ಚಿತ್ರಗಳು : ಕೊಡಗು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ
ಮಡಿಕೇರಿ, ಫೆಬ್ರವರಿ 17 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ಜನರಿಗೆ ರೋಟರಿ ಜಿಲ್ಲೆ ವತಿಯಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಇಗ್ಗೋಡ್ಲು ಗ್ರಾಮದಲ್ಲಿ ಫೆಬ್ರವರಿ 14 ರಂದು ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುತ್ತದೆ.
ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಮದೆ ಗ್ರಾಮದಲ್ಲಿ ವಿದೇಶಿ ತಂತ್ರಜ್ಞಾನ ಬಳಸಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆರ್‌ಜಿಎಚ್‌ಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಅಂಬುಕುಮಾರ್ ಅವರು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಯೂ ಮನೆ ನಿರ್ಮಾಣದ ಕುರಿತು ಚರ್ಚೆ ನಡೆದಿದೆ. ಭೂ ಕುಸಿತದಿಂದ ಹಾನಿಗೀಡಾದ ಪ್ರದೇಶದ ನಿರಾಶ್ರಿತರು ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಎಷ್ಟು, ಇವುಗಳಲ್ಲಿ ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಎಂದು ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಪ್ರಶ್ನಿಸಿದ್ದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈವರೆಗೂ 4064 ಅರ್ಜಿಗಳು ಸ್ವೀಕೃತಗೊಂಡಿದ್ದು, ಇವುಗಳಲ್ಲಿ 4024 ಜನರಿಗೆ ಪರಿಹಾರ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಸಚಿವರು ಉತ್ತರ ನೀಡಿದ್ದಾರೆ.

ಪರಿಹಾರ ವಿತರಣೆಯಾಗಿದೆ
ನಿರಾಶ್ರಿತರ ಪಟ್ಟಿಯಲ್ಲಿ ಮಡಿಕೇರಿ ತಾಲೂಕು 1955 ನಿರಾಶ್ರಿತರಾಗಿದ್ದು 1955 ಸಂಖ್ಯೆ ಪರಿಹಾರ ವಿತರಣೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 1548 ನಿರಾಶ್ರಿತರಾಗಿದ್ದು 1508 ನಿರಾಶ್ರಿತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 561 ನಿರಾಶ್ರಿತರಾಗಿದ್ದು, 561 ನಿರಾಶ್ರಿತರಿಗೆ ಪರಿಹಾರ ವಿತರಣೆಯಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 4064 ಹಾಗೂ 4024 ಪರಿಹಾರ ವಿತರಣೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಎಲ್ಲಾ ಕುಟುಂಬಗಳಿಗೂ ಮನೆ
ಮಳೆಯಿಂದ ಹಾನಿಗೀಡಾದ ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಡುವ ಕಾರ್ಯದಲ್ಲಿ ಇಲ್ಲಿಯವರೆಗೆ ಕಟ್ಟಲಾಗಿರುವ ಮನೆಗಳೆಷ್ಟು? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರವಾಹದಿಂದಾಗಿ 840 ಕುಟುಂಬಗಳು ಸಂತ್ರಸ್ತರಾಗಿದ್ದು, ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

770 ಮನೆಗಳು
840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸಲು ನಿರ್ಮಾಣ ಕಾರ್ಯವನ್ನು ಕರ್ನಾಟಕ ಹ್ಯಾಬಿಟೇಟ್ ಸಂಸ್ಥೆಗೆ ವಹಿಸಿದ್ದು, ಗ್ರಾಮವಾರು ಪಟ್ಟಿಯಲ್ಲಿ ಕರ್ಣಂಗೇರಿ 40, ಬಿಳಿಗೇರಿ 30, ಗಾಳಿಬೀಡು 125, ಮದೆ 175, ಜಂಬೂರು 400 ಮನೆ ನಿರ್ಮಿಸುತ್ತಿರುವ ಒಟ್ಟು ಮನೆಗಳ 770 ಮನೆ ನಿರ್ಮಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

48 ಲಕ್ಷ ಮೊತ್ತವನ್ನು ಬಾಡಿಗೆ ನೀಡಲಾಗಿದೆ
ಮನೆಗಳನ್ನು ಕಳೆದುಕೊಂಡ ಜನರಿಗೆ ತಿಂಗಳ ಲೆಕ್ಕದಲ್ಲಿ ಬಾಡಿಗೆ ಹಣವನ್ನು ನೀಡುವ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಎಷ್ಟು ಜನರಿಗೆ ಹಣ ಭರಿಸಲಾಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ 480 ಕುಟುಂಬಗಳಿಗೆ ಹಣ ನೀಡಲಾಗಿದ್ದು, ರೂ.48 ಲಕ್ಷ ಮೊತ್ತವನ್ನು ಬಾಡಿಗೆಗಾಗಿ ನೀಡಲಾಗಿದೆ ಎಂದು ಉತ್ತರಿಸಿದರು.












Click it and Unblock the Notifications