ ಅವಶ್ಯಕತೆಯಾಗಿದೆ. ಕಾವೇರಿ ನದಿ ಪಾತ್ರ ಹಾಗೂ ಮಲೆನಾಡು ಭಾಗದಲ್ಲಿ ಪ್ರಾಕೃತಿಕ ಸಂಪತ್ತು ಸಂರಕ್ಷಿಸುವುದರಿಂದ ಕೋಟ್ಯಾಂತರ ಜನರಿಗೆ ನೀರು ಮತ್ತು ಅನ್ನ ನೀಡಲು ಸಾಧ್ಯವಾಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಯೋಚಿಸಬೇಕು. ಪ್ರಕೃತಿಯನ್ನು ಉಳಿಸಲು ಶ್ರಮಿಸಬೇಕು" ಎಂದರು.
ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಎಲ್. ನಾರಾಯಣಸ್ವಾಮಿ ಮಾತನಾಡಿ, "ಒಂದು ಗೊತ್ತು ಪಡಿಸುವ ಪ್ರದೇಶ, ಗಡಿ ವಿಸ್ತೀರ್ಣ, ದಾರಿ, ಮತ್ತಿತರ ಬಗ್ಗೆ ಸರ್ವೆ ಮಾಡಲಾಗುತ್ತದೆ. 1863 ರಿಂದ 1879 ರವರೆಗೆ ಸರ್ವೆ ಕಾರ್ಯ ನಡೆದಿದ್ದು, 1906 ರಿಂದ 1912ರವರೆಗೆ ಗಡಿ ಗ್ರಾಮ ನಿಗದಿ ಮಾಡುವ ಸರ್ವೆ ನಡೆದಿದೆ. ಸರ್ಕಾರಿ ಭೂಮಿ ನಿಗದಿಪಡಿಸುವುದು, ಆಕಾರಬಂಧು ನಿಗದಿ ಮಾಡುವುದು, ಬಿ. ಖರಾಬು, ಗ್ರಾಮ ನಕಾಶೆ ಮತ್ತಿತರ ಮೂಲಕ ಸರ್ವೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ತಂತ್ರಾಂಶದ ಮೂಲಕ ಸರ್ವೆ ಕಾರ್ಯ ತಕ್ಷಣವೇ ಗುರುತಿಸಲಾಗುತ್ತದೆ" ಎಂದು ಹೇಳಿದರು.
"ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟಾಗಿ ಭೂ ಕಬಳಿಕೆ ಮತ್ತು ಭೂ ಒತ್ತುವರಿ ಇರಲಿಲ್ಲ. ಸ್ವಾತಂತ್ರ್ಯ ನಂತರ ಭೂ ಒತ್ತುವರಿ ಹೆಚ್ಚಾಗಿ ನಡೆಯುತ್ತಿದೆ. ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳು, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದಕ್ಕೂ ಸಹ ಜಮೀನು ಬೇಕಿದ್ದು, ಇರುವ ಅಲ್ಪಸ್ವಲ್ಪ ಜಮೀನನ್ನಾದರೂ ಉಳಿಸಬೇಕಿದೆ" ಎಂದರು.












Click it and Unblock the Notifications