ಸ್ವಾತಂತ್ರ್ಯ ದಿನಾಚರಣೆ; ಕೊಡಗಿನಲ್ಲಿ 'ನನ್ನ ಮಣ್ಣು, ನನ್ನ ದೇಶ' ಅಭಿಯಾನ
ಮಡಿಕೇರಿ, ಆಗಸ್ಟ್ 07; ಸ್ವಾತಂತ್ರ್ಯ ದಿನಾಚರಣೆ 2023ರ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮೇರಿ ಮಾಟಿ ಮೇರಿ ದೇಶ್ (ನನ್ನ ಮಣ್ಣು, ನನ್ನ ದೇಶ) ಎಂಬ ಅಭಿಯಾನ ನಡೆಯಲಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಈ ಕುರಿತು ಮಾಹಿತಿ ನೀಡಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ 'ನನ್ನ ಮಣ್ಣು, ನನ್ನ ದೇಶ' ಎಂಬ ಅಭಿಯಾನದ ಮೂಲಕ ಸಸಿಗಳನ್ನು ನೆಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಪಂಚ್ ಪ್ರಾಣ್ ಪ್ರತಿಜ್ಞೆಯನ್ನು ಬೋಧಿಸುವುದು, ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವನ್ನು ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತಿದೆ.
ಅರ್ಥಪೂರ್ಣವಾಗಿ ಆಚರಣೆ; ಆಗಸ್ಟ್ 15ರ ಮಂಗಳವಾರ ಸಂಭ್ರಮ ಮತ್ತು ಸಡಗರದೊಂದಿಗೆ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಳೆದ ಬಾರಿಯಂತೆ ನಗರದ ಕೋಟೆ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಸ್ವಾಗತ, ಧ್ವಜಾರೋಹಣ, ವೇದಿಕೆ, ಕವಾಯತು, ಉಪಾಹಾರ, ಭಾಷಣ, ಬಹುಮಾನ ಹೀಗೆ ವಿವಿಧ ಉಪ ಸಮಿತಿಗಳು ಕಳೆದ ಬಾರಿಯಂತೆ ತಮ್ಮ ಕೆಲಸಗಳನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸ್ವಾಗತ ಸಮಿತಿಯವರು ಶಿಷ್ಟಾಚಾರದಂತೆ ಆಹ್ವಾನ ಪತ್ರ ತಲುಪಿಸುವುದು ಮತ್ತಿತರ ಕಾರ್ಯವನ್ನು ನಿರ್ವಹಿಸಬೇಕು. ಧ್ವಜಾರೋಹಣ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಬೇಕು, ವೇದಿಕೆ ಸಮಿತಿಯವರು ಕಳೆದ ಬಾರಿಯಂತೆ ವಾಟರ್ ಪ್ರೂಫ್ ಶಾಮಿಯಾನ ನಿರ್ಮಾಣ ಮಾಡಬೇಕು ಎಂದು ಡಿಸಿ ನಿರ್ದೇಶನ ನೀಡಿದ್ದಾರೆ.
ಕಾರ್ಯಕ್ರಮದ ದಿನ ಕವಾಯತ್ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಆಯೋಜಿಸಬೇಕು, ತಾಲೀಮು ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಸಂಬಂಧಪಟ್ಟ ಸಮಿತಿಯವರು ವ್ಯವಸ್ಥೆ ಮಾಡಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಗ್ಯಾರಂಟಿ ಯೋಜನೆಗಳು ಹಾಗೂ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಪ್ರಕಟಿಸಿರುವ ಕಾರ್ಯಕ್ರಮಗಳ ಬಗ್ಗೆ ಭಾಷಣ ತಯಾರಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವನ್ನು ಗೌರವಿಸುವುದು, ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಡಿವೈಎಸ್‍ಪಿ ಜಗದೀಶ್ ಮಾತನಾಡಿ, ಕವಾಯತ್ ಸಂಬಂಧಿಸಿದಂತೆ ಪೊಲೀಸ್, ಎನ್‍ಸಿಸಿ, ಅರಣ್ಯ, ಗೃಹರಕ್ಷಕ ದಳ ಹೀಗೆ ವಿವಿಧ ತಂಡಗಳು ಪಾಲ್ಗೊಳ್ಳಲಿವೆ. 14 ಶಾಲೆಗಳ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ತಾಲೀಮು ನಡೆಯಲಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಬಾನ ಎಂ. ಶೇಕ್, ಕೃಷಿ ಸಾಧಕರಿಗೆ ಸನ್ಮಾನಿಸಬಹುದು ಎಂದು ಮಾಹಿತಿ ನೀಡಿದರು. ತಹಶೀಲ್ದಾರ್ ಪ್ರವೀಣ್ ಕುಮಾರ್ ಕಾರ್ಯಕ್ರಮಕ್ಕೆ ವಿವಿಧ ಗಣ್ಯರನ್ನು ಆಹ್ವಾನಿಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, "ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೈಜೋಡಿಸಬೇಕು. ಗಣ್ಯರನ್ನು ಆಹ್ವಾನಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ" ಸಲಹೆ ಕೊಟ್ಟರು.












Click it and Unblock the Notifications